ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಮೆನ್ಯೂ ಬದಲಾವಣೆ: ಬಯೋಮೆಟ್ರಿಕ್ ಬಳಸದ ಸಿಬ್ಬಂದಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಕ್ಲಾಸ್.

ಮೈಸೂರು,ಜೂನ್,27,2023(www.justkannada.in): ಮೈಸೂರು ಜಿಲ್ಲಾಸ್ಪತ್ರೆಯಲ್ಲಿ  ಕರ್ತವ್ಯಕ್ಕೆ ಗೈರು ಹಾಜರಾಗುವ ಹಾಗೂ ಬಯೋಮೆಟ್ರಿಕ್ ಬಳಸದ ಸಿಬ್ಬಂದಿಗಳ ವೇತನ ಖಡಿತಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳ ಜೊತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.  ಕೆ.ಆರ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಸಿಬ್ಬಂದಿಗಳ ಕೊರತೆ ಹಾಗೂ ಇತರೆ ಕೊರತೆಗಳ ಬಗ್ಗೆ ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ತುರ್ತು ಅಗತ್ಯತೆಗಳನ್ನು ಪೂರೈಸುವುದಾಗಿ ಭರವಸೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ಆಸ್ಪತ್ರೆಗೆ ಬೇಕಾದ ಅಗತ್ಯತೆಗಳನ್ನ ನೀಡ್ತಿವಿ. ಆದರೆ ಸೂಕ್ತವಾಗಿ ನಿರ್ವಹಣೆ ಮಾಡದಿದ್ದಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು  ಜಿಲ್ಲಾಸ್ಪತ್ರೆಯ ಸರ್ಜನ್ ಅಮರನಾಥ ಗೆ ಖಡಕ್ ಎಚ್ಚರಿಕೆ ನೀಡಿದರು.

ಇನ್ನು ಕರ್ತವ್ಯ ಹಾಜರಾಗದೆ, ಹಾಗೂ ಬಯೋಮೆಟ್ರಿಕ್ ಬಳಸದ ಸಿಬ್ಬಂದಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಬಯೋಮೆಟ್ರಿಕ್ ಬಳಸದೇ ಜಿಲ್ಲಾ ಶಸ್ತ್ರಚಿಕಿತ್ಸಾ ವೈದ್ಯಾಧಿಕಾರಿ ಡಾ. ಅಮರನಾಥ ಅವರು ಸಚಿವರ ಕೈಗೆ ಸಿಕ್ಕಿಬಿದಿದ್ದು, ಹಾಜರಾತಿ ಪರೀಕ್ಷೆ ಮಾಡ್ತಿದ್ದಂತೆ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ತಬ್ಬಿಬ್ಬಾದರು. ಗೈರು ಹಾಜರು ಹಾಗೂ ಬಯೋಮೆಟ್ರಿಕ್ ಬಳಸದ ಸಿಬ್ಬಂದಿಗಳ ವೇತನ ಖಡಿತಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಬ್ರೆಡ್ ಗಳ ಬದಲಾಗಿ ಬಿಸಿ ಆಹಾರ ನೀಡಲು ಸೂಚನೆ.

ಮೈಸೂರು ಜಿಲ್ಲಾಸ್ಪತ್ರೆಯಲ್ಲಿ ಮೆನ್ಯೂ ಬದಲಾವಣೆ ಮಾಡಲಾಗಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕೊಡಲಾಗುತ್ತಿದ್ದ ಬ್ರೆಡ್ ಗಳ ಬದಲಾಗಿ ಬಿಸಿ ಆಹಾರ ನೀಡಲು  ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ಹೀಗಾಗಿ ಇನ್ಮುಂದೆ ರೋಗಿಗಳಿಗೆ ಇಡ್ಲಿ, ಉಪ್ಪಿಟ್ಟು, ಚಿತ್ರಹ್ನ, ಪೊಂಗಲ್ ಸಿಗಲಿದೆ. ಆಸ್ಪತ್ರೆಗಳಲ್ಲಿ ಕೊಡುತ್ತಿದ್ದ ಬ್ರೆಡ್ ಗಳು ವೇಸ್ಟ್ ಆಗುತ್ತಿದ್ದವು. ಆಸ್ಪತ್ರೆಯ ಬ್ರೆಡ್ ಅನ್ನು ತಿನ್ನಲು ರೋಗಿಗಳು ಹಿಂದೇಟು ಹಾಕುತ್ತಿದ್ದರು. ಇದನ್ನು ಮನಗಂಡು  ಆಸ್ಪತ್ರೆಯ ಮೆನ್ಯೂ ಬದಲಾವಣೆಗೆ  ಸಚಿವರು ಸೂಚನೆ ನೀಡಿದರು.

ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೈಸೂರಿನ ಜಿಲ್ಲಾಸ್ಪತ್ರೆ ಸುಸಜ್ಜಿತವಾದ ಆಸ್ಪತ್ರೆ. ಆದರೆ ಇದು ಸರಿಯಾಗಿ ಉಪಯೋಗ ಆಗ್ತಿಲ್ಲ. ಇಷ್ಟೊ ದೊಡ್ಡ ಆಸ್ಪತ್ರೆಯಿದ್ದರೂ ರೋಗಿಗಳ ಸಂಖ್ಯೆ ಕಡಿಮೆ. ತಾಲೂಕು ಆಸ್ಪತ್ರೆಗಳಿಗಿಂತ ಇಲ್ಲಿ ಕಡಿಮೆ ರೋಗಿಗಳು ಇದ್ದಾರೆ. ಇಲ್ಲಿಗೆ ಸಿಟಿ ಸ್ಕ್ಯಾನಿಂಗ್, ಎಂಆರ್‌ ಐ, ಹಾಗೂ ಡಯಾಲಿಸಿಸ್ ಯುನಿಟ್ ಕೊಡಿಸಲಿದ್ದೇವೆ. ಆಸ್ಪತ್ರೆಗೆ ಶವಗಾರ ಹಾಗೂ ಮಕ್ಕಳಿಗೆ ಮೂಲಭೂತವಾಗಿ ಬೇಕಾದ ಐದು ಕಿಟ್ ಗಳನ್ನು ಶೀಘ್ರದಲ್ಲಿ ನೀಡಲಾಗುತ್ತದೆ. ಕೆ.ಆರ್ ಆಸ್ಪತ್ರೆಯ ಇ ಎನ್ ಟಿ ಯೂನಿಟ್ ಅನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗುವುದು. ಕೆ.ಆರ್ ಆಸ್ಪತ್ರೆಗಿಂತ ಇಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಇದೆ. ಈ ಆಸ್ಪತ್ರೆ ಮುಂದಿನ ಮೂರು ತಿಂಗಳುಗಳ ಕಾಲ ರಿವ್ಯೂನಲ್ಲಿ ಇರಲಿದೆ. ಆಸ್ಪತ್ರೆಗೆ ಸೂಕ್ತ ರೀತಿಯಲ್ಲಿ ಬೆಳವಣಿಗೆ ಹೊಂದಲಿಲ್ಲ ಅಂದರೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೋಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗೈರು ನನ್ನ ಗಮನಕ್ಕೆ ಬಂದಿದೆ. ಯಾರು ಗೈರು ಹಾಜರಾಗುತ್ತಾರೋ ಅವರ ವೇತನ ಖಡಿತಕ್ಕೆ ಸೂಚಿಸಲಾಗಿದೆ. ದೀರ್ಘಕಾಲದ ಗೈರು ಇರುವವರನ್ನು ಕೆಲಸದಿಂದ ವಜಾ ಮಾಡಲು ಸೂಚಿಸಲಾಗಿದೆ ಎಂದರು.

ಆಸ್ಪತ್ರೆಯ ರೋಗಿಗಳಿಗೆ ನೀಡುವ ಬ್ರೆಡ್ ಬದಲಾವಣೆ ಮಾಡಲಾಗಿದ್ದು, ರೋಗಿಗಳಿಗೆ ಬ್ರೆಡ್ ಬದಲಾಗಿ ಇಡ್ಲಿ, ಉಪ್ಪಿಟ್ಟು, ಪೊಂಗಲ್, ಚಿತ್ರಾನ್ನ ನೀಡಲು ಸೂಚಿಸಲಾಗಿದೆ. ನಮ್ಮ ಜನ ಬ್ರೆಡ್ ಬನ್ ಬಳಸುವುದು ಕಡಿಮೆ. ಈಗಾಗಿ ಬ್ರೆಡ್ ಬದಲಾವಣೆಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Key words: Mysore -District Hospital-Minister- Dinesh Gundurao -meeting