ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ425  ಕೋಟಿ ರೂ. ದಾನ  ಮಾಡಿದ ಸುಸ್ಮಿತಾ- ಸುಬ್ರತೊ ಬಾಗ್ಚಿ ಹಾಗೂ ರಾಧಾ- ಎನ್.ಎಸ್. ಪಾರ್ಥಸಾರಥಿ ದಂಪತಿ.

ಬೆಂಗಳೂರು,ಫೆಬ್ರವರಿ15,2022(www.justkannada.in):  ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ (IISC) 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸುಸ್ಮಿತಾ- ಸುಬ್ರತೊ ಬಾಗ್ಚಿ ಹಾಗೂ ರಾಧಾ- ಎನ್.ಎಸ್. ಪಾರ್ಥಸಾರಥಿ ದಂಪತಿಗಳು 425 ಕೋಟಿ ರೂ. ದಾನ  ನೀಡಿದ್ದಾರೆ.

ಸುಬ್ರತೊ ಬಾಗ್ಚಿ ಜನಿಸಿದ್ದು ಒಡಿಶಾದಲ್ಲಿ. ದೇಶದ ಪ್ರಖ್ಯಾತ ಉದ್ಯಮಿ ಹಾಗೂ ಪ್ರಸಿದ್ಧ ಐಟಿ ಕಂಪನಿ ಮೈಂಡ್ ಟ್ರೀ ಸಹ ಸಂಸ್ಥಾಪಕ. ತಂದೆ ಒಬ್ಬ ಸಾಮಾನ್ಯ ಸರ್ಕಾರಿ ನೌಕರ. ಸುಬ್ರತೊ ಸಹ ಪ್ರಾರಂಭದಲ್ಲಿ ಒಡಿಶಾ ಸರ್ಕಾರದ ಗುಮಾಸ್ತನಾಗಿದ್ದುಕೊಂಡು ನಂತರ ಖಾಸಗಿ ಕ್ಷೇತ್ರಕ್ಕೆ ಧುಮುಕಿದರು. ವಿಪ್ರೊ, ಲ್ಯೂಸೆಂಟ್ ಕಂಪನಿಗಳಲ್ಲಿ ದಶಕದ ಅನುಭವದ ನಂತರ, ಇದೀಗ ಐಐಎಸ್ ಸಿಗೆ ದಾನ ನೀಡಿರುವ ಎನ್ ಎಸ್ ಪಾರ್ಥಸಾರಥಿ ಅವರೂ ಸೇರಿ 9 ಸ್ನೇಹಿತರ ಜತೆಗೆ ಮೈಂಡ್ ಟ್ರೀ ಸ್ಥಾಪಿಸಿದರು. ಪಾರ್ಥಸಾರಥಿ ಸಹ ವಿಪ್ರೊದಲ್ಲಿ ಬಾಗ್ಚಿ ಅವರ ಜತೆಗೆ ಕೆಲಸ ಮಾಡಿದ್ದರು.

ಐಐಎಸ್ಸಿ ಇತಿಹಾಸದಲ್ಲೆ ದೊಡ್ಡ ದಾನ ಇದು. ಸುಸ್ಮಿತಾ-ಸುಬ್ರತೊ ಬಾಗ್ಚಿ ಮತ್ತು ರಾಧಾ-ಎನ್.ಎಸ್. ಪಾರ್ಥಸಾರಥಿ ದಂಪತಿಗಳು ಒಟ್ಟಾಗಿ 425 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಐಐಎಸ್ಸಿ ಸ್ಥಾಪನೆಯಾದ ನಂತರ ಇದೊಂದೇ ದೊಡ್ಡ ಮೊತ್ತದ ಖಾಸಗಿ ದೇಣಿಗೆ ಇದು. ದೇಣಿಗೆ ನೀಡಿದವರ ಹೆಸರಿನಲ್ಲೆ, ನೂತನ ಆಸ್ಪತ್ರೆಗೆ “ಬಾಗ್ಚಿ – ಪಾರ್ಥಸಾರಥಿ ಆಸ್ಪತ್ರೆ” ನಾಮಕರಣ ಮಾಡಲಾಗುತ್ತದೆ. ಜೂನ್ ತಿಂಗಳಲ್ಲಿ ಆಸ್ಪತ್ರೆ ಕಾಮಗಾರಿ ಆರಂಭವಾಗಲಿದ್ದು, 2024ಕ್ಕೆ ಪೂರ್ಣಗೊಳ್ಳಲಿದೆ.

ಆಸ್ಪತ್ರೆ ವಿಶೇಷತೆ:

ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯು ರೋಗಪರೀಕ್ಷೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ, ನರವಿಜ್ಞಾನ, ಎಂಡೋಕ್ರಿನಾಲಜಿ, ಗ್ಯಾಸ್ಟ್ರೋ ಎಂಟರಾಲಜಿ, ಯುರಾಲಜಿ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೊಬೋಟಿಕ್ ಶಸ್ತ್ರಚಿಕಿತ್ಸೆ, ನೇತ್ರವಿಜ್ಞಾನ ಸೇರಿ ಹಲವು ವಿಷಯ ವಿಭಾಗಗಳನ್ನು ಹೊಂದಿರಲಿದೆ. ಎಂಡಿ, ಎಂಎಸ್ ಮತ್ತು ಡಿಎಂ, ಎಂಸಿಎಚ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ತರಬೇತಿಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳ ತರಬೇತಿಯನ್ನು ನೀಡಲಾಗುತ್ತದೆ. ಸಮಗ್ರ ವಿದ್ಯುನ್ಮಾನ ವೈದ್ಯಕೀಯ ದಾಖಲೆ ವ್ಯವಸ್ಥೆ ಮತ್ತು ಹ್ಯಾಪ್ಟಿಕ್ಸ್ ಇಂಟೇಸ್ ಗಳು, ಸಮಗ್ರ ಟೆಲಿಮೆಡಿಸಿನ್ ವ್ಯವಸ್ಥೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಒಳಗೊಂಡಿರಲಿದೆ.

Key words: hospital- construction- Donated -425 crore