ಮೈಸೂರು,ಸೆಪ್ಟಂಬರ್,24,2026 (www.justkannada.in): ಅಕ್ರಮ ಸಂಬಂಧದ ವಿಚಾರವಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ವಿಷದ ಗುಳಿಗೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಕಾಂತಾ ಎಂಬವರ ಪತ್ನಿ ಎಂ.ಆರ್. ಸಂಧ್ಯಾ ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ವಿಕಾಸ್ ಎಂಬಾತನೊಂದಿಗೆ ಸಂಧ್ಯಾ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಮೊಬೈಲ್ ನಲ್ಲಿದ್ದ ಮೆಸೇಜ್‌ಗಳು ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಧ್ಯಾ ವಿಷದ ಗುಳಿಗೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್, ಕುಮಾರ್ ಹಾಗೂ ವಸಂತ ಎಂಬವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಘಟನೆ ಬಳಿಕ ವಿಕಾಸ್ ಪರಾರಿಯಾಗಿದ್ದು, ಆತನಿಗಾಗಿ ಬಿಳಿಕೆರೆ ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ದರೂ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶವದ ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆಗೆ ಸಹಕರಿಸಲು ನಿರಾಕರಿಸಿದ್ದಾರೆ.
ಆರೋಪಿ ಬಂಧಿಸುವವರೆಗೆ ಶವಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದು, ಶವದ ಪಂಚನಾಮೆಗೂ ಗ್ರಾಮದ ಯಾರೊಬ್ಬರೂ ಹಾಜರಾಗುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಪ್ರಕರಣದ ತನಿಖೆಯನ್ನು ಬಿಳಿಕೆರೆ ಠಾಣೆ ಪೊಲೀಸರು ಮುಂದುವರಿಸಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
Accused, illicit relationship, housewife, commits suicide, mysore







