ಪ್ರೇಮಿಗಳ ದಿನಕ್ಕೆ ‘ಗಿಫ್ಟ್ ಬಾಕ್ಸ್’

* ಚಿನ್ನಸ್ವಾಮಿ ವಡ್ಡಗೆರೆ
ಮಾನವ ಕಳ್ಳಸಾಗಾಟದ (ಹ್ಯೂಮನ್ ಟ್ರಾಫಿಕ್) ಜಾಲದಲ್ಲಿ ಸಿಲುಕಿದ ಅಮಾಯಕನೊಬ್ಬ ವಿಟ ಪುರುಷನಿಗೆ ಅಬಲೆಯನ್ನು ಒಪ್ಪಿಸಿ ಮನೆಗೆ ಬಂದು ತನ್ನ ಪತ್ನಿ,ಮಗಳು,ತಾಯಿಯನ್ನು ಹೇಗೆ ಎದುರುಗೊಳ್ಳುತ್ತಾನೆ ? . ಸರಿರಾತ್ರಿಯ ಅವನ ಕನಸುಗಳ ಕತೆ ಏನು ? ಗೆಳೆಯರಿಗೆ ತನ್ನ ವೃತ್ತಿ ಏನೆಂದು ಹೇಳಿಕೊಳ್ಳುತ್ತಾನೆ ?. ಅವನ ಸಾಮಾಜಿಕ ಸಂಬಂಧಗಳ ಕತೆ ಏನು ?. ಇಂತಹ ಹತ್ತಾರು ಪ್ರಶ್ನೆಗಳು ಎದುರಾಗುವ ನೈಜ ಘಟನೆಯೊಂದರ ಸುತ್ತಾ ಎಣೆದುಕೊಳ್ಳುವ ಸೈಕಾಲಜಿಕಲ್ ಥ್ರಿಲ್ಲರ್ ಸ್ಟೋರಿ ` ಗಿಫ್ಟ್ ಬಾಕ್ಸ್ ‘.

ಹಳ್ಳಿ ಹಕ್ಕಿ ಬ್ಯಾನರ್ ಅಡಿ ತನ್ನ ಚೊಚ್ಚಿಲ ಸಿನಿಮಾ `ಪಲ್ಲಟ’ ಕ್ಕಾಗಿ ಹಲವಾರು ಪ್ರಶಸ್ತಿ ಪಡೆದು ಭರವಸೆ ಮೂಡಿಸಿದ್ದ ನಿರ್ದೇಶಕ ಎಸ್.ಪಿ.ರಘು ಅವರ ಎರಡನೆ ಸಿನಿಮಾ `ಗಿಫ್ಟ್ ಬಾಕ್ಸ್ ‘ ಇದೆ ಫೆಬ್ರವರಿ 14 ರಂದು ಪ್ರೇಮಿಗಳ ದಿನ ತೆರೆಕಾಣಲಿದೆ.

ಮಾನವ ಕಳ್ಳಸಾಗಾಣಿಕೆ ಮಾಡುವ ವ್ಯಕ್ತಿ ಮತ್ತು ಲಾಕ್ಡ್ ಇನ್ ಸಿಂಡ್ರೋಮ್ ಎಂಬ ನರರೋಗ ಸಮಸ್ಯೆ ಕುರಿತ ಕಥಾ ಹಂದರವುಳ್ಳ ಗಿಫ್ಟ್ ಬಾಕ್ಸ್ ಮಾನವ ಕಳ್ಳಸಾಗಾಣಿಕೆ ಜಾಲದಲ್ಲಿ ಸಿಲುಕಿ ಹೊರಬರಲಾಗದೆ ನರಳುತ್ತಿರುವವರಿಗೆ ವಿಷವತರ್ುಲದಿಂದ ಹೊರಬಂದು ಬದುಕು ಕಟ್ಟಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತದೆ .
ಕನ್ನಡದಲ್ಲಿ ಇಂತಹ ಜಟಿಲ ಸಮಸ್ಯೆಗಳನ್ನು ಇಟ್ಟುಕೊಂಡು ಸಿನಿಮಾಗಳನ್ನು ತೆಗೆದಿರುವುದು ಕಡಿಮೆ. ಪುಟ್ಟಣ ಕಣಗಾಲ್ ನಿದರ್ೇಶನದಲ್ಲಿ ಅಂಬರೀಷ್ ನಾಯಕನಾಗಿ ನಟಿಸಿದ ` ಮಸಣದ ಹೂ ‘ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಹೆಣ್ಣಿನ ಕತೆಯನ್ನೆ ಕೇಂದ್ರವಾಗಿಟ್ಟುಕೊಂಡು ತೆಗೆದ ಸಿನಿಮಾ .

ಈ ಜಾಲದಲ್ಲಿ ಸಿಲುಕಿದ ಗಂಡಸಿನ ತುಮುಲಗಳು. ತೊಳಲಾಟಗಳಿಗೆ ಮಸಣದ ಹೂ ಚಿತ್ರದಲ್ಲಿ ಜಾಗ ಇಲ್ಲ. ಆದರೆ ಗಿಫ್ಟ್ ಬಾಕ್ಸ್ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಗಂಡಸಿನ ತೊಳಲಾಟ, ಮಾನಸಿಕ ತುಮುಲಗಳನ್ನು ಹೇಳುತ್ತದೆ. ಪುನೀತ್ ರಾಜ್ಕುಮಾರ್ ಅವರ `ಜಾಕಿ ‘ ಚಿತ್ರ ಕೂಡ ಮಾನವ ಕಳ್ಳಸಾಗಾಣಿಕೆ ಕತೆಯನ್ನು ಹೇಳುತ್ತದೆಯಾದರೂ ಅದೊಂದು ಪಕ್ಕ ಕಮಷರ್ಿಯಲ್ ಚಿತ್ರ . ನಾಯಕ ಪ್ರಧಾನ ಚಿತ್ರ . ಆದರೆ ಗಿಫ್ಟ್ ಬಾಕ್ಸ್ ಒಂದು ಕಲಾತ್ಮಕ ಚಿತ್ರ . ಇಲ್ಲಿ ಕತೆಯೇ ನಾಯಕ, ನಾಯಕಿ . ಈ ಚಿತ್ರದ ಮತ್ತೊಂದು ವೈಶಿಷ್ಠ್ಯವೆಂದರೆ ಇಡೀ ಚಿತ್ರವನ್ನು `ಸಿಂಕ್ ಸೌಂಡ್’ ನಲ್ಲಿ ಚಿತ್ರೀಕರಣ ಮಾಡಿರುವುದು . ರಿತ್ವಿಕ್ ಮಠದ್ ನಾಯಕನಾಗಿರುವ ಚಿತ್ರದಲ್ಲಿ ಅಮಿತ್ ಕುಲಾಲ್ ಮತ್ತು ದೀಪ್ತಿ ಮೋಹನ್ ನಾಯಕಿಯಾಗಿದ್ದು ತಾರಾಗಣದಲ್ಲಿ ಗುಂಡಣ್ಣ, ಶಿವಾಜಿರಾವ್ ಜಾದವ್, ಪ್ರೊ.ಲಕ್ಷ್ಮಿ ಚಂದ್ರಶೇಖರ್ ಇದ್ದಾರೆ.

” ಲೈಂಗಿಕವಾಗಿ ಶೋಷಣೆಗೆ ಒಳಪಟ್ಟ ಹೆಣ್ಣುಮಕ್ಕಳು , ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ, ಸಬಲೀಕರಣಕ್ಕಾಗಿ ಹೋರಾಟ ಮಾಡುತ್ತಿರುವ ಮೈಸೂರಿನ ಒಡನಾಡಿ ಸಂಸ್ಥೆಯ ಮಕ್ಕಳಿಗೆ ನಾಟಕವೊಂದನ್ನು ಮಾಡಿಸುತ್ತಿದ್ದಾಗ ಈ ಚಿತ್ರದ ಕತೆಯ ಬೀಜ ತನ್ನೊಳಗೆ ಮೊಳಕೆಯೊಡೆಯಿತು . ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿಪರಶು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಮಯದಲ್ಲಿ ಮೈಸೂರಿನಲ್ಲೇ ನಡೆದ ನೈಜ ಘಟನೆಯನ್ನು ಅವರು ಹೇಳಿದಾಗ ಕತೆ ಚಿತ್ರವಾಗಿ ತೆರೆದುಕೊಳ್ಳುತ್ತಾ ಹೋಯಿತು. ಲೈಂಗಿಕ ಕಾರ್ಯಕತರ್ೆಯರನ್ನು ಸಮಾಜ ಕೆಟ್ಟ ದೃಷ್ಠಿಯಿಂದ ನೋಡುತ್ತದೆ . ಹಾಗೆ ಈ ಜಾಲದಲ್ಲಿ ಸಿಲುಕಿಕೊಂಡ ಗಂಡಸು ಅದಕ್ಕಿಂತ ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಾ ಕಾಣದ ಕೈಗಳ ದಾಳವಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡು ಪಗಡೆ ಕಾಯಿಯಾಗುತ್ತಾನೆ . ದೂರದಲ್ಲಿ ಎಲ್ಲೊ ಕುಳಿತ ದುಷ್ಟಶಕ್ತಿಗಳು ಇಂತಹ ಅಮಾಯಕ ಮುಗ್ಧ ಜನರನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಾರೆ . ಇಂತಹ ಜಾಲದಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬ ಈ ವಿಷವತರ್ುಲದಿಂದ ಹೊರಬಂದು ಬದುಕು ಕಟ್ಟಿಕೊಂಡರೆ ನೂರಾರು ಅಮಾಯಕ ಹೆಣ್ಣು ಮಕ್ಕಳು ಹಾದಿ ತಪ್ಪಿ ತಮ್ಮ ಬದುಕನ್ನು ಕರಾಳ ಮಾಡಿಕೊಳ್ಳುವುದು ತಪ್ಪುತ್ತದೆ . ಗಿಫ್ಟ್ ಬಾಕ್ಸ್ ಚಿತ್ರಕೂಡ ಈ ಸಂದೇಶವನ್ನೆ ಹೇಳುತ್ತದೆ. ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಕೊಂಡ ಮುಗ್ಧ ಅಮಾಯಕ ಹೇಗೆ ಆ ಜಾಲದಿಂದ ಬಿಡಿಸಿಕೊಂಡ ಎನ್ನುವುದನ್ನು ಚಿತ್ರನೋಡಿ ತಿಳಿಯಬೇಕು ” ಎನ್ನುತ್ತಾರೆ ಚಿತ್ರದ ನಿರ್ದೇಶಕ ರಘು.

ಹಳ್ಳಿ ಪ್ರತಿಭೆ : ಬಾಲ್ಯದಿಂದಲ್ಲೇ ಸಿನಿಮಾ ಹುಚ್ಚು ಹಿಡಿಸಿಕೊಂಡ ರಘು ಅಪ್ಪಟ ಹಳ್ಳಿ ಪ್ರತಿಭೆ . ಅದಕ್ಕಾಗಿಯೇ ತಮ್ಮ ಸಂಸ್ಥೆ ಬ್ಯಾನರ್ ಗೆ `ಹಳ್ಳಿ ಹಕ್ಕಿ ‘ ಎಂದು ಕರೆದುಕೊಂಡಿದ್ದಾರೆ . ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಾಣೇಹಳ್ಳಿಯಿಂದ ಬಂದ ರಘು ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು, ಸಾಂಸ್ಕೃತಿಕ ಕಲೆಗಳನ್ನು ಉಳಿಸಿಕೊಂಡು ಹೋಗುಬ ಹಂಬಲ ಹೊಂದಿದ್ದಾರೆ. ಜಾಗತೀಕರಣದ ಪರಿಣಾಮ ಹಳ್ಳಿಗಳ ಸಾಂಸ್ಕೃತಿಕ ಬದುಕು ಹೇಗೆ ದುರಂತದ ಹಾದಿ ಹಿಡಿದಿದೆ ಎನ್ನುವುದನ್ನು ತಮ್ಮ `ಪಲ್ಲಟ’ ಚಿತ್ರದ ಮೂಲಕ ತೋರಿಸಿದ್ದರು . ಅನಾನುಭವಿಗಳ ತಂಡವನ್ನು ಕಟ್ಟಿಕೊಂಡು ತೆಗೆದ ಮೊದಲ ಚಿತ್ರದಲ್ಲೆ ಮೆಚ್ಚುಗೆಗಳಿಸಿದ್ದರು . ಬೆಂಗಳೂರಿನಲ್ಲಿ ಸಮಾನ ಮನಸ್ಕರೊಂದಿಗೆ `ರಂಗತಂತು’ ಎಂಬ ನಾಟಕ ತಂಡ ಕಟ್ಟಿಕೊಂಡು ಆಲ್ಬಟರ್್ ಕಮೂ ಅವರ ಕ್ರಾಸ್ ಪರ್ಪಸ್ ಎಂಬ ಕತೆಯಾಧಾರಿತ `ಸುಳಿ’ ಎಂಬ ನಾಟಕ ನಿರ್ದೇಶನ ಮಾಡಿದ್ದರು .

ಓದು ಮುಗಿಸಿದ ನಂತರ ಔಷಧ ಕಂಪನಿಯ ಹೆಡ್ ಆಗಿ ದ.ಆಫ್ರೀಕಾದಲ್ಲಿ ಕೆಲಕಾಲ ಕೆಲಸ ಮಾಡಿ ಭಾರತಕ್ಕೆ ಹಿಂತಿರುಗಿದ ನಂತರ ಸಿನಿಮಾ, ನಾಟಕದ ಮೂಲಕ ಸಮಾಜದ ಬದಲಾವಣೆಗಾಗಿ ದುಡಿಯುತ್ತಿದ್ದಾರೆ . ಕೆಲಕಾಲ `ಸಂಜೆ ಸಂತೆ ‘ ಎಂಬ ಬ್ಲಾಗ್ನಲ್ಲಿ ಕತೆ ಕವಿತೆ ಬರೆಯುತ್ತಿದ್ದ ರಘು ಈಗ ಸದಾ ಸಿನಿಮಾ ಗುಂಗಿನಲ್ಲಿದ್ದಾರೆ .
ತನ್ನೂರಿನ ಭೀಮಣ್ಣನ ಬದುಕನ್ನು ಹತ್ತಿರಿದಿಂದ ಕಂಡಿದ್ದ ರಘು, ಭೀಮಣ್ಣನ ದುರಂತದ ಬದುಕನ್ನೆ `ಪಲ್ಲಟ’ ದ ಮೂಲಕ ತೋರಿಸಿದ್ದರು . ಚರ್ಮವಾದ್ಯಗಳ ಸ್ಥಾನವನ್ನು ಫೈಬರ್ ವಾದ್ಯಗಳು ಆಕ್ರಮಿಸಿಕೊಂಡ ಪರಿಣಾಮ ಹೇಗೆ ಒಂದು ಹಳ್ಳಿಯ ಬದುಕು ಪಲ್ಲಟವಾಯಿತು ಎಂದು ಪರಿಣಾಮಕಾರಿಯಾಗಿ ಹೇಳಿದ್ದರು .

ಡೆಲ್ಲಿ ಹಾಗೂ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕಂಡ ಪಲ್ಲಟ ಇಂಗ್ಲಂಡ್, ಆಸ್ಟ್ರೇಲಿಯಾ, ರಷ್ಯಾ, ಎನ್ಎಫ್ಡಿಸಿ ಯಿಂದ ಬಂದ ಜ್ಯೂರಿಗಳಿಂದಲೂ ಮೆಚ್ಚುಗೆ ಪಡೆದು ಪ್ರಶಸ್ತಿ ಗಳಿಸಿದ್ದು ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ರಘು ಭಾವುಕರಾಗುತ್ತಾರೆ .
ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಲ್ಲಟ ಅತ್ಯುತ್ತಮ ದ್ವೀತಿಯ ಚಲನಚಿತ್ರ ಪ್ರಶಸ್ತಿಗಳಿಸಿತ್ತು . ಅಕ್ಷತಾ ಪಾಂಡವಪುರ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರವಾಗಿದ್ದರು. ಈಗ ಬಹು ನಿರೀಕ್ಷಿತ ಗಿಫ್ಟ್ ಬಾಕ್ಸ್ ಇದೆ ಫೆ.14 ರಂದು ಪ್ರೇಮಿಗಳ ದಿನ ತೆರೆಕಾಣಲಿದೆ. ಸಿನಿಮಾ ನೋಡಿ ಪ್ರೋತ್ಸಾಹ ನೀಡಿ.