ಮೈಸೂರು, sep.16,2026: ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಮತ್ತಷ್ಟು ಸರಳ ಹಾಗೂ ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.
ಇನ್ಮುಂದೆ ನಾಗರಿಕರು ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಪಾಲಿಕೆ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ತಪ್ಪಿಸುವ ಉದ್ದೇಶದಿಂದ, ಅಂಚೆ ಇಲಾಖೆಯ ಸಹಯೋಗದೊಂದಿಗೆ ಪ್ರಮಾಣಪತ್ರಗಳನ್ನು ನೇರವಾಗಿ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಮುಂದಾಗಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಅಂಚೆ ಇಲಾಖೆ ನಡುವೆ MOU ಗೆ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಪಾಲಿಕೆ ಆಯುಕ್ತರಾದ ಎಂ.ಕೆ.ಸವಿತಾ ಅವರು ಹೇಳಿದಿಷ್ಟು…
ಆನ್ಲೈನ್ ಮೂಲಕ ಜನನ ಅಥವಾ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ಬಳಿಕ, ಪ್ರಮಾಣಪತ್ರ ಸಿದ್ಧವಾದಾಗ ಅದನ್ನು ಅಂಚೆ ಮೂಲಕ ಅರ್ಜಿದಾರರ ವಿಳಾಸಕ್ಕೆ ನೇರವಾಗಿ ಕಳುಹಿಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶ.
ಇದರಿಂದ ಪ್ರಮಾಣಪತ್ರಕ್ಕಾಗಿ ಪಾಲಿಕೆ ಕಚೇರಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಕಡಿಮೆಯಾಗಲಿದೆ. ವಿಶೇಷವಾಗಿ ವಯೋವೃದ್ಧರು, ದೂರದ ಪ್ರದೇಶಗಳಿಂದ ಬರುವವರು ಹಾಗೂ ಸಮಯದ ಅಭಾವ ಇರುವ ನಾಗರಿಕರಿಗೆ ಈ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಪಾಲಿಕೆಯ ಆನ್ಲೈನ್ ನಾಗರಿಕ ಸೇವೆಗಳಿಗೆ ಮತ್ತಷ್ಟು ವೇಗ ನೀಡುವ ಜೊತೆಗೆ, ‘ಕಚೇರಿಗೆ ನಾಗರಿಕರು ಬರುವ ಬದಲು, ಸೇವೆಯೇ ನಾಗರಿಕರ ಮನೆಬಾಗಿಲಿಗೆ’ ಎಂಬ ಪರಿಕಲ್ಪನೆಗೆ ಈ ಯೋಜನೆ ಪೂರಕವಾಗಲಿದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲು ಅಂಚೆ ಇಲಾಖೆಯೊಂದಿಗೆ ಸಮನ್ವಯ, ಪ್ರಮಾಣಪತ್ರ ವಿತರಣೆಯ ಪ್ರಕ್ರಿಯೆ, ಅಂಚೆ ಶುಲ್ಕ ಸೇರಿದಂತೆ ವಿವಿಧ ಅಂಶಗಳ ಕುರಿತು ಪರಿಶೀಲನೆ ನಡೆಸಬೇಕಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಮೈಸೂರು ಮಹಾನಗರ ಪಾಲಿಕೆಯ ಜನನ–ಮರಣ ಪ್ರಮಾಣಪತ್ರ ಸೇವೆಯಲ್ಲೂ ಮನೆಬಾಗಿಲು ವಿತರಣೆಗೆ ಶೀಘ್ರದಲ್ಲೇ ಚಾಲನೆ ಸಿಗುವ ಸಾಧ್ಯತೆ ಇದೆ.







