ಜಾನಪದ ಸೊಗಡು ಸಹಜ ಬಾಲ್ಯದ ಬೇರು- ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ

ಮೈಸೂರು,ಏಪ್ರಿಲ್,29,2024 (www.justkannada.in): ಕೂಡು ಕುಟುಂಬಗಳ ಮರೆಯಾಗುವಿಕೆ ಹಾಗೂ ನಗರೀಕರಣದಿಂದ ಮಕ್ಕಳು ಸಹಜ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ, ʼಸಹಜ ಬಾಲ್ಯ’ ಮಕ್ಕಳ ಬೆಳವಣಿಗೆ ಗಟ್ಟಿತನವನ್ನು ರೂಪಿಸುತ್ತದೆ, ಈ ನಿಟ್ಟಿನಲ್ಲಿ ನಮ್ಮ ಗ್ರಾಮೀಣ ಚಟುವಟಿಕೆಗಳು ಹಾಗೂ ಗ್ರಾಮೀಣ ಸೊಗಡು ಪರಿಚಯಿಸುವ, ಅನುಭವಿಸುವ ಅವಕಾಶ ಕಲ್ಪಿಸುವುದು ಅನಿವಾರ್ಯವಾಗಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.

ನೈಪುಣ್ಯ  ಸ್ಕೂಲ್ ಆಫ್ ಎಕ್ಸಲೆನ್ಸ್ ಆಯೋಜಿಸಿದ್ದ ‘ಬೇಸಿಗೆ ಬಂಡಿ’  ಹೆಸರಿನ 15 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮಕ್ಕಳು ಮಾನಸಿಕವಾಗಿ ಸಧೃಢವಾಗಲು ಹಾಗೂ ಅವರಲ್ಲಿನ ಬೌದ್ಧಿಕ ಪ್ರಜ್ಞೆ ವಿಕಸಿತಗೊಳ್ಳಲು ಮಕ್ಕಳು ನಮ್ಮ ತಲೆಮಾರುಗಳ ಪರಂಪರೆಯನ್ನು ಅನುಭವಿಸುವ ವಾತಾವರಣ ಕಲ್ಪಿಸುವುದು ಅನಿವಾರ್ಯವಾಗಿದೆ. ಆದರೆ ನಗರೀಕರಣದ ಬೆಳವಣಿಗೆಯಲ್ಲಿ ಮಕ್ಕಳು ತಮಗೆ ಬಾಲ್ಯದಲ್ಲಿ ಸಿಗಬೇಕಾದ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವೇಗವಾಗಿ ಓಡುತ್ತಿರುವ ಆಧುನಿಕ ಜಗತ್ತಿನಲ್ಲಿ  ನಮ್ಮ ಮಕ್ಕಳು ಬಾಲ್ಯ ಸುಖ ಕಳೆದುಕೊಂಡು ಏಕಾಂಗಿತನ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಪೋಷಕರಿಗೆ ಒತ್ತಡ, ಸಮಯ ಕೊರತೆಗಳು ಇದ್ದರೂ ಮಕ್ಕಳಿಗಾಗಿ ಸಮಯ ಮಾಡಿಕೊಂಡು ಅವರಿಗೆ ಸಹಜ ಬಾಲ್ಯ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ತಮ್ಮ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಕೊಂಡು, ನೈಜ ಶಿಕ್ಷಣವನ್ನು ಪರಿಚಯಿಸಬೇಕಿದೆ.  ಈ ನಿಟ್ಟಿನಲ್ಲಿ ಮೈಸೂರಿನ ನೈಪುಣ್ಯ ಶಿಕ್ಷಣ ಸಂಸ್ಥೆ ತನ್ನ  ಶಿಕ್ಷಣ ವಿಧಾನದಲ್ಲಿ  ನಮ್ಮ ನೆಲದ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯನ್ನು ಪರಿಚಯಿಸುವ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದೆ. ಇದರ ಜೊತೆಗೆ ಬೇಸಿಗೆ ಶಿಬಿರ ಏರ್ಪಡಿಸಿ ಬೇಸಿಗೆ ಬಂಡಿ ಹೆಸರಿನಲ್ಲಿ ಮಕ್ಕಳಿಗೆ ದೇಶೀಯತೆಯ ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಣ್ಣಿನ ವಾಸನೆ ಹಾಗೂ ಕರುಳ ಬಂಧನದ ಸ್ಪರ್ಶಅನುಭವ ಇರುವುದೇ ನಮ್ಮ ಜನಪದ ಸಂಸ್ಕೃತಿಯಲ್ಲಿ ಹಾಗೂ ನಮ್ಮ ಗ್ರಾಮೀಣ ಬದುಕಿನ ಶೈಲಿಯಲ್ಲಿ. ವಿಪರ್ಯಾಸದ ಸಂಗತಿ ಎಂದರೆ ಗ್ರಾಮೀಣ ಪ್ರದೇಶದಲ್ಲೂ ಆಧುನಿಕತೆ ಎಂಬ ಮಾಯಾಸುರ ಆವರಿಸಿಕೊಳ್ಳುತ್ತಿದ್ದಾನೆ. ಆದರೆ ಇದನ್ನು ಮೆಟ್ಟಿ ನಿಲ್ಲುವ ದೃಢ ನಿಶ್ಚಯ ನಮ್ಮ ಪೋಷಕ ವರ್ಗ ಹಾಗೂ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಮಾಡಬೇಕು. ಆ ಮೂಲಕ ಮಕ್ಕಳಿಗೆ ಸಹಜ ಬಾಲ್ಯ ಹಾಗೂ ಆಧುನಿಕ ತಂತ್ರಜ್ಞಾನವನ್ನೂ ಒಳಗೊಂಡ ಗುಣಮಟ್ಟದ ಶಿಕ್ಚಣವನ್ನು ನೀಡುವ ವ್ಯವಸ್ಥೆ ರೂಪಿಸಬೇಕಿದೆ. ಶಿಕ್ಷಣದಲ್ಲಿ ನಿರಂತರವಾಗಿ ಹೊಸ ಹೊಸ ಪ್ರಯತ್ನ ಮಾಡುತ್ತಿರುವ ನೈಪುಣ್ಯ ಸಂಸ್ಥೆಯ ಸಂಸ್ಥಾಪಕರೂ ಆದ ಶಿಕ್ಷಣ ತಜ್ಞ ಆರ್. ರಘು ಅವರಿಂದ ಈ ಕಾರ್ಯ ವ್ಯವಸ್ಥಿತವಾಗಿ ವಿಸ್ತರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್. ರಘು ಅವರು ನಮ್ಮ ಪರಂಪರೆಯ  ಕಟ್ಟಡಗಳು ಇನ್ನೂ ತಮ್ಮ ಗಟ್ಟಿತನವನ್ನು ಉಳಿಸಿಕೊಂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಅಸ್ಥಿರತೆ ಎದ್ದು ಕಾಣಿತ್ತಿದೆ,ಇದರ ಅರ್ಥ ಏನೆಂದರೆ ನಾವು ಮಕ್ಕಳನ್ನು ನಮ್ಮ ಆಚಾರ-ವಿಚಾರ, ಸಂಸ್ಕೃತಿಗಳ ಅನುಭವದೊಂದಿಗೆ ಬೆಳೆಸಿದರೆ ಅವರು ಗಟ್ಟಿಯಾಗುತ್ತಾರೆ. ಮಕ್ಕಳು ಗಟ್ಟಿಯಾಗಿ ರೂಪುಗೊಳ್ಳಲು ಅವರಿಗೆ ಯಾವುದೇ ನಿರ್ಬಂಧ ವಿಧಿಸದೇ ಅವರ ಆಸಕ್ತಿಯನ್ನು ಗ್ರಹಿಸಿ ಉತ್ತೇಜಿಸಬೇಕು.

ತಾಯಂದಿರು ಟಿವಿ ಧಾರಾವಾಹಿಗಳಿಂದ ಅಂತರ ಕಾಯ್ದುಕೊಂಡು ಕಥೆಗಳನ್ನು ಓದಬೇಕು, ಮಕ್ಕಳಿಗೆ ದಿನಕ್ಕೊಂದು ನೀತಿ ಕಥೆಗಳನ್ನು ಹೇಳಿದರೆ ಅದು ಮಕ್ಕಳ ಮೇಲೆ ಪ್ರಭಾವ ಬೀರಲಿದೆ, ಅವರ ಚಿಂತನೆಯ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಶಿಬಿರದ ಸಂಯೋಜಕಿ ದೇಚಮ್ಮ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಸ್ಥೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಪ್ರಕಾರಗಳ ನೃತ್ಯೃಗಳು  ಹಾಗೂ  ಡಾ. ಚಂದ್ರಶೇಖರ ಕಂಬಾರರ ‘ಪುಷ್ಪರಾಣಿ’ನಾಟಕವನ್ನು ಪ್ರದರ್ಶಿಸಲಾಯಿತು.

Key words: mysore, Besige Bandi, Nypunya School