Wednesday, September 2, 2026

BDA Apartments

Home Front Page ಬರ ಪರಿಶೀಲನೆ: ರೈತರ ಸಮಸ್ಯೆ ಆಲಿಸಿ ಧೈರ್ಯ ತುಂಬಿದ ಡಿಸಿಎಂ ಡಾ. ಜಿ ಪರಮೇಶ್ವರ್

ಬರ ಪರಿಶೀಲನೆ: ರೈತರ ಸಮಸ್ಯೆ ಆಲಿಸಿ ಧೈರ್ಯ ತುಂಬಿದ ಡಿಸಿಎಂ ಡಾ. ಜಿ ಪರಮೇಶ್ವರ್

ಮೈಸೂರು, ಸೆಪ್ಟೆಂಬರ್ 2 ,2026 (www.justkannada.in): ಬರ ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ಮೈಸೂರು‌ಜಿಲ್ಲೆಗೆ ಭೇಟಿ ನೀಡಿರುವ  ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಪ್ರವಾಸದ ಎರಡನೇ ದಿನವಾದ ಬುಧವಾರ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮಕ್ಕೆ ಹಾನಿಗೊಳಗಾದ ರೈತರ ಜಮೀನಿಗೆ ತೆರಳಿ ಬರ ವೀಕ್ಷಣೆ ಮಾಡಿದರು.

ಗಟ್ಟಿವಾಡಿ ಗ್ರಾಮದಲ್ಲಿ ಮಕ್ಕೆಜೋಳ ಮತ್ತು ಸೂರ್ಯಕಾಂತಿ ಬೆಳೆ ಬೆಳೆದಿದ್ದ ರೈತರಾದ ಶಿವಬಸಪ್ಪ ಮತ್ತು ಮಹದೇವಪ್ಪ ಅವರ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದಾಗಿ ಬೆಳೆ ಒಣಗಿ ನಾಶವಾಗಿರುವುದನ್ನು ಪರಿಶೀಲಿಸಿದರು. ಈ ವೇಳೆ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾಗಿರುವ ರೈತರು ತಾವು ಸಾಲ ಮಾಡಿ ಬೆಳೆ ಬೆಳೆದಿದ್ದು ಈಗ ದಿಕ್ಕು ತೋಚದಂತಾಗಿದೆ. ಸರ್ಕಾರ ನೆರವು ನೀಡಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಕೂಡಲೇ ಡಿಸಿಎಂ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ತಾಲ್ಲೂಕಿನಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು. ತಾಲ್ಲೂಕಿನಲ್ಲಿ ವಾರ್ಷಿಕ 4,500 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ, 4,200 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 3,500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 3,400 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 8,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗ ಬಿತ್ತನೆಯಾಗಿದ್ದ ಆ ಬೆಳೆಯೂ ಕೂಡ ತೀವ್ರ ಬರದಿಂದ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಾಲ ಮಾಡಿಕೊಂಡು ಬೆಳೆ ಬೆಳೆದು ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಹಾಗೂ ಅಧಿಕಾರಿಗಳಿಂದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಡಿಸಿಎಂ ಪರಮೇಶ್ವರ್,  ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ  ದರ್ಶನ್ ಧ್ರುವನಾರಾಯಣ್‌, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್, ನಂಜನಗೂಡು ತಹಶೀಲ್ದಾರರು ಮತ್ತು ಕೃಷಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Key words: Drought review,  DCM, Dr. G Parameshwara, Mysore