ಬೆಂಗಳೂರು, ನವೆಂಬರ್,7,2026 (www.justkannada.in): ‘ಕಾಂಗ್ರೆಸ್ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ದ ಕಾಂಗ್ರೆಸ್ ನಾಯಕರ ಹರಿಹಾಯ್ದಿದ್ದರು. ಅಲ್ಲದೆ ಅವರ ಮನೆಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಕೂಡ ಯತ್ನಿಸಿದ್ದರು.
ಈ ಮಧ್ಯೆ ಇದೀಗ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಬ್ಲಿಂಕಿಟ್ ಆ್ಯಪ್ ಮೂಲಕ ಚಾಕು ಬುಕ್ಕಿಂಗ್ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಛಲವಾದಿ ನಾರಾಯಣಸ್ವಾಮಿ, ‘ರಾಜ್ಯದಲ್ಲಿ ಈ ಹಿಂದಿನಿಂದಲೇ ಗೂಂಡಾ ಸಂಸ್ಕೃತಿ ನೋಡಿದ್ದೇವೆ. ಕೊತ್ವಾಲ್ ಸಂಸ್ಕೃತಿ ಇನ್ನೂ ಬದುಕಿದೆ ಎಂಬುದಕ್ಕೆ ಜೀವಂತ ಸಾಕ್ಷಿ ಸಿಗುತ್ತಿದೆ. ಅರಾಜಕತೆ ಸೃಷ್ಟಿಸಿದರೆ ಕಾಂಗ್ರೆಸ್ ಅನ್ನು ತುಂಡುತುಂಡು ಮಾಡಿ ಎಸೆಯುತ್ತಾರೆ ಅಂದಿದ್ದೆ. ಕಾಂಗ್ರೆಸ್ ತುಂಡು ಆಗಿರುವುದು ಹೊಸದೇನಲ್ಲ. ಬ್ಲಿಂಕಿಟ್‌ಗೆ ಚಾಕು, ಚೂರಿಗಳನ್ನು ಆರ್ಡರ್ ಮಾಡಿ ನನ್ನ ಮನೆಗೆ ಕಳುಹಿಸುತ್ತಿದ್ದಾರೆ. ಚಾಕು, ಚೂರಿ ಸಂಸ್ಕೃತಿ ಯಾರದ್ದು ಅಂತಾ ದೇಶಕ್ಕೆ ಗೊತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬ್ಲಿಂಕಿಟ್ ಆ್ಯಪ್ ಮೂಲಕ ಚಾಕು ಬುಕ್ಕಿಂಗ್ ಮಾಡಲಾಗಿದೆ. ಹೀಗಾಗಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ನಾಲ್ವರು ಡೆಲಿವರಿ ಬಾಯ್ಸ್ ಬಂದಿದ್ದಾರೆ. ಈ ವೇಳೆ ಅವರನ್ನು ನಿವಾಸದೊಳಗೆ ಬಿಡದೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಘಟನೆ ಹಿನ್ನೆಲೆ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.






