ಮತ್ತೆ ವರುಣನ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ತತ್ತರ: ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ: ರಸ್ತೆ ಸಂಪರ್ಕ ಕಡಿತ…

ಬೆಳಗಾವಿ,ಅ,21,2019(www.justkannada.in):  ಅತಿವೃಷ್ಠಿ ಪ್ರವಾಹದಿಂದ ನಲುಗಿದ್ದ ಬೆಳಗಾವಿ ಜಿಲ್ಲಿ  ಇದೀಗ ಮತ್ತೆ ವರುಣ ಆರ್ಭಟ ಜೋರಾಗಿದ್ದು ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಅತೀವೃಷ್ಟಿ ಹಾಗೂ ಪ್ರವಾಹದಿಂದ ನಲುಗಿಹೋದ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಹಾಗೂ ರವಿವಾರ ಸಂಜೆ ಮೇಘಸ್ಪೋಟಗೊಂಡು ಎರಡು ಗಂಟೆಗಳವರೆಗೆ ಸುರಿದ ಭಾರಿ ಮಳೆಯಿಂದ ಸಾರ್ವಜನಿಕ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಂಪರ್ಕ ಕಲ್ಪಿಸುವ ಎನ್ಎಚ್ 4 ರಾಷ್ಟ್ರೀಯ ಹೆದ್ದಾರಿ   ಸಂಪೂರ್ಣ ಕಡಿತಗೊಂಡು, ಸಂಪರ್ಕ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು.

ಭಾರೀ ಮಳೆ ನೀರಿನ ಸೆಳೆತಕ್ಕೆ  ಸಂಕೇಶ್ವರದ ಲಕ್ಷ್ಮಿ ಗುಡಿ ಹತ್ತಿರ ಹಳ್ಳದಲ್ಲಿ ಆರು ಕಾರು ಟ್ರ್ಯಾಕ್ಟರ್ ಕ್ರೂಸರ್ ಹಾಗೂ ಸಣ್ಣ ಪ್ರಮಾಣದ ವಾಹನಗಳು ಮುಳುಗಿ ಕೊಚ್ಚಿ ಹೋಗಿವೆ. ಮಳೆಯಿಂದಾಗಿ ಕಾಕತಿ ಹೊನಗಾ ರಸ್ತೆಗಳು ಜಲಾವೃತಗೊಂಡಿವೆ. ಬೆಳಗಾವಿ ನಗರದಲ್ಲೂ ಭಾರೀ ಮಳೆಯಾಗಿದ್ದು, ಈಗಲೂ ಮಳೆ ಮುಂದುವರೆದಿದ್ದು, ಗ್ಲೋಬ್ ಟಾಕೀಸ್ ರೋಡ್ ಫಿಶ್ ಮಾರ್ಕೆಟ್ , ಮರಾಠಾ ಕಾಲನಿ ಸೇರಿದಂತೆ ಬೆಳಗಾವಿ ನಗರದ ತಗ್ಗು ಪ್ರದೇಶಗಳು ತುಂಬಿ ಹರಿಯುತ್ತಿದ್ದು, ಮತ್ತೆ ನಗರದಲ್ಲಿ ಜನಜೀವನ ಕುಂಠಿತಗೊಂಡಿದೆ.  ಯಾವುದೇ ಅನಾಹುತಗಳು  ನಡೆಯದಂತೆ ಕಾಕತಿ ಪಿಐ ಶ್ರೀಶೈಲ ಕೌಜಲಗಿ ಮತ್ತು ಸಿಬ್ಬಂದಿಗಳು  ಮುಂಜಾಗ್ರತೆ ಕ್ರಮ ವಹಿಸಿದ್ದಾರೆ. ಭಾರೀ ಮಳೆಯಿಂದಾಗಿ ಸಂಕೇಶ್ವರ್ , ಸದಲಗಾ, ಹುಕ್ಕೇರಿ, ಖಾನಾಪೂರ ಪಟ್ಟಣಗಳ ಜನಜೀವನ ತೀವ್ರ ಅಸ್ತವ್ಯಸ್ತತೆಗೊಂಡಿದೆ.

ಸುಮಾರು ಮೂರು ಗಂಟೆಗಳಿಂದ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಗೆ ಚಿಕ್ಕೋಡಿ ಭಾಗದಲ್ಲಿ  ಜನ ಜೀವನ ಅಸ್ತವ್ಯಸ್ತವಾಗಿದ್ದು  ಆಡಿ ಗ್ರಾಮದಲ್ಲಿ ಮಳೆ ನೀರಿನ ರಭಸಕ್ಕೆ 3 ಕಾರ ಹಾಗೂ 8 ಬೈಕಗಳು ಕೊಚ್ಚಿ ಹೋಗಿವೆ. 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ, ಅಥಣಿ, ರಾಯಭಾಗ ತಾಲ್ಲೂಕುಗಳಲ್ಲೂ ಭಾರಿ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಕಿತ್ತೂರು ಭಾಗದಲ್ಲಿ ಸುರಿದ ಮಳೆಯ ಪರಿಣಾಮವಾಗಿ ಸವದತ್ತಿ ಬಳಿಯ ನವಿಲುತೀರ್ಥ ಡ್ಯಾಮ್ ತುಂಬಿ ಹರಿಯುತ್ತಿದ್ದು ಹೊರಹರಿವು 20 ಸಾವಿರ ಕ್ಯೂಸೆಕ್ಸ ತಲುಪಿದೆ. ಭಾರೀ ಮಳೆಯಿಂದ ಅನೇಕ ಕಡೆ ಮನೆ ಬಿದ್ದಿವೆ. ಮನೆ ಬಿದ್ದ ಪರಿಣಾಮ ಖಾನಾಪೂರದಲ್ಲಿ ವೃದ್ದನೋರ್ವ  ಸಾವಿಗೀಡಾಗಿದ್ದಾರೆ.

ಕೆಳಹಂತದ ಸೇತವೆ ಮುಳುಗಡೆ ಸಿಲುಕಿದ ಬಸ್…

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ  ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೊಸೂರ್  ಗ್ರಾಮದ  ಸೇತುವೆ ಮುಳುಗಡೆಯಾಗಿ ಬಸ್ ಮಧ್ಯದಲ್ಲಿ ಸಿಲುಕಿದ ಘಟನೆ ನಡೆದಿದೆ. ಮುಳವಳ್ಳಿ- ಬೈಲಹೊಂಗಲ ಸೇತುವೆ ಮುಳುಗಿದ್ದು, ಮುನವಳ್ಳಿ, ಗೊಂದಿ, ಕಾತ್ರಾಳ, ಯಕ್ಕುಂಡಿ, ಮಲ್ಲೂರ,  ಸೊಗಲ ಸೋಮನಿಂಗ್ ದೇವಸ್ಥಾನಕ್ಕೆ ಸಂಪರ್ಕ ಕಡಿತಗೊಂಡಿದೆ.

ರಾಮದುರ್ಗ ಮಲಪ್ರಭಾ ನೀರು  ಹರಿಬಿಟ್ಟ ಹಿನ್ನೆಲೆ: ಶಾಲೆಗೆ ನುಗ್ಗಿದ ನೀರು…

ಮಲಪ್ರಭಾ ಜಲಾನಯದಿಂದ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ರಾಮದುರ್ಗ ಮಲಪ್ರಭಾ ನೀರು  ಹರಿಬಿಟ್ಟ ಹಿನ್ನೆಲೆ  ರಾಮದುರ್ಗದ ಖಾಸಗಿ ಶಾಲೆಗೆ ಮಳೆಯ ನೀರು ನುಗ್ಗಿದ್ದು, ರಾಮದುರ್ಗದ  ಪ್ರೇರಣಾ ಶಾಲೆ ಸೇರಿದಂತೆ ನದಿಪಾತ್ರದ ಗ್ರಾಮಗಳಿಗೆ ನೀರು ಸುತ್ತುವರೆದು ಪ್ರವಾಹ ಭೀತಿ ಉಂಟಾಗಿದೆ.

Key words: belgavi- Heavy rain- Road disconnect-villages