ಹೊಗೇನಕ್ಕಲ್ ಫಾಲ್ಸ್ ಗೆ NO ENTRY..!

 

ಬೆಂಗಳೂರು, ನವೆಂಬರ್ ೧೧, ೨೦೨೧ (www.justkannada.in): ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಬಹುತೇಕ ಎಲ್ಲಾ ಜಲಾಶಯಗಳೂ ತುಂಬುತ್ತಿವೆ. ಹೆಚ್ಚಿನ ಮಳೆಯ ಹಿನ್ನೆಲೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೊಗೇನಕ್ಕಲ್ ಜಲಾಶಯಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಆದರೆ ಈ ಬಗ್ಗೆ ಮಾಹಿತಿ ಇಲ್ಲದಿದ್ದ ಕಾರಣದಿಂದಾಗಿ ವಾರಾಂತ್ಯದಲ್ಲಿ ತುಂಬಿ ಹರಿಯುತ್ತಿರುವ ಜಲಪಾತವನ್ನು ನೋಡಿ ಆನಂದಿಸಲು ತೆರಳಿದ್ದಂತಹ ಅನೇಕರು ನಿರಾಸೆಯೊಂದಿಗೆ ಹಿಂದಿರುಗಬೇಕಾಯಿತು.

ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಟೆಕ್ಕಿ ಧನುಷ್ ಎಸ್. ಪ್ರಕಾರ, “ನಾವು ಭಾನುವಾರದಂದು ಹೊಗೇನಕ್ಕಲ್ ಜಲಾಶಯಕ್ಕೆ ಭೇಟಿ ನೀಡಲು ಹೋಗಿದ್ದೆವು. ಆದರೆ ಅಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ ತುಂಬಾ ನಿರಾಸೆಯಾಯಿತು. ಈ ಕುರಿತು ಮೊದಲೇ ಮಾಹಿತಿ ಇಲ್ಲದಿರುವುದು ಹೆಚ್ಚಿನ ನಿರಾಸೆಗೆ ಕಾರಣವಾಗಿದೆ. ಹಾಗಾಗಿ ನಾನು ಈ ಸಂದೇಶವನ್ನು ಎಲ್ಲರಿಗೂ ಕಳುಹಿಸಲು ಬಯಸುತ್ತೇನೆ. ಸದ್ಯಕ್ಕೆ ಹೊಗೇನಕ್ಕಲ್‌ನ ಮುಖ್ಯ ಜಲಪಾತಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹತ್ತಿರದಿಂದ ನೋಡಲು ತೆರಳುವವರಿಗೆ ನಿರಾಸೆಯಾಗುತ್ತದೆ. ಆದರೆ ಆಯಿಲ್ ಮಸಾಜ್, ಮೀನಿನ ಆಹಾರದಂತಹ ಇತರೆ ಚಟುವಟಿಕೆಗಳು ಜಾರಿಯಲ್ಲಿದೆ,” ಎಂದರು.

ಬೆಂಗಳೂರಿನವರೇ ಆದ ಮತ್ತೋರ್ವ ಪ್ರವಾಸಿ ದೇವಿ ಎಸ್ ಅವರು, “ಪೆನ್ನಗರಂ ಬಳಿ ಜಲಪಾತದ ಪ್ರವೇಶವನ್ನು ಪ್ರವೇಶಿಸುವಾಗ ನಮಗೆ ರೂ.೧೦೦ ಪ್ರವೇಶ ಶುಲ್ಕವನ್ನು ವಿಧಿಸಲಾಯಿತು. ಮುಖ್ಯ ಜಲಪಾತದ ಬಳಿ ತೆರಳುವವರೆಗೂ ನಮಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಯಾರೂ ತಿಳಿಸುವುದೇ ಇಲ್ಲ. ಅಲ್ಲಿ ಗೇಟ್‌ಗಳನ್ನು ಮುಚ್ಚಲಾಗಿದೆ, ಪೋಲಿಸ್ ಕಾವಲಿದೆ. ವಾಸ್ತವದಲ್ಲಿ ತೆಪ್ಪದಲ್ಲಿ ತೆರಳಲು ರೂ.೭೫೦ ಶುಲ್ಕ ವಿಧಿಸಲಾಗುತ್ತಿದೆ. ಇದು ಬಹಳ ದುಬಾರಿ ಅಲ್ಲವೇ?

ಚಿತ್ರ ಕೃಪೆ : ಇಂಟರ್ ನೆಟ್

ಬೆಂಗಳೂರಿನಿಂದ ಅಲ್ಲಿಗೆ ತೆರಳಲು ಐದರಿಂದ ಆರು ಗಂಟೆಗಳೇ ಬೇಕಾಗುತ್ತದೆ. ಆದರೆ ಮಾಹಿತಿ ಕೊರತೆಯಿಂದಾಗಿ ಅಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು, ಅಲ್ಲಿಗೆ ಹೋದ ನಂತರ ನಿರಾಸೆಯಾಗುತ್ತದೆ,” ಎಂದರು.

ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗರಿಷ್ಠ ೧೨೦ ಅಡಿ ಸಾಮರ್ಥ್ಯವಿರುವ ಮೆಟ್ಟೂರು ಜಲಾಶಯ ಭಾನುವಾರದಂದು ೧೧೬ ಅಡಿ ಮಟ್ಟವನ್ನು ದಾಟಿತ್ತು. ಜಲಾಶಯದ ನೀರಿನ ಒಳಹರಿವು ಶನಿವಾರದಂದು ೧೫,೭೪೦ ಕ್ಯೂಸೆಕ್‌ಗಳಷ್ಟಿತ್ತು. ಭಾನುವಾರ ಮುಂಜಾನೆಯ ಹೊತ್ತಿಗೆ ಅದು ೨೯,೩೮೦ ಕ್ಯೂಸೆಕ್ ತಲುಪಿತ್ತು. ಜಲಾಶಯದ ನೀರಿನ ಸಂಗ್ರಹ ಮಟ್ಟ ೧೧೪.೪೬ ಅಡಿಗಳಿಂದ ೧೧೬.೧ ಅಡಿಗೆ ಹೆಚ್ಚಾಯಿತು.
ಆದರೆ ಅಲ್ಲಿನ ಸ್ಥಳೀಯ ಪೋಲಿಸರು ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ ಅಲ್ಲಿಗೆ ತೆರಳುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಹೊಗೇನಕ್ಕಲ್ ಹಾಗೂ ಬಿಳಿಗುಂಡ್ಲು ನಡುವೆ ತುಂಬಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಇಳಿಯುವ ದುಸ್ಸಾಹಸ ಮಾಡುತ್ತಿದ್ದಾರಂತೆ. “ಅದು ಬಹಳ ಅಪಾಯಕಾರಿ ಹಾಗಾಗಿ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಚಿತ್ರ ಕೃಪೆ : ಇಂಟರ್ ನೆಟ್

ಬಿಳಿಗುಂಡ್ಲು ಪ್ರದೇಶದ ಬಳಿ ಕಾವೇರಿ ನದಿ ಮುಕ್ತವಾಗಿರುವ ಕಾರಣದಿಂದಾಗಿ ಅಲ್ಲಿಗೆ ಈಗ ಹೆಚ್ಚಿನ ಜನರು ತೆರಳುತ್ತಿದ್ದಾರೆ. ಅಲ್ಲಿ ರಸ್ತೆಯೂ ಸಹ ಬಹಳ ಕಿರಿದಾಗಿದೆ. ಆದರೂ ಅಲ್ಲೇ ಅನೇಕ ಕಾರುಗಳನ್ನು ನಿಲ್ಲಿಸಿರುತ್ತಾರೆ, ಇದರಿಂದಾಗಿ ಟ್ರಾಫಿಕ್ ಜ್ಯಾಮ್ ಕೂಡ ಆಗುತ್ತಿದೆ. ನದಿಯಲ್ಲಿ ಅನೇಕ ಸುಳಿಗಳು ಹಾಗೂ ಮೊಸಳೆಗಳಿವೆ. ಹಾಗಾಗಿ ನಾವು ಜನರು ನದಿಗೆ ಇಳಿಯುವುದನ್ನು ತಡೆಗಟ್ಟುತ್ತಿದ್ದೇವೆ. ಆದರೂ ಸಹ ಹೇಗೋ ನಮ್ಮ ಕಣ್ಣು ತಪ್ಪಿಸಿ ಹಲವರು ನದಿಯೊಳಗೆ ಇಳಿದು ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಹಾಗಾಗಿ ನಾವು ಇಂತಹ ಸಮಯದಲ್ಲಿ ಇಂತಹ ದುಸ್ಸಾಹಸಗಳಿಗೆ ಪ್ರಯತ್ನಿಸದಿರಿ ಎಂದು ಕೇಳಿಕೊಳ್ಳುತ್ತೇವೆ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : Karnataka-cauvery over flow – hogenakkal falls-Bangalore