ವರುಣನ ಕೃಪೆ : ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ನೂರಾರು ಕೆರೆಗಳು ಭರ್ತಿ..!

Karnataka-bandipura-tiger-reserve-forest-lakes-filled-with-rain-water

ಚಾಮರಾಜನಗರ, ನವೆಂಬರ್ ೧೧, ೨೦೨೧ (www.justkannada.in): ಕಳೆದ ಒಂದು ವಾರದಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಮೀಸಲು ಪ್ರದೇಶ ವ್ಯಾಪ್ತಿಯಡಿ ಬರುವ ೧೩ ವಿಭಾಗಗಳಲ್ಲಿನ ಸುಮಾರು ೩೬೩ ಕೆರೆಗಳು ತುಂಬಿದ್ದು, ಈ ಬಾರಿಯ ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ಅಭಾವ ನೀಗಿದಂತಾಗಿದೆ.

ಅರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿರುವಂತಹ ಗ್ರಾಮಗಳು ಹಾಗೂ ನಿವಾಸಿ ತಾಣಗಳಲ್ಲಿ ಮನುಷ್ಯ-ವನ್ಯಜೀವಿಗಳ ನಡುವಿನ ಸಂಘರ್ಷ ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿರುವ ಹಿನ್ನೆಲೆಯಲ್ಲಿ ಇದು ನಿಸರ್ಗಪ್ರಿಯರಿಗೆ ಆಚರಣೆಗೆ ಕಾರಣವೂ ಆದಂತಾಗಿದೆ. ಬಂಡೀಪುರ ಮೀಸಲು ಅರಣ್ಯ ಪ್ರದೇಶ ತಮಿಳುನಾಡಿನ ಮಧುಮಲೈ ಅರಣ್ಯ ಹಾಗೂ ಕೇರಳದ ವಯನಾಡು ವ್ಯಾಪ್ತಿಗೆ ಹೊಂದಿಕೊಂಡಂತಿದೆ. ಈ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿಯೂ ಸಹ ಈ ಬಾರಿ ಉತ್ತಮ ಮಳೆಯಾಗಿದೆ ಎನ್ನಲಾಗಿದೆ.

ಬಂಡೀಪುರ ಹುಲಿ ಮೀಸಲು ಪ್ರದೇಶ ೧,೦೨,೦೦ ಹೆಕ್ಟೇರ್ (೧,೦೨೭ ಚದರ ಕಿ.ಮೀ.) ವ್ಯಾಪ್ತಿಯಲ್ಲಿ ಹರಡಿದೆ. ಇಲ್ಲಿರುವ ಬಹುತೇಕ ಎಲ್ಲಾ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಸತತ ಮಳೆ ಹಾಗೂ ಕೆರೆಗಳಲ್ಲಿ ತುಂಬಿ ಹರಿಯುತ್ತಿರುವ ನೀರಿನಿಂದಾಗಿ, ಈ ಬಾರಿ ಈ ಭಾಗದ ವನ್ಯಜೀವಿಗಳು ನೀರನ್ನು ಹುಡುಕಿಕೊಂಡು ಕಬಿನಿ, ಮಧುಮಲೈ ಹಾಗೂ ನಾಗರಹೊಳೆ ಕಾಡುಗಳಿಗೆ ಹೋಗುವುದು ತಪ್ಪಿದೆ.
ಈ ಮಳೆಗಾಲದಲ್ಲಿ ಸಂಪೂರ್ಣವಾಗಿ ತುಂಬುವ ನೀರಿನ ಮೂಲಗಳು ಬೇಸಿಗೆಯಲ್ಲಿ ವನ್ಯಜೀವಿಗಳ ದಾಹವನ್ನು ನೀಗಿಸಲಿದೆ. ಒಂದು ವೇಳೆ ಈ ಕೆರೆಗಳು ತುಂಬದಿದ್ದರೆ ಅರಣ್ಯ ಇಲಾಖೆಯು ಸೌರ ವಿದ್ಯುತ್ ಪಂಪುಗಳನ್ನು ಬಳಸಿ ಈ ನೀರಿನ ಮೂಲಗಳಿಗೆ ನೀರನ್ನು ಹರಿಸಿ ತುಂಬಿಸುತ್ತದೆ. ಆದರೆ ಈ ಬಾರಿ ಅದರ ಅಗತ್ಯವಿರುವುದಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ಚಿತ್ರ ಕೃಪೆ : ಇಂಟರ್ ನೆಟ್

ಬಂಡೀಪುರ ವಿಭಾಗದಡಿ ಬರುವ ನೀಲಕಂಠರಾವ್, ಸೊಲ್ಲಿಕಟ್ಟೆ, ತಾವರೆಗಟ್ಟೆ ಕೆರೆಗಳು; ಕುಂದುಕೆರೆ ವಿಭಾಗದಲ್ಲಿ ಬರುವ ಮಾಲಗತ್ತೆ, ಕಡುಬೂರುಕಟ್ಟೆ, ದೇವರಮಡು ಕೆರೆಗಳು, ಹಾಗೂ ಗೋಪಾಲಸ್ವಾಮಿ ಬೆಟ್ಟ ಪ್ರದೇಶ ವ್ಯಾಪ್ತಿಯಡಿ ಬರುವ ಹಿರೆಕೆರೆ, ಕೊಳಚಿಕಟ್ಟೆ, ಹಗ್ಗದಹಳ್ಳದ ಕಟ್ಟೆ ಕೆರೆಗಳು ವನ್ಯಜೀವಿಗಳಿಗೆ ನೀರನ್ನು ಪೂರೈಸುವ ಪ್ರಮುಖ ನೀರಿನ ಮೂಲಗಳೆಂದು ಹೇಳಲಾಗಿದ್ದು, ಪ್ರಸ್ತುತ ಈ ಎಲ್ಲಾ ಕೆರೆಗಳು ನೀರಿನಿಂದ ತುಂಬಿವೆ.

ಈ ನಡುವೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಬಂಡೀಪುರ ದೇಶದ ಒಟ್ಟು ಒಂಬತ್ತು ಹುಲಿ ಮೀಸಲು ಪ್ರದೇಶಗಳ ಪೈಕಿ ಒಂದಾಗಿದೆ. ಮೇಲಾಗಿ ಇದು ಕಳೆದ ಮೂರು ದಶಕಗಳಿಂದ ಪರಿಸರ-ಪ್ರವಾಸೋದ್ಯಮದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : Karnataka-bandipura-tiger-reserve-forest-lakes-filled-with-rain-water