ಬೆಂಗಳೂರು,ಸೆಪ್ಟಂಬರ್,2,2026 (www.justkannada.in): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ದ ಎಫ್ ಐಆರ್ ಹಾಕುವ ಮೂಲಕ ದುರುದ್ದೇಶಪೂರ್ವಕವಾಗಿ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅಧಿಕಾರದಲ್ಲಿರಲು ಬಿಜೆಪಿಯವರು ನಾಲಾಯಕ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದರು.
ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲು ಮಾಡಿರುವುದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರು ಯಾವ ತಪ್ಪು ಮಾಡದಿದ್ದರೂ ಅವರ ಮೇಲೆ ಕೇಸು ದಾಖಲು ಮಾಡಲಾಗಿದೆ. ಇದು ಘನ ಘೋರ ಅನ್ಯಾಯ ಎಂದು ಖಂಡಿಸಿದರು.
ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಜಾಗವನ್ನು ಶುದ್ಧೀಕರಣ ಮಾಡಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದೇ ಅಪರಾಧ ಎಂಬಂತೆ ರಾಹುಲ್ ಗಾಂಧಿಯವರ ಮೇಲೆ ಕೇಸು ದಾಖಲು ಮಾಡಲಾಗಿದೆ. ಬಾಷಣ ಮಾಡಿದ ಜಾಗದ ಶುದ್ಧೀಕರಣ ಸಂವಿಧಾನ ವಿರೋಧಿ ಕೆಲಸ. ಅಸ್ಪೃಶ್ಯತೆಗೆ ಅವಕಾಶ ಇಲ್ಲ ಎಂದು ಸಂವಿಧಾನ ಹೇಳಿದೆ. ಹೀಗಾಗಿ ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ಇದು ಖರ್ಗೆ ಅವರಿಗೆ ಮಾಡಿದ ಅಪಮಾನ ಮಾತ್ರವಲ್ಲ. ಎಫ್ ಐ ಆರ್ ದಾಖಲಿಸುವ ಮೂಲಕ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರನ್ನೂ ಅವಮಾನಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಅವರೇನು ತಪ್ಪು ಮಾಡಿದ್ದಾರೆ. ಶುದ್ಧೀಕರಣ ಕೆಲಸ ಪ್ರಶ್ನಿಸಿದ್ದಾರೆ ಅಷ್ಟೇ. ಇಷ್ಟಕ್ಕೆ ದಲಿತರ ಮೇಲಿನ ದೌರ್ಜನ್ಯ ಕೇಸು ದಾಖಲಿಸಲಾಗಿದೆ. ಇದು ಅತ್ಯಂತ ಖೇದಕರ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದ ಪ್ರಕಾರ ಯಾರು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೊ ಅವರ ಮೇಲೆ ಕೇಸು ಹಾಕಬೇಕು. ಆದರೆ ದುರುದ್ದೇಶಪೂರ್ವಕವಾಗಿ ರಾಹುಲ್ ಗಾಂಧಿಯವರ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಏನಾದರೂ ಮಾಡಿ ರಾಹುಲ್ ಅವರ ಬಾಯಿ ಮುಚ್ಚಿಸಬೇಕು ಎಂದು ಬಿಜೆಪಿ ತೀರ್ಮಾನಿಸಿದಂತಿದೆ. ಈ ಹಿಂದೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಟೀಕೆ ಮಾಡಿದಾಗಲೂ ರಾಹುಲ್ ಗಾಂಧಿಯವರ ಮೇಲೆ ಕೇಸು ದಾಖಲಾಗಿಸಲಾಗಿತ್ತು. ಅವರ ಸದಸ್ಯತ್ವವನ್ನೂ ರದ್ದು ಮಾಡಿದ್ದರು. ಕೊನೆಗೆ ಕಾನೂನಿನ ಮೊರೆ ಹೋದಾಗ ನ್ಯಾಯಾಲಯ ಕೇಸು ರದ್ದು ಮಾಡಿತು. ರಾಹುಲ್ ಗಾಂಧಿಯವರು ಸಂವಿಧಾನದ ಪರ – ಅಸ್ಪೃಶ್ಯತೆ ವಿರುದ್ಧ ಇದ್ದಾರೆ. ಆದರೆ ಮನುವಾದಿಗಳಾದ ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ರಾಹುಲ್ ಗಾಂಧಿಯವರ ವಿರುದ್ಧ ಕೇಸು ದಾಖಲು ಮಾಡಿರುವುದು ಘೋರ ಅಪರಾಧ. ಇದನ್ನು ಸಹಿಸಲು ಆಗದು. ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಆಗಬೇಕು. ಅಧಿಕಾರದಲ್ಲಿರಲು ಬಿಜೆಪಿಯವರು ನಾಲಾಯಕ್. ನಾವೆಲ್ಲ ರಾಹುಲ್ ಗಾಂಧಿಯವರ ಜೊತೆಗೆ ಇರುತ್ತೇವೆ. ಅವರ ಹೋರಾಡುವ ಕೈಗಳನ್ನು ಬಲಪಡಿಸುತ್ತೇವೆ ಎಂದರು.
Key words: FIR., against, Rahul Gandhi, Former CM, Siddaramaiah







