ಮೈಸೂರು,ನವೆಂಬರ್,12,2026 (www.justkannada.in): ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದು ಈಗಾಗಲೇ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿಟಿ ದೇವೇಗೌಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಯೇ ಎಂಬ ಕುತೂಹಲ ಮೂಡಿದ್ದು ಮೈಸೂರು ಭಾಗದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರ ಜೊತೆ ಅನ್ಯೋನ್ಯವಾಗಿರುವ ಶಾಸಕ ಜಿಟಿ ದೇವೇಗೌಡರು, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಮೈಸೂರು ಭಾಗದ ಕಾಂಗ್ರೆಸ್ ನಾಯಕರ ಜೊತೆ ಚೆನ್ನಾಗಿದ್ದು, ಜೆಡಿಎಸ್ ನಾಯಕರನ್ನ ತೆಗಳುತ್ತಲೇ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ. ಹಾಗೆಯೇ ನಿನ್ನೆಯ ಡಿಕೆ ಶಿವಕುಮಾರ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರನ್ನ ಶಾಸಕ ಜಿ.ಟಿ ದೇವೇಗೌಡರು ಹಾಡಿ ಹೊಗಳಿದ್ದಾರೆ. ಮತ್ತೊಮ್ಮೆ ನೀವು ಮುಖ್ಯಮಂತ್ರಿ ಆಗಬೇಕು. ಆಗುತ್ತೀರಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.
ನಿನ್ನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಜಿ.ಟಿ ದೇವೇಗೌಡರು, ಡಿ.ಕೆ ಶಿವಕುಮಾರ್ ಈ ರಾಜ್ಯದಲ್ಲಿ ಮತ್ತೆ ಸಿಎಂ ಆಗಬೇಕು. ಡಿಕೆಶಿ ಇಡೀ ರಾಜ್ಯದ ಎಲ್ಲಾ ಮನೆಗೆ ಬೆಳಕು ತಂದಿದ್ದಾರೆ.- ಮೋದಿ ಈ ದೇಶದಲ್ಲಿ 20 ಗಂಟೆ ಕೆಲಸ ಮಾಡುತ್ತಾರೆ. ಮೋದಿಗಿಂತ ಹೆಚ್ಚು ಅವಧಿ ಡಿಕೆ ಶಿವಕುಮಾರ್ ಕೆಲಸ ಮಾಡುತ್ತಾರೆ. ಗುರಿ, ಛಲ, ನಂಬಿಕೆಯಿಂದ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ಎಸ್.ಎಂ. ಕೃಷ್ಣ ಅವರು ಬೆಂಗಳೂರು ಅಭಿವೃದ್ಧಿ ಕೊಟ್ಟ ಕೊಡುಗೆಯ ಶ್ರೇಯಸ್ಸು ಡಿಕೆ ಶಿವಕುಮಾರ್ ಅವರಿಗೆ ಸಲ್ಲುತ್ತದೆ. ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸಿಎಂ ಆಗಲು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದವರು ಎಂದು ಬಣ್ಣಿಸಿದ್ದಾರೆ.
ಡಿಕೆ ಶಿವಕುಮಾರ್. ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಡಿಕೆ ಶಿವಕುಮಾರ್ ಸಿಎಂ ಆಗಲು ಸಾಧ್ಯವಿಲ್ಲ ಎಂದು ಬಹಳಷ್ಟು ಜನ ಹೇಳಿದರು. ಅದರೂ ಡಿಕೆ ಶಿವಕುಮಾರ್ ದೃತಿಗೆಡಲಿಲ್ಲ. ಮೈಸೂರು ಕಡೆ ಡಿಕೆ ಶಿವಕುಮಾರ್ ನೋಡುತ್ತಿಲ್ಲ. ಬೆಂಗಳೂರು ರೀತಿ ಮೈಸೂರನ್ನೂ ನೋಡಿ. ಜಾತಿ ಬಗ್ಗೆ ಒಡಕು ಮಾಡದೆ ಸಾಮಾಜಿಕ ನ್ಯಾಯದ ಅಡಿ ನೀವು ಸರಕಾರ ಮಾಡುತ್ತಿದ್ದಿರಿ. ದೈವದ ಆಶೀರ್ವಾದ ತಂದೆ – ತಾಯಿಯ ಆಶೀರ್ವಾದ ನಿಮಗೆ ಇದೆ. ಡಿ.ಕೆ ಶಿವಕುಮಾರ್ ರಂತಹ ಎದೆಗಾರಿಕೆ ನಾಯಕ ಈ ರಾಜ್ಯಕ್ಕೆ ಬೇಕು. ಮೋದಿ, ಅಮಿತ್ ಶಾ, ಅಕ್ಕಪಕ್ಕದ ರಾಜ್ಯದ ಎಲ್ಲಾ ಸಿಎಂ ಗಳನ್ನು ಧೈರ್ಯವಾಗಿ ಭೇಟಿ ಮಾಡುವ ಶಕ್ತಿ ಇರೋದು ಡಿಕೆ ಶಿವಕುಮಾರ್ ಗೆ ಮಾತ್ರ. ಬೇರೆ ಯಾರು ಏನೂ ಮಾತಾಡಿದರೂ ಡಿಕೆ ಶಿವಕುಮಾರ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ಧೈರ್ಯವಾಗಿ ಮುನ್ನಡೆಯಿರಿ. ಮತ್ತೊಮ್ಮೆ ನೀವು ಮುಖ್ಯಮಂತ್ರಿ ಆಗಬೇಕು. ಆಗುತ್ತೀರಿ ಎಂದು ಜಿಟಿ ದೇವೇಗೌಡರು ತಿಳಿಸಿದ್ದರು.






