Thursday, August 6, 2026

BDA Apartments

Home Front Page ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ- ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚನೆ

ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ- ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚನೆ

ಮೈಸೂರು,ಆಗಸ್ಟ್,6,2026 (www.justkannada.in): ಜಿಲ್ಲೆಯಲ್ಲಿ ಶೇ 58 ರಷ್ಟು ಮಳೆಯ ಕೊರತೆಯಾಗಿದ್ದು, ಮುಂದಿನ ದಿನಗಳಲ್ಲಿ  ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನಚ್ಚರಿಕಾ ಕ್ರಮ ಹಾಗೂ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.

ನಗರದ ಶಾರದದೇವಿನಗರ ಮೈಸೂರು ಮಹಾನಗರಪಾಲಿಕೆ ವಲಯ ಕಚೇರಿ 3 ರಲ್ಲಿ  ಅಧಿಕಾರಿಗಳ ಸಭೆ ನಡೆಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದು, ಜಲಾಶಯದಿಂದ ಬಿಡಲಾಗುವ ನೀರನ್ನು ಆದ್ಯತೆಯ ಮೇಲೆ ಕೆರೆಗಳನ್ನು ತುಂಬಿಸಲು ಬಳಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳು ಸಮರ್ಪಕವಾಗಿ ತುಂಬಿಸಲು ನಿಗಾ ವಹಿಸಬೇಕು ಎಂದರು.

ಮುಂದಿನ ವರ್ಷದ ಜೂನ್ ಮಾಹೆಯವರೆಗೆ ಬರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳು ಬರ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು. ಕೆರೆಗೆ ನೀರು ತುಂಬಿಸುವುದರಿಂದ ಗ್ರಾಮೀಣ ಭಾಗದಲ್ಲಿ ಬೋರ್ ವೆಲ್ ಗಳು ರೀಚಾರ್ಜ್ ಆಗುತ್ತದೆ. ನಗರ ಪ್ರದೇಶದ ಚಿತ್ರಣ ಬೇರೆ ಇದ್ದು, ಬೋರ್ ವೆಲ್ ಗಳನ್ನು ರೀಚಾಜ್೯ ಮಾಡಲು ಹೊಸ ಚಿಂತನೆ ನಡೆಸಬೇಕಿದೆ ಎಂದರು.

ಬರ ಪರಿಸ್ಥಿತಿಯ ಹಿನ್ನಲೆ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸ ಬೋರ್ ವೆಲ್ ಕೊರೆಸಿದ ಸಂದರ್ಭದಲ್ಲಿ ಹಾಗೂ ಕುಡಿಯುವ ನೀರನ್ನು ಒದಗಿಸುವ ಮೂಲಗಳಲ್ಲಿ ನೀರನ್ನು ನಿಗಧಿತವಾಗಿ  ರಸಾಯನಿಕ ಹಾಗೂ ಜೈವಿಕ ಪರೀಕ್ಷೆಗಳಿಗೆ ಒಳಪಡಿಸಿ.

ಹೆಚ್ಚಿನ ನೀರಿನ ಬೇಡಿಕೆ ಇರುವ ಭತ್ತ, ಕಬ್ಬು, ಮುಂತಾದ ವಾಣಿಜ್ಯ ಬೆಳೆಗಳನ್ನು ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಬೆಳೆಯದಂತೆ ಈಗಾಗಲೇ ಕೃಷಿ ಇಲಾಖೆಯಿಂದ ರೈತರಿಗೆ ತಿಳಿಸಲಾಗಿದೆ. ಇದರ ಬದಲಾಗಿ ಪರ್ಯಾಯ ಬೆಳೆಗಳಾದ  ರಾಗಿ, ಜೋಳ, ಸಿರಿಧಾನ್ಯ ಇನ್ನಿತರೆ ಬೆಳೆಗಳನ್ನು ಬೆಳೆಯಲು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಸಹ ಸಹಕರಿಸಬೇಕು ಎಂದರು.

ಬರಗಾಲ ಮುಂದುವರೆದಲ್ಲಿ ಬೋರ್ ವೆಲ್ ಗಳಿಂದ ದೊರೆಯುವ ನೀರು ಸಹ ಕ್ಷೀಣಿಸಬಹುದು ನಂತರ ಟ್ಯಾಂಕರ್ ಅಥವಾ ಖಾಸಗಿ ಟ್ಯಾಂಕರ್ ಅವಲಂಬಿಸಬೇಕಾಗುತ್ತದೆ. ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ ಕೆರೆ ತುಂಬಿಸುವ ಸಂದರ್ಭದಲ್ಲಿ ಎಲ್ಲಾ ಕೆರೆಗಳಿಗೆ ನೀರು ಸಮನಾಗಿ ಹಂಚಿಕೆಯಾಗಬೇಕು. ಮೈಸೂರು ನಗರ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳು ಕಸವನ್ನು ಸರಿಯಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರು ಮಾತನಾಡಿ ಹೂಟಗಳ್ಳಿಯ 6 ವಾಡ್೯ ಗಳಿಗೆ 6 ಟ್ಯಾಂಕರ್ ಮೂಲಕ, ಬೋಗಾದಿಯ 2 ವಾರ್ಡ್ ಗಳಿಗೆ 3 ಟ್ಯಾಂಕರ್ ಮೂಲಕ ಹಾಗೂ ರಮ್ಮನಳ್ಳಿಯ 5 ವಾರ್ಡ್ ಗಳಿಗೆ 5 ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ರೈತರು ಕಳೆದ ಸಾಲಿನಲ್ಲಿ 2,22,000 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಿದ್ದರು, ಸದರಿ ಸಾಲಿನಲ್ಲಿ 60- 70 ಸಾವಿರ ಹೆಕ್ಟೇರ್ ಬಿತ್ತನೆ ಕಡಿಮೆಯಾಗಿದ್ದು, 1,66,000 ಹೆಕ್ಟೇರ್ ಬಿತ್ತನೆಯಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸವಿತಾ ಎಂ.ಕೆ ಸೇರಿದಂತೆ ‌ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ‌

Key words: Minister, Dr. Yathindra Siddaramaiah, Meeting, drinking water