ಗೂಗಲ್ ಮುಖ್ಯಸ್ಥ ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ…

ವಾಷಿಂಗ್ಟನ್, ಡಿಸೆಂಬರ್ 23, 2022 (www.justkannada.in): “ಭಾರತ ನನ್ನ ಒಂದು ಭಾಗ, ನಾನು ಎಲ್ಲಿ ಹೋದರೂ ನನ್ನ ಹುಟ್ಟಿನ ಮೂಲವನ್ನು ಕೊಂಡೊಯ್ಯುತ್ತೇನೆ,” ಎಂದು ಯುಎಸ್‌ ನಲ್ಲಿ ಭಾರತೀಯ ರಾಯಭಾರಿ ಕಚೇರಿಯಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುತ್ತಾ, ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಅವರು ತಿಳಿಸಿದರು.

ಭಾರತೀಯ ಮೂಲದ ಅಮೇರಿಕಾ ನಿವಾಸಿ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕಾ ವರ್ಗದಡಿ ೨೦೨೨ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ ಅವರು, ಈ ವರ್ಷ ಪದ್ಮ ಪ್ರಶಸ್ತಿಗಳನ್ನು ಪಡೆದ ಒಟ್ಟು ೧೭ ಸಾಧಕರ ಪೈಕಿ ಸೇರಿದ್ದಾರೆ.

ಪಿಚೈ ಅವರು, ಶುಕ್ರವಾರದಂದು ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಕುಟುಂಬದ ಹತ್ತಿರದ ಸದಸ್ಯರ ಉಪಸ್ಥಿತಿಯಲ್ಲಿ ಭಾರತದ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು.

“ಈ ಅತ್ಯುನ್ನತ ಗೌರವವನ್ನು ನೀಡಿರುವುದಕ್ಕಾಗಿ ಭಾರತ ಸರ್ಕಾರಕ್ಕೆ ಹಾಗೂ ಭಾರತೀಯರಿಗೆ ನನ್ನ ಹೃತ್ಪೂವರ್ಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿರುವ ದೇಶದಿಂದ ಈ ಗೌರವವನ್ನು ಪಡೆಯುವುದು ಅತ್ಯಂತ ಶ್ರೇಷ್ಠ ಹಾಗೂ ಅರ್ಥಪೂರ್ಣ,” ಎಂದು ಯುಎಸ್‌ ನಲ್ಲಿ ಭಾರತದ ರಾಯಭಾರಿ ತರನ್‌ಜಿತ್ ಸಿಂಗ್ ಸಂಧು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ೫೦-ವರ್ಷ-ವಯಸ್ಸಿನ ಪಿಚೈ ಅವರು ತಿಳಿಸಿದರು.

“ಕಲಿಕೆ ಹಾಗೂ ಜ್ಞಾನಕ್ಕೆ ಆದ್ಯತೆ ನೀಡುತ್ತಿದ್ದಂತಹ ಕುಟುಂಬದಲ್ಲಿ ಜನಿಸಿದ್ದಕ್ಕೆ ನಾನು ಸ್ವತಃ ಬಹಳ ಅದೃಷ್ಟವಂತ ಎಂದು ಭಾವಿಸುತ್ತೇನೆ. ನನ್ನ ಆಸಕ್ತಿಗಳನ್ನು ಪರಿಶೋಧಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಒದಗಿಸಿಕೊಟ್ಟಂತಹ ನನ್ನ ಪೋಷಕರ ತ್ಯಾಗವನ್ನು ನಾನು ಎಂದಿಗೂ ಮರೆಯುವುದಿಲ್ಲ,” ಎಂದು ಪಿಚೈ ತಿಳಿಸಿದರು. ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿರುವ ಭಾರತದ ಕೌನ್ಸಲ್ ಜನರಲ್ ಟಿ.ವಿ. ನಾಗೇಂದ್ರ ಪ್ರಸಾದವರೂ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಪರಿವರ್ತನೆಗಾಗಿ ಮಿತಿಯಲ್ಲದ ಸಾಧ್ಯತೆಗಳನ್ನು ಪಿಚೈ ಅವರು ಪ್ರತಿನಿಧಿಸುತ್ತಾರೆ ಎಂದು ಸಂಧು ಈ ಸಂದರ್ಭದಲ್ಲಿ ಅಭಿಪ್ರಾಯಿಸಿದರು. “ಸುಂದರ್ ಪಿಚೈ ಅವರು, ಜಗತ್ತಿನ ವಿವಿಧ ಭಾಗಗಳಲ್ಲಿನ ಸಮಾಜದ ವಿವಿಧ ಸ್ಥರಗಳಾದ್ಯಂತ ಡಿಜಿಟಲ್ ಸಾಧನಗಳು, ಹಾಗೂ ಕೌಶಲ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಅವಿಸ್ಮರಣೀಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ,” ಎಂದರು.

ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಕ್ಷಿಪ್ರ ಪರಿವರ್ತನೆಯನ್ನು ಸ್ವತಃ ಕಾಣಲು ಕೆಲವು ವರ್ಷಗಳಲ್ಲಿ ಹಲವು ಬಾರಿ ಭೇಟಿ ನೀಡುವ ಅವಕಾಶ ಲಭಿಸಿದ್ದು ನನ್ನ ಸುದೈವ. ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಶೋಧನೆಗಳು ವಿಶ್ವದಾದ್ಯಂತ ಇರುವ ಎಲ್ಲ ಜನರಿಗೆ ಲಾಭ ಒದಗಿಸುತ್ತಿದೆ – ಡಿಜಿಟಲ್ ಪಾವತಿಗಳಿಂದ ಹಿಡಿದು ಧ್ವನಿ ತಂತ್ರಜ್ಞಾನದವರೆಗೆ. “ತಂತ್ರಜ್ಞಾನವನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಶ್ರಮವಹಿಸುತ್ತಿದ್ದು, ಗೂಗಲ್ ಹಾಗೂ ಭಾರತದ ನಡುವಿನ ಪಾಲುದಾರಿಕೆ ಮುಂದುವರೆಯುತ್ತದೆ ಎಂದು ವಿಶ್ವಾಸ ಹೊಂದಿದ್ದೇನೆ,” ಎಂದರು.

“ವ್ಯಾಪಾರ ಸಂಸ್ಥೆಗಳು ಡಿಜಿಟಲ್ ಪರಿವರ್ತನೆಯ ಅವಕಾಶಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇಂದು ಭಾರತದಲ್ಲಿ ಗ್ರಾಮೀಣ ಪ್ರದೇಶಗಳೂ ಒಳಗೊಂಡಂತೆ, ಹಿಂದೆಂದೂ ಇರದಂತೆ ಇಂಟೆರ್‌ ನೆಟ್ ಮೂಲೆಮೂಲೆಗಳನ್ನೂ ತಲುಪಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ವಿಷನ್ ಈ ಪ್ರಗತಿಗೆ ಖಂಡಿತವಾಗಿಯೂ ವೇಗ ನೀಡಿದೆ ಹಾಗೂ ಗೂಗಲ್ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿರುವುದಕ್ಕೆ, ಸರ್ಕಾರಗಳು, ವ್ಯಾಪಾರ ಸಂಸ್ಥೆಗಳು ಹಾಗೂ ಸಮುದಾಯಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಿರುವುದಕ್ಕೆ ನನಗೆ ಹೆಮ್ಮೆಯಾಗಿದೆ,” ಎಂದು ಅಭಿಪ್ರಾಯಪಟ್ಟರು.

“ನಮ್ಮ ಮುಂದೆ ಬರುವ ಪ್ರತಿಯೊಂದು ಹೊಸ ತಂತ್ರಜ್ಞಾನವೂ ಸಹ ನಮ್ಮ ಜೀವನವನ್ನು ಉತ್ತಮಗೊಳಿಸಿದೆ. ಆ ಅನುಭವವೇ ನನ್ನನ್ನು ಗೂಗಲ್‌ ನ ಹಾದಿಗೆ ಕೊಂಡೊಯ್ದಿತು, ಹಾಗೂ ವಿಶ್ವದಾದ್ಯಂತ ಇರುವ ಎಲ್ಲಾ ಜನರ ಜೀವನದಲ್ಲಿ ಸುಧಾರಣೆಯನ್ನು ತರುವಂತಹ ತಂತ್ರಜ್ಞಾನವನ್ನು ನಿರ್ಮಾಣ ಮಾಡುವ ಅವಕಾಶ ಲಭಿಸಿತು,” ಎಂದರು.

ಭಾರತಕ್ಕೆ ಜಿ-20 ಅಧ್ಯಕ್ಷತೆ ಅವಕಾಶ ಲಭಿಸಿದ ಕುರಿತು ಪಿಚೈ ಪ್ರಶಂಸೆ

ಭಾರತ ಜಿ-20ಯ ಅಧ್ಯಕ್ಷತೆಯನ್ನು ವಹಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪಿಚೈ ಅವರು: “ಮುಕ್ತ, ಸಂಪರ್ಕಿತ, ಭದ್ರ ಹಾಗೂ ಪ್ರತಿಯೊಬ್ಬರಿಗೂ ನೆರವಾಗುವಂತಹ ಇಂಟೆರ್‌ ನೆಟ್ ಅನ್ನು ಆವಿಷ್ಕರಿಸುವ ಮೂಲಕ, ಜಾಗತಿಕ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಒಮ್ಮತವನ್ನು ನಿರ್ಮಿಸಲು ಇದೊಂದು ಅದ್ಭುತ ಅವಕಾಶ. ಇದು ನಮ್ಮ ಗುರಿ, ಹಾಗೂ ನಾವು ನಿಮ್ಮೊಂದಿಗೆ ಕೆಲಸ ಮಾಡಲು ಬದ್ಧರಾಗಿದ್ದೇವೆ,” ಎಂದರು. ಭಾರತ ಗುರುವಾರದಂದು ಅಧಿಕೃತವಾಗಿ ಜಿ-೨೦ ಅಧ್ಯಕ್ಷತೆಯನ್ನು ವಹಿಸಿಕೊಂಡಿತು. “ಜೊತೆಗೂಡಿ ಈ ಕೆಲಸವನ್ನು ಮಾಡಲು ಅವಕಾಶ ಲಭಿಸಿದ್ದಕ್ಕೆ ಹಾಗೂ ತಂತ್ರಜ್ಞಾನದ ಲಾಭಗಳನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪಿಸುವ ಈ ಕೆಲಸದಲ್ಲಿ ನನಗೆ ಅವಕಾಶ ನೀಡಿದಕ್ಕೆ ನಾನು ಕೃತಜ್ಞ,” ಎಂದು ಪಿಚೈ ತಿಳಿಸಿದರು.

ಗೂಗಲ್ ಈ ವರ್ಷ, ಮಷಿನ್ ಲರ್ನಿಂಗ್ ಅನ್ನು ಉನ್ನತೀಕರಿಸಿ, ತನ್ನ ಭಾಷಾಂತರ ಸೇವೆಗಳಿಗೆ ೨೪ ಹೊಸ ಭಾಷೆಗಳನ್ನು ಸೇರ್ಪಡೆಗೊಳಿಸಿತು. ಈ ಪೈಕಿ ಎಂಟು ಭಾಷೆಗಳೂ ಭಾರತೀಯ ಭಾಷೆಗಳಾಗಿವೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Indian- Google CEO- Sundar Pichai – awarded – Padma Bhushan