ಅತೃಪ್ತ ಶಾಸಕರ ಮನವೊಲಿಕೆಗೆ ಕಸರತ್ತು: ಮುಂಬೈನ ಹೋಟೆಲ್ ಮುಂದೆಯೇ ಪಟ್ಟು ಹಿಡಿದು ಕುಳಿತ ಸಚಿವ ಡಿ.ಕೆ ಶಿವಕುಮಾರ್..

ಮುಂಬೈ,ಜು,10,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ರಾಜೀನಾಮೆ ನೀಡಿರುವ 13 ಮಂದಿ ಅತೃಪ್ತ ಶಾಸಕರನ್ನ ಮನವೊಲಿಸಿಯೇ ಕರೆ ತರುತ್ತೇನೆ ಎಂದು ಪಟ್ಟು ಹಿಡಿದು ಸಚಿವ ಡಿ.ಕೆ ಶಿವಕುಮಾರ್ ಮುಂಬೈನ ರೆನೈಸೆನ್ಸ್ ಹೋಟೆಲ್ ಮುಂದೆಯೇ ಕಾದು ಕುಳಿತಿದ್ದಾರೆ.

ಅತೃಪ್ತ ಶಾಸಕರನ್ನ ಕರೆ ತರಲು ಮುಂಬೈಗೆ ತೆರಳಿರುವ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ತಾನು ಬುಕ್ ಮಾಡಿದ್ದ ಹೋಟೆಲ್ ನಲ್ಲಿ ರೂಂ ಕ್ಯಾನ್ಸಲ್ ಆಗಿತ್ತು. ಈ ನಡುವೆ  ಹೋಟೆಲ್ ಗೆ ಹೋಗಲು ಡಿಕೆ ಶಿವಕುಮಾರ್ ಗೆ ಮಹಾರಾಷ್ಟ್ರ ಪೊಲೀಸರು ಅಡ್ಡಿಪಡಿಸಿದರು ಎನ್ನಲಾಗಿದೆ.

ರೂಂ ಬುಕ್ ಕ್ಯಾನ್ಸಲ್ ಆದ ಹಿನ್ನೆಲೆ ಸಚಿವ ಡಿ.ಕೆ ಶಿವಕುಮಾರ್ ರಸ್ತೆ ಬದಿಯಲ್ಲೇ ನಿಂತು ಬೆಳಗ್ಗಿನ ಉಪಾಹಾರ ಸೇವಿಸಿದರು. ಮಳೆ ಬರುತ್ತಿದ್ದರೂ ಡಿ.ಕೆ.ಶಿವಕುಮಾರ್ ಜನಸಾಮಾನ್ಯರಂತೆ ತನ್ನ ಬೆಂಬಲಿಗರೊಂದಿಗೆ ಹೋಟೆಲ್ ಹೊರಗಡೆ ನಿಂತು ತಿಂಡಿ ಸೇವಿಸಿದರು.

ಗೇಟ್ ಹೊರಗಡೆ ನಿಂತಿದ್ದ ಸಚಿವ  ಡಿಕೆ ಶಿವಕುಮಾರ್ ಜತೆ ಸಚಿವ ಜಿ.ಟಿ ದೇವೇಗೌಡರು ಸಹ ಸಾಥ್ ನೀಡಿದ್ದಾರೆ. ಇನ್ನು ನಿಂತಿದ್ದ ಸಚಿವರಿಗೆ ಪೊಲೀಸರು ಚೇರ್ ವ್ಯವಸ್ಥೆ ಮಾಡಿಕೊಟ್ಟಿದ್ದು,  ‘ತಾನು ಶಾಸಕರನ್ನು ಭೇಟಿಯಾಗದೆ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನಿನ್ನೆ ರಾತ್ರಿ ಬಿಜೆಪಿ ನಾಯಕರು ಯಾವ ಪತ್ರಕ್ಕೆಲ್ಲ ಸಹಿ ಹಾಕಿಸಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತು” ಎಂದು ಸಚಿವ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಹಾಗೆಯೇ ನನ್ನಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಆದರೆ ಹೃದಯವಿದೆ. ನಮ್ಮವರನ್ನು ಕಾಣಲು ಬಂದಿದ್ದೇನೆ. ಅವರನ್ನು ಕರೆದುಕೊಂಡು ಹೋಗುತ್ತೇನೆ ಎಂಬ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Key words: Minister -DK Shiva Kumar -waiting -in front of -Mumbai hotel