ಚಿತ್ರದುರ್ಗ,ಅಕ್ಟೋಬರ್,17,2026 (www.justkannada.in): ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದರೇ ಕಾಕ್ರೋಚ್ ಜನತಾ ಪಕ್ಷಕ್ಕೆ (ಕೆಜೆಪಿ) ಕಾಂಗ್ರೆಸ್ ಹಣಕಾಸಿನ ನೆರವು ನೀಡುತ್ತಿದೆ ಎಂಬ ಆರೋಪಗಳು ಸ್ಪಷ್ಟವಾಗುತ್ತಿವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಜೆಪಿಗೆ ವಿದೇಶದಿಂದಲೂ ಹಣಕಾಸಿನ ನೆರವು ಬರುತ್ತಿದೆ. ಜೊತೆಗೆ ಕಾಂಗ್ರೆಸ್ ನ ಹಣಕಾಸಿನ ನೆರವೂ ಸಿಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಸಮ್ಮತ ಹೋರಾಟ ಯಾರಾದರೂ ಮಾಡಬಹುದು. ಆದರೆ, ಚುನಾವಣಾ ಸೋಲಿನಿಂದ ಹತಾಶರಾಗಿರುವ ರಾಹುಲ್ ಗಾಂಧಿ ಅವರು ವಿವಿಧ ಸಂಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಮತ್ತು ದೇಶದಲ್ಲಿ ಗೊಂದಲಗಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಸ್ಟಿಂಗ್ ಆಪರೇಷನ್ನ ಪಿತಾಮಹ ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಸ್ಟಿಂಗ್ ಆಪರೇಷನ್ ವಿಚಾರವನ್ನು ಸಿಎಂ ಡಿಕೆ ಶಿವಕುಮಾರ್ ಅವರೇ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ಹಿಟ್ ಅಂಡ್ ರನ್ ಮಾಡಲು ಆಗುವುದಿಲ್ಲ.ಪ್ರಕರಣದ ಕುರಿತು ಸ್ಪಷ್ಟ ತನಿಖೆಯಾಗಬೇಕು ಎಂದು ಆಗ್ರಹಿಸಿದರು.






