ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ದುಪ್ಪಟ ಹಾಕಿದ್ರೆ ತಪ್ಪೇನು…? ಬಿಜೆಪಿ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗು.

ಮೈಸೂರು,ಮಾರ್ಚ್,25,2022(www.justkannada.in): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತೆ ಗುಡುಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ್ಟ ತಲೆ ಹಾಕಿ ಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ.? ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ.? ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಮಾತನಾಡಿದ  ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಕೆಲ ವಿವಾದ ಸೃಷ್ಟಿಸಿ ಮತ ಕ್ರೂಢೀಕರಣ ಮಾಡಲು ಯತ್ನಿಸುತ್ತಿದೆ. ಮುಸ್ಲಿಂರಿಗೆ ವ್ಯಾಪಾರಕ್ಕೆ ನಿರ್ಬಂಧ ಹಾಕಿರೋದು ತಪ್ಪು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ವ್ಯಾಪಾರಕ್ಕೆ ನಿರ್ಬಂಧ ಹಾಕುವುದರ ಹಿಂದೆ ಬಿಜೆಪಿಯ ಅಜೆಂಡಾ ಅಡಗಿದೆ. ಮುಸ್ಲಿಂರಿಗೆ ವ್ಯಾಪಾರ ನಿರ್ಬಂಧ ವಿಚಾರದಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಲ್ಲ. ಬಿಜೆಪಿಯೇ ಈ ವಿಚಾರದಲ್ಲಿ ಇಕ್ಕಟಿಗೆ ಸಿಲುಕಿದೆ ಎಂದು ಹರಿಹಾಯ್ದರು.

ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ. ಮುಸ್ಲಿಂ ಹೆಣ್ಣು ಮಕ್ಕಳು ತಲೆಗೆ ದುಪ್ಪಟ ಹಾಕಿದ್ರೆ ತಪ್ಪೇನು…? ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದ ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದು ಕೊಂಡಿದೆ. ಆದರೆ, ಜನ ಬುದ್ದಿವಂತರು, ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ. ಸಂಘ ಪರಿವಾರದವರು ಅಲ್ಪ ಸಂಖ್ಯಾತರ ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡುತ್ತಾರೆ. ಮುಸ್ಲಿಂರು ಹಿಂದೂವಿ‌ನ ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡುತ್ತಾರೆ. ಇಂತಹ ತಾರತಮ್ಯ ಯಾಕೆ.? ಇಂತಹ ವರ್ತನೆಯಿಂದ ಮತ ಕ್ರೂಡೀಕರಣ ಆಗುತ್ತೆ ಎಂಬ ಬಿಜೆಪಿ ಲೆಕ್ಕ ಉಲ್ಟಾ ಆಗುತ್ತೆ ನೋಡಿ ಎಂದು ಟಾಂಗ್ ನೀಡಿದರು.

ಸ್ಪೀಕರ್ ನಿನ್ನೆ ಆ ಕುರ್ಚಿಯಲ್ಲಿ ಕೂತು ನಮ್ಮ ಆರ್ ಎಸ್ ಎಸ್ ಅಂದಿದ್ದು ತಪ್ಪು?

ಸ್ಪೀಕರ್ ನಿನ್ನೆ ಆ ಕುರ್ಚಿಯಲ್ಲಿ ಕೂತು ನಮ್ಮ ಆರ್ ಎಸ್ ಎಸ್ ಅಂದಿದ್ದು ತಪ್ಪು? ಸ್ಪೀಕರ್ ಆದ ತಕ್ಷಣ ಅವರು ಪಕ್ಷಾತೀತರಾಗಿ ಇರಬೇಕು. ಆದರೆ, ನಿನ್ನೆ ನಮ್ಮ ಆರ್ ಎಸ್ ಎಸ್ ಅಂದಿದ್ದು ಸರಿಯಲ್ಲ. ನಾವು ಯಾವಾಗಲೂ ಆರ್.ಎಸ್.ಎಸ್ ಗೆ ವಿರೋಧ. ಏಕೆಂದರೆ ಆರ್.ಎಸ್.ಎಸ್  ನದ್ದು ಮನುವಾದ ಸಂಸ್ಕೃತಿ. ಸ್ವಾತಂತ್ರ್ಯಕ್ಕೆ ಆರ್ ಎಸ್ ಎಸ್ ಹೋರಾಡಿಲ್ಲ.‌ ಸಮಾಜ ಒಡೆಯುವುದೇ ಆರ್.ಎಸ್.ಎಸ್ ಅಜೆಂಡಾ  ಇದಕ್ಕೆ ನಾನು ಆರ್.ಎಸ್.ಎಸ್ ವಿರೋಧಿಸುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: mysore-hijab-former CM-Siddaramaiah