ಇಂದು ಬಿಜೆಪಿಗೆ ಸೇರ್ಪಡೆ: ಹುಣಸೂರು ಬೈ ಎಲೆಕ್ಷನ್ ನಲ್ಲಿ  ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಿ.ಹೆಚ್ ವಿಜಯ್ ಶಂಕರ್…

ಮೈಸೂರು,ನ,5,2019(www.justkannada.in):   ಮಾಜಿ ಸಚಿವ ಸಿ.ಹೆಚ್ ವಿಜಯ್ ಶಂಕರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದು ಈ ನಡುವೆ ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೇರ್ಪಡೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಹೆಚ್ ವಿಜಯ್ ಶಂಕರ್, ಜನ ಕೊಟ್ಟ ಅಧಿಕಾರ ಇರಬೇಕು ಅಥವಾ ಪಕ್ಷದ ಜವಾಬ್ದಾರಿಯಾದರೂ ಇರಬೇಕು. ಕಾಂಗ್ರೆಸ್‌ ನಲ್ಲಿ ಎರಡೂ ಸಿಗಲಿಲ್ಲ.ಈ ಹಂತದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಹ್ವಾನ ನೀಡಿದ್ದಾರೆ.  ಆದ್ದರಿಂದ ಇಂದು ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ನನ್ನ ನಡುವೆ 40 ವರ್ಷಗಳ ಸಂಬಂಧವಿದೆ. ಸಿದ್ದರಾಮಯ್ಯ ಅವರ ಮೇಲೆ ವೈಯುಕ್ತಿಕವಾಗಿ ಈಗಲೂ ಅಪಾರ ಗೌರವವಿದೆ. ಇಬ್ಬರೂ ಬೇರೆ ಬೇರೆ ರಾಜಕೀಯ ಸನ್ನಿವೇಶಗಳಲ್ಲಿ ಬೆಳೆದುಕೊಂಡು ಬಂದಿದ್ದೇವೆ. ಸಕ್ರಿಯ ರಾಜಕಾರಣದಲ್ಲಿ ನನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ಸಿಹೆಚ್ ವಿಜಯ್ ಶಂಕರ್ ತಿಳಿಸಿದ್ದಾರೆ.

ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿರುವ ಸಿಹೆಚ್ ವಿಜಯ್ ಶಂಕರ್, ನನಗೆ ಹುಣಸೂರು ಕ್ಷೇತ್ರ ಹೊಸದಲ್ಲ. ಈಗಾಗಲೇ ಹುಣಸೂರಿನಿಂದ ಶಾಸಕನಾಗಿ ಆಯ್ಕೆಯಾಗಿದ್ದೆ‌. ಈಗ ಬಿಜೆಪಿಗೆ ಗೆಲುವು ಅನಿವಾರ್ಯ ಎನ್ನುವ ಸ್ಥಿತಿ ಇದೆ. ನಾನು ಸನ್ಯಾಸಿ ಅಲ್ಲ ಉಪಚುನಾವಣೆಯ ಅಭ್ಯರ್ಥಿಯಾಗಲು ಸಿದ್ಧನಿದ್ದೇನೆ. ಅಂದ ಮಾತ್ರಕ್ಕೆ ಯಾವುದೇ ಒತ್ತಡ ಹಾಕುವುದಿಲ್ಲ. ಪಕ್ಷ ನಾನು ಅಭ್ಯರ್ಥಿಯಾಗಬೇಕೆಂದು ಬಯಸಿದರೆ ಖಂಡಿತ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Key words: Join-BJP -CH Vijay Shankar- expressed – contest –hunsur- by-election