ನಮ್ಮ ಪರ ತೀರ್ಪು ಬರುವ ವಿಶ್ವಾಸ: ನಾವೇನು ದನ, ಕುರಿ ಕೋಳಿಗಳಲ್ಲ- ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಅನರ್ಹ ಶಾಸಕ ಬಿ.ಸಿ ಪಾಟೀಲ್….

ಮೈಸೂರು,ಅ,21,2019(www.justkannada.in): ಶಾಸಕರನ್ನು ದನ, ಕುರಿ, ಕೋಳಿಗಳಂತೆ ಬಿಜೆಪಿಯವರು ಖರೀದಿ ಮಾಡಿದ್ದಾರೆ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ  ಅನರ್ಹ ಶಾಸಕ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ನಮ್ಮನ್ನ ಖರೀದಿಸಲು ನಾವೇನು ದನ, ಕುರಿ, ಕೋಳಿಗಳಲ್ಲ. ಮಾರಾಟ, ಖರೀದಿ ಬಗ್ಗೆ ಸಿದ್ಧರಾಮಯ್ಯಗೆ ಗೊತ್ತು ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ಟಾಂಗ್ ಕೊಟ್ಟರು.

ಮೈಸೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಅನರ್ಹ ಶಾಸಕ ಬಿ.ಸಿ. ಪಾಟೀಲ್ , ಸಿದ್ಧರಾಮಯ್ಯ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಹೇಗೆ ನಡೆಸಿಕೊಂಡರು ಅನ್ನೋದನ್ನ ನೋಡಲಿ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿದ್ದರೆ 14 ಮಂದಿ ಪಕ್ಷದಿಂದ ಹೊರಬರುವ ಅಗತ್ಯವೇನಿತ್ತು. ಸಮನ್ವಯ ಸಮಿತಿ ಅಧ್ತಕ್ಷರಾಗಿ ಸಿದ್ದರಾಮಯ್ಯ ಹೇಗೆ ನಡೆದುಕೊಂಡ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಇನ್ನು ಕುಮಾರಸ್ವಾಮಿ ಅವರಂತು ಕುಟುಂಬಕ್ಕೆ ಮಾತ್ರ ಸೀಮಿತರಾದರು. ಪಕ್ಷದಲ್ಲಿ ನಮ್ಮ ಕಷ್ಟ ಸುಖ ಕೇಳೋರೆ ದಿಕ್ಕಿರಲಿಲ್ಲ. ಹಾಗಾಗಿ ನಾವೆಲ್ಲ‌ ಧೃಡ ತೀರ್ಮಾನ ಮಾಡಬೇಕಾಯಿತು ಈಗಲೂ ಸಹ‌ ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ.‌ ಪರಿಸ್ಥಿತಿಯನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂದು ತಿಳಿಸಿದರು.

ಉದ್ದೇಶಪೂರ್ವಕವಾಗಿ ನನಗೆ ಮಂತ್ರಿ ಸ್ಥಾನ ಕೈತಪ್ಪುವಂತೆ ಮಾಡಿದ್ರು….

ಮಾಜಿ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ತಾಯಿಯಂತೆ ನಡೆದುಕೊಳ್ಳಲಿಲ್ಲ. ಉದ್ದೇಶಪೂರ್ವಕವಾಗಿ ನನಗೆ ಮಂತ್ರಿ ಸ್ಥಾನ ಕೈತಪ್ಪುವಂತೆ ಮಾಡಿದ್ರು. ಅನರ್ಹ ಶಾಸಕರು ಕಾಂಗ್ರೆಸ್ ಬಿಡಲು ಕಾರಣವೇನು ಅಂತಾ  ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಆರಂಭ ದಿನಗಳಲ್ಲಿ ನಮಗೆ ಆಸೆ ಆಮಿಷಗಳನ್ನ ಒಡ್ಡಿದ್ರು ನಾವು ಪಕ್ಷ ಬಿಟ್ಟಿರಲಿಲ್ಲ. ಆದ್ರೆ 1 ವರ್ಷ 2 ತಿಂಗಳು ಕಾದು ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮ‌ ನಿರ್ಧಾರದ ಹಿಂದೆ ಸಮಗ್ರ ಕರ್ನಾಟಕದ ಅಭಿವೃದ್ದಿಯ ಹಿತ ಚಿಂತನೆ ಇದೆ. ಸಮ್ಮಿಶ್ರ ಸರ್ಕಾರದಿಂದ ಸಮಗ್ರ ಅಭಿವೃದ್ದಿ ಸಾಧ್ಯವಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ನಾವು ನಿರೀಕ್ಷಿಸಿದಂತೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ಸಿಗುತ್ತಿದೆ. ನನ್ನದೇ ಕ್ಷೇತ್ರಕ್ಕೆ ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಬಹು‌ ದಿನಗಳ ಕನಸಾಗಿದ್ದ ಏತ ನೀರಾವರಿ ಯೋಜನೆ ಜಾರಿಗೆ ಬರುತ್ತಿದೆ. ಉತ್ತರ ಕರ್ನಾಟಕ ಅಭಿವೃದ್ದಿ ಆಶಯ‌ ಕೂಡ ಈಡೇರುತ್ತಿದೆ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ನಾಳೆ ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಹೊರ ಬೀಳುವ ವಿಶ್ವಾಸವಿದೆ. 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿಲುವು ಸಂವಿಧಾನ ಬಾಹಿರವಾದುದು. ಸ್ಪೀಕರ್ ನೈಸರ್ಗಿಕವಾಗಿ ನ್ಯಾಯ ಕೊಟ್ಟಿಲ್ಲ. ಇದೇ ಕಾರಣದಿಂದಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ನಾಳೆ ತೀರ್ಪು ಹೊರ ಬೀಳುತ್ತಿರುವುದರಿಂದ ಬಹುತೇಕ ಅನರ್ಹ ಶಾಸಕರು ದೆಹಲಿಗೆ ಹೋಗಿದ್ದಾರೆ. ನಾಳೆ ನಮ್ಮ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ. ಆದರೆ ನನ್ನ ಸ್ವಕ್ಷೇತ್ರದಲ್ಲಿ ಭಾರೀ ಮಳೆಯಾಗಿ ಹಾನಿ ಸಂಭವಿಸಿದೆ. ಹಾಗಾಗಿ ನಾನು ದೆಹಲಿಗೆ ಹೋಗುತ್ತಿಲ್ಲ.ಮೈಸೂರಿನಿಂದ ನೇರವಾಗಿ ನನ್ನ ಸ್ವಕ್ಷೇತ್ರಕ್ಕೆ ಹೋಗುತ್ತೇನೆ. ಉಪ ಚುನಾವಣೆಯಲ್ಲಿ ನಾನು ಖಂಡಿತ ಗೆಲ್ಲುತ್ತೇನೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದು ಹೇಳಿದರು.

Key words: mysore-disqualified mla-BV Patil-outrage-siddaramaiah