ಮೈಸೂರು ದಸರಾ-2023: ಇಂದು ಉನ್ನತ ಮಟ್ಟದ ಸಭೆ: ಗಜಪಡೆ ಪಟ್ಟಿ ಬಿಡುಗಡೆ ಸಾಧ್ಯತೆ?

ಮೈಸೂರು,ಜುಲೈ,31,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023  ಆಚರಣೆ ಸಂಬಂಧ ಇಂದು ಉನ್ನತ ಮಟ್ಟದ ಸಭೆ ನಡೆಯಲಿದ್ದು ಇಂದಿನ ಸಭೆಯಲ್ಲಿಯೇ ದಸರಾ ಗಜಪಡೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4ಗಂಟೆಗೆ ಉನ್ನತ ಮಟ್ಟದ ಸಭೆ ನಡೆಯಲಿದೆ.  ಉನ್ನತ ಮಟ್ಟದ ಸಭೆಗೆ ಮೈಸೂರು, ಮಂಡ್ಯ, ಚಾಮರಾಜನಗರ ಭಾಗದ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿದ್ದು, ಸಾಂಪ್ರದಾಯಿಕ ದಸರಾ ಆಚರಣೆಗೆ ಒತ್ತು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಎರಡನೇ ಭಾರಿ ಸಿಎಂ ಆದ ಬಳಿಕ ಮೊದಲ ಸಲ ನಡೆಯುತ್ತಿರುವ ದಸರಾ ಮಹೋತ್ಸವ ಇದಾಗಿದ್ದು, ಮುಖ್ಯಮಂತ್ರಿಯಾಗಿ 6ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಅದ್ದೂರಿ ದಸರಾ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಮೈಸೂರು ಮಹಾರಾಜರು ಮತ್ತು ಮೈಸೂರಿನ ಚರಿತ್ರೆ ಸಾರುವ ದಸರಾ ಆಚರಣೆಗೆ ಹೆಚ್ಚಿನ ಆದ್ಯತೆ ನೀಡಲು ಚಿಂತಿಸಿದ್ದು, ಪ್ರವಾಸಿಗರನ್ನು ಸೆಳೆಯಲು ಹೊಸ ಯೋಜನೆಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸರ್ಕಾರ ಸಲಹೆ ನೀಡಿದೆ.

ಇನ್ನು ಈಗಾಗಲೇ ದಸರಾದಲ್ಲಿ ಭಾಗಿಯಾಗಲಿರುವ ಆನೆಗಳ ಪಟ್ಟಿಯನ್ನ ಅರಣ್ಯ ಇಲಾಖೆ ಸಿದ್ದಪಡಿಸಿದ್ದು, ಸಭೆಯಲ್ಲಿ ಅನುಮತಿ ಪಡೆದು ದಸರಾ ಗಜಪಡೆ ಪಟ್ಟಿಯನ್ನು ಇಂದೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Key words: Mysore Dasara-2023-High -level –meeting- today.