ಕಾಶ್ಮೀರದಲ್ಲಿ ಕಾಣೆಯಾದ ಕರ್ನಾಟಕದ ಪತ್ರಕರ್ತ : ಹುಡುಕಿಕೊಡಿ ಎಂದು ಸಿಎಂ ಬಿಎಸ್ವೈಗೆ ಮನವಿ ಮಾಡಿದ ಮಡದಿ.

 

ಮೈಸೂರು, ಮೇ 08, 2020 : (www.justkannada.in news ) : ಕಾಶ್ಮೀರದಲ್ಲಿನ ಪ್ರಜಾವಾಣಿ ಪತ್ರಿಕೆಯ ವರದಿಗಾರ ಸಿದ್ದರಾಜು ಎಂಬುವವರು ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದಾರೆ. ಮಡದಿಯ ದೂರವಾಣಿ ಸಂಪರ್ಕಕ್ಕೂ ಸಿದ್ದರಾಜು ಲಭಿಸಿಲ್ಲ.
ಇದರಿಂದ ಆತಂಕಗೊಂಡ ಮಡದಿ ಭಾಗ್ಯ, ಸಿದ್ದರಾಜು ಅವರ ಡೈರಿಯಲ್ಲಿದ್ದ ಸಿ.ಎಸ್.ಧ್ವಾರಕನಾಥ್ ಅವರ ಮೊಬೈಲ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಖುದ್ದು ದ್ವಾರಕನಾಥ್ ಅವರೇ ಫೇಸ್ ಬುಕ್ ಪೇಜ್ ನಲ್ಲಿ ಬರೆದಿರುವುದು ಹೀಗೆ……

ಪತ್ರಕರ್ತ ಮಿತ್ರರೆ,
ಇಂದು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯ ವರದಿಗಾರ ಸಿದ್ದರಾಜು ಅವರ ಪತ್ನಿ ಶ್ರೀಮತಿ ಭಾಗ್ಯ. ಕೆ. ಎನ್ನುವವರು ನನಗೆ ಪೋನ್ ಮಾಡಿ ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಪತಿ ಕಳೆದ ಮೂರು ದಿನಗಳಿಂದ ಸಂಪರ್ಕಕ್ಕೆ ಸಿಗದ ಬಗ್ಗೆ ಆತಂಕ ವ್ಯಕ್ತ ಪಡಿಸಿ, ತೀರಾ ಗಾಬರಿಯಾಗಿ ಅಳುತ್ತಾ, ತಮಗೆ ಮತ್ಯಾರದೂ ಪೋನ್ ಸಿಗದ ಪರಿಣಾಮ ಸಿದ್ದರಾಜು ಅವರ ಡೈರಿಯಲ್ಲಿದ್ದ ನನ್ನ ನಂಬರಿಗೆ ಪೋನ್ ಮಾಡಿದ್ದರು. ಅವರು ಹೇಳಿದಂತೆ ವಿವರ ಪಡೆದು, ಅವರದೇ ಹೆಸರಲ್ಲಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಅವರ ಅಪ್ಪಣೆಯ ನಂತರ ಮುಖ್ಯ ಮಂತ್ರಿಗಳಿಗೆ ಈ ಕೆಳಗಿನಂತೆ ಬರೆದು ಮೇಲ್ ಮಾಡಿದ್ದೇನೆ.

ಈ ಪತ್ರದ ಕಾಪಿಯನ್ನು ಮುಖ್ಯ ಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಹಾಗೂ ‘ಪ್ರಜಾವಾಣಿ’ಯ ಪ್ರಮುಕರಿಗೆ ವಾಟ್ಸಪ್ ಮೂಲಕ ಗಮನ ಸೆಳೆದಿದ್ದೇನೆ.

ಪತ್ರಕರ್ತರಾದ ತಾವು, ದಯಮಾಡಿ ತಮ್ಮ ತಮ್ಮ ಪ್ರಭಾವಗಳನ್ನು ಬಳಸಿ ಪತ್ರಕರ್ತ ಸಿದ್ದರಾಜು ರವರನ್ನು ಹುಡುಕಿಸಿಕೊಡಲು ಹಾಗೂ ಅವರನ್ನು ಕ್ಷೇಮವಾಗಿ ಕರ್ನಾಟಕ ತಲುಪುವಂತೆ ಮಾಡಲು ಸಹಾಯ ಮಾಡಬೇಕೆಂದು ಸಿದ್ದರಾಜು ಅವರ ಪತ್ನಿ ಶ್ರೀಮತಿ ಭಾಗ್ಯ.ಕೆ. ಅವರ ಪರವಾಗಿ ಕಳಕಳಿಯಿಂದ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
– ಸಿ.ಎಸ್.ದ್ವಾರಕಾನಾಥ್

 karnataka-journalist-prajavani-reporter-missing-kashmir-letter-cm

ಶ್ರೀ ಯಡಿಯೂರಪ್ಪನವರು,
ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನಸೌದ
ಬೆಂಗಳೂರು.

ಮಾನ್ಯರೆ,
ವಿಷಯ: ಪತ್ರಕರ್ತ ಸಿದ್ದರಾಜು ಕಾಶ್ಮೀರದಲ್ಲಿ ಕಾಣೆಯಾಗಿರುವುದರ ಕುರಿತು, ಸಹಾಯ ಕೋರಿ.

ಭಾಗ್ಯ.ಕೆ, ಸಿದ್ದರಾಜುರವರ ಪತ್ನಿ ತಮ್ಮಲ್ಲಿ ವಿನಂತಿಸುವುದೇನೆಂದರೆ, ನನ್ನ ಗಂಡ ಸಿದ್ದರಾಜು ಅವರು ‘ಪ್ರಜಾವಾಣಿ’ ಪತ್ರಿಕೆಯ ವರದಿಗಾರರಾಗಿ, ನಿಯೋಜಿಸಿದಂತೆ ಕೆಲಸದ ನಿಮಿತ್ತ ಕಾಶ್ಮೀರದಲ್ಲಿ ಕೆಲಸ ಮಾಡುತಿದ್ದಾರೆ. ಅವರಿಗೆ ಕಾಶ್ಮೀರ ಹೊಸ ಜಾಗವಾದ ಕಾರಣ ಹಾಗೂ ಕರೋನ ಸಮಸ್ಯೆಯಿಂದಾಗಿ ಸರಿಯಾಗಿ ಊಟ ತಿಂಡಿ ಸಿಗದೆ ತೀರಾ ಆರೋಗ್ಯ ಕೆಟ್ಟಿರುವುದಾಗಿ ಪೋನ್ ಮಾಡಿದಾಗಲೆಲ್ಲಾ ತಿಳಿಸುತಿದ್ದರು. ಈ ವಿಷಯವನ್ನು ಅವರ ‘ಪ್ರಜಾವಾಣಿ’ ಕಚೇರಿಗೂ ತಿಳಿಸಿದ್ದರೂ ಸರಿಯಾದ ಸ್ಪಂದನೆ ಸಿಗಲಿಲ್ಲ ಎಂದು ನನಗೆ ಹೇಳಿದ್ದರು.
ಇದೀಗ ಕಳೆದ ಮೂರು ದಿನಗಳಿಂದ ನನ್ನ ಗಂಡ ಪೋನಿಗೂ ಸಿಗುತ್ತಿಲ್ಲ. ನಮ್ಮೊಂದಿಗೆ ಯಾವುದೇ ಸಂಪರ್ಕವಿಲ್ಲ. ನಾನು ಎರಡು ತಿಂಗಳ ಎಳೆ ಮಗುವಿನೊಂದಿಗೆ ನನ್ನ ತವರು ಮನೆ ನಂಜನಗೂಡು ತಾಲ್ಲೂಕಿನ ತರಗನಹಳ್ಳಿಯಲ್ಲಿದ್ದೇನೆ. ನನಗೆ ತೀವ್ರ ಆತಂಕ ಮತ್ತು ಗಾಬರಿಯಾಗಿದೆ.
‘ಪ್ರಜಾವಾಣಿ’ ಪತ್ರಿಕೆಯ ರವೀಂದ್ರ ಭಟ್ಟರಿಗೆ ಪೋನ್ ಮಾಡಿ ಕೇಳಿದರೆ “ನಮಗೇನು ಗೊತ್ತು.. ನಾವೇನು ಮಾಡುವುದು..?” ಎನ್ನುತ್ತಾರೆ, ನನ್ನ ನೋವಿಗೆ ಅವರೂ ಸರಿಯಾಗಿ ಸ್ಪಂದಿಸುತ್ತಿಲ್ಲ! ನನಗೆ ದಿಕ್ಕು ತೋಚದಂತಾಗಿದೆ.
ಆದ್ದರಿಂದ ಈ ನಾಡಿನ ಮುಖ್ಯ ಮಂತ್ರಿಗಳಾದ ತಾವು ತಮ್ಮ ಸರ್ಕಾರದ ಪ್ರಭಾವ ಬಳಸಿ ನನಗೆ ಸಹಾಯ ಮಾಡಿ ನನ್ನ ಪತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರು ಯಾವುದೇ ರೀತಿಯ ಕಷ್ಟದಲ್ಲಿದ್ದರೂ ಅವರಿಗೆ ಸಹಾಯಹಸ್ತ ನೀಡಿ. ಅವರು ನಮ್ಮ ನಾಡಿಗೆ ಸುರಕ್ಷಿತವಾಗಿ ಬರಲು ಸಹಾಯಮಾಡಬೇಕೆಂದು ನಿಮ್ಮನ್ನು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ.

ನಮಸ್ಕಾರಗಳು

ವಿಶ್ವಾಸಗಳೊಂದಿಗೆ
ದಿನಾಂಕ: ( ಬಾಗ್ಯ.ಕೆ)
8-5-2020
ವಿಳಾಸ:
ಕೆ.ಭಾಗ್ಯ
w/o ಸಿದ್ದರಾಜು
ತರಗನಹಳ್ಳಿ
ಹುಲ್ಲಹಳ್ಳಿ ಹೋಬಳಿ
ನಂಜನಗೂಡು ತಾಲ್ಲೂಕು

key words : karnataka-journalist-prajavani-reporter-missing-kashmir-letter-cm