ಜಿ.ಎನ್ ಮೋಹನ್ ಸ್ಪೆಷಲ್ : ಅದು ನೀರ ರುದ್ರ ನರ್ತನ

ಅದು ನೀರ ರುದ್ರ ನರ್ತನ
—–

‘ನೀನು ನಾಳೆ ಇಲ್ಲಿರಬೇಕು ನೋಡಪ್ಪ’ ಅಂತ ದಾವಣಗೆರೆಯಿಂದ ಬಿ ಎನ್ ಮಲ್ಲೇಶ್ ಫೋನ್ ಮಾಡಿದಾಗ ನಾನು ಅವನಿಗೆ ಮೂರನೆಯ ಮಗು ಹುಟ್ಟಿರಬೇಕು ಎಂದುಕೊಂಡೆ.jk-logo-justkannada-logo

ಮಗುವಿನ ನಾಮಕರಣವೋ, ತೊಟ್ಟಿಲು ಶಾಸ್ತ್ರವೋ ಅಂದುಕೊಂಡು ನನ್ನ ಮನಸ್ಸನ್ನೂ ಮೀರಿದ ವೇಗದಲ್ಲಿ ದಾವಣಗೆರೆಗೆ ಬಂದಿಳಿದಾಗ ಅಲ್ಲಿ ಆಗಲೇ ದೊಡ್ಡ ದಂಡೇ ನೆರೆದಿತ್ತು.

ಹೊಚ್ಚಹೊಸ ಇನೋವಾ ನಮಗಾಗಿ ಕಾದಿತ್ತು. ‘ಸೀದಾ ಗಾಡಿ ಹತ್ತು’ ಎಂದವನ ಮುಖ ನೋಡಲೂ ಸಮಯ ಸಿಗದಂತೆ ನಾನು ಗಾಡಿ ಹತ್ತಲೇಬೇಕಾಯ್ತು.

ಮಗುವಿನ ಕೈಗಿಡಲು ೧೦೦ ರೂಪಾಯಿಯ ಎರಡು ಹೊಸ ನೋಟುಗಳನ್ನು ಸುಂದರ ಕವರ್ ನಲ್ಲಿ ನನ್ನ ಹೆಸರು ಎದ್ದು ಕಾಣುವಂತೆ ಬರೆದು ತಂದಿದ್ದ ನನ್ನ ಮುಖ ಏನೂ ತಿಳಿಯದೆ ಕಕ್ಕಾಬಿಕ್ಕಿಯಾಗಿತ್ತು.

೬೫ ದಾಟಿದ ಎಂಜಿನಿಯರ್ ರಾಜಶೇಖರಪ್ಪ ನನ್ನ ಪಕ್ಕ ಕುಳಿತಿದ್ದರು. ಅವರ ಬಗಲಿಗೊಂದು ಬ್ಯಾಗು. ನಾನು ಅವರಿಗೆ ಕಾಣದಂತೆ ಅದರೊಳಗೆ ಇಣುಕಿದೆ.

ಶಾರದಾ ಅಟ್ಲಾಸ್, ಎಂಜಿನಿಯರಿಂಗ್ ಇಲಾಖೆಯ ಅಟ್ಲಾಸ್, ಒಂದು ಟೋಪಿ, ಒಂದು ಟಾರ್ಚ್, ಒಂದು ಮೆತ್ತನೆಯ ಶೀಟು ಎಲ್ಲವೂ ಇತ್ತು.gn-mohan-special-39

ಮಗು, ಬಾಣಂತಿ ತವರುಮನೆಯಲ್ಲಿದ್ದಾರಾ ಅಂದೆ. ಮಲ್ಲೇಶ ಪಕಪಕನೆ ನಕ್ಕ. ‘ಅಲ್ಲಲೇ, ಟೂರ್ ಹೊಂಟೀವಿ’ ಅಂದ.

ಆಗಲೇ ರಾಜಶೇಖರಪ್ಪ ತಮ್ಮದೇ ಗತ್ತಿನಿಂದ ಮ್ಯಾಪ್ ಹರಡಿದ್ದು. ಮೂರು ದಿನ ಟ್ರಿಪ್ ಅಂತ ಹೇಳಿದವರೇ ೩೦೦ ಜಾಗಗಳ ಪಟ್ಟಿ ಒಪ್ಪಿಸತೊಡಗಿದರು.

ಜೀವಮಾನವಿಡೀ ನೋಡಬೇಕಾದಷ್ಟು ಜಲಪಾತಗಳನ್ನು ಮೂರು ದಿನದಲ್ಲಿ ತೋರಿಸಿಬಿಡುವ ಉತ್ಸಾಹ ಹೊತ್ತಿದ್ದರು.

ಆಗಲೇ ಗೊತ್ತಾಯ್ತು ಈ ಟೂರು ಹಳ್ಳ ಹಿಡಿಯುತ್ತೆ ಅಂತ. ಆದರೆ ಅಲ್ಲಿದ್ದ ಯಾರಿಗೂ ಹಾಗನಿಸಿರಲಿಲ್ಲ.

ಹಗಲಿರುಳೂ ತಮ್ಮ ಕೆಲಸವನ್ನೇ ಧ್ಯಾನಿಸುವ, ಹೋದ ಊರುಗಳಲ್ಲಿಯೂ ತನ್ನದೇನಾದರೂ ಒಂದಿಷ್ಟು ಕೆಲಸ ಆಂಟಿಹಾಕಿಕೊಂಡೇ ಬರುವ, ಸದಾ ನಗುಮುಖದ ಶೇಖರಪ್ಪ..

..ಟೂರ್ ಅಂದರೆ ಸಾಕು ಚಪಾತಿ, ರೊಟ್ಟಿ, ಅನ್ನ, ಎಣ್ಣೆಗಾಯಿ, ಉಪ್ಪಿನಕಾಯಿ, ನೀರು.. ಎಲ್ಲವನ್ನೂ ಬೇಕಾದಷ್ಟು ದಿನಕ್ಕೆ, ಬೇಕಾದಂತೆ ಸ್ಟಾಕ್ ಮಾಡಿಸಿಕೊಂಡು ಬರುವ ಚಂದ್ರಣ್ಣ ಎಲ್ಲರೂ ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದಿರಲಿ’ ಎನ್ನುವಂತೆ ಮುಖ ಮಾಡಿಕೊಂಡು ಅತ್ಯುತ್ಸಾಹಿ ರಾಜಶೇಖರಪ್ಪನವರಿಗೆ ತಮ್ಮ ಕಿವಿಯನ್ನು ದಾನವಾಗಿ ಕೊಟ್ಟಿದ್ದರು

‘ಸಿರಸಿಯಲ್ಲಿ ಉಂಚಳ್ಳಿ ಫಾಲ್ಸ್ ನೋಡಿಕೊಂಡು ಅಲ್ಲಿಂದ ಧಾರವಾಡ ಹಾದು ಖಾನಾಪುರದತ್ತ ತಿರುಗಿ ದೂದ್ ಸಾಗರ ಗೆ ಹೋಗುವ ಗಾಡಿ ಹಿಡಿಯುವುದೇ’ ಎಂದರು

ಒಟ್ಟಿನಲ್ಲಿ ರಾಜಶೇಖರಪ್ಪನವರ ಕೈಗೆ ನಮ್ಮ ಜುಟ್ಟು (ನನ್ನದು ಬಿಟ್ಟು) ಕೊಟ್ಟಿದ್ದೇವೆ. ಬೇಕಾದ ರಸ್ತೆಯಲ್ಲಿ ಓಡಲು ಗಾಡಿ ಇದೆ. ‘ಹೊಡೀರಿ ಹಲಗಿ..’ ಅಂತ ಸುಮ್ಮನೆ ಕೂತದ್ದಾಯ್ತು.’

ಅಲ್ಲಲೇ ಮಲ್ಲೇಶ, ನೀನು ಹಿಂಗೆ ಫಾಲ್ಸ್ ನೋಡೋದಿಕ್ಕೆ ಹೋಗ್ತೀವಿ ಅಂದಿದ್ರೆ ನಾನೂ ತಯಾರಿ ಆಗಿ ಬರ್ತಿದ್ನೆಲ್ಲಾ ತಲೆಗೆ ಟೋಪಿ, ಕಾಲಿಗೆ ಬೂಟು, ಮೈಗೆ ಬೆಚ್ಚನೆ ಉಣ್ಣೆ ಕೋಟು ಕೈಯಲ್ಲಿ ಟಾರ್ಚು’ ಅಂದೆ

‘ಸುಮ್ನೆ ಕೂಡ್ರಪ್ಪ ದಾವಣಗೆರೆ ಬಿಟ್ಟು ನಾಲ್ಕು ದಿನ ಎಲಾದ್ರೂ ಹೋದ್ರೆ ಸಾಕಾಗಿದೆ ಎಲ್ಲಿಗೆ ಹೋಗ್ತೀವೋ ಬಿಡ್ತೀವೋ ದಾವಣಗೆರೆಯಿಂದ ಆಚೆ ಹೋಗ್ತೀವಿ ಅನ್ನೋದಷ್ಟೇ ಮುಖ್ಯ’ ಅಂದ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವಂತೆ ನಿದ್ದೆಗೆ ಜಾರಿಕೊಂಡ.

ಒಂದಷ್ಟು ದೂರ ಓಡಿದ ಗಾಡಿ ತಿಂಡಿ ತಿನ್ನಲು ನಿಂತಿತು. ಬೆಳ್ಳಂಬೆಳಗ್ಗೆ ಉಪ್ಪಿನಕಾಯಿ, ಮೊಸರು ಸಮೇತ ಮಸಾಲೆ ಉಪ್ಪಿಟ್ಟು ಹೊಟ್ಟೆಗೆ ಬಿದ್ದ ತಕ್ಷಣವೇ ಯಾಕೋ ಎಲ್ಲರಿಗೂ ಜ್ಞಾನೋದಯವಾಯಿತು.

ಶೇಖರಪ್ಪನವರ ಮಾತಿನ ಪ್ರಕಾರ ಹೋದರೆ ತಂದಿದ್ದ ತಿಂಡಿ, ಊಟದ ಗಂಟು ಮಾತ್ರ ಖಾಲಿ ಆಗುತ್ತೆ ಊರು ನೋಡಕ್ಕಂತೂ ಆಗಲ್ಲ ಅಂತ ಆಗ್ಲೇ ಎಲ್ಲರೂ ಒಟ್ಟಾಗಿ ತಾವೇ ಹೋಗಬೇಕಾದ ದಿಕ್ಕು ರೂಪಿಸಲು ಕೂತರು.

ಆಗಲೇ ಎಲ್ಲರೂ ಒಟ್ಟಾಗಿ ‘ಓಂ, ಪ್ರಥಮ, ಶುರು, ಫ಼ಸ್ಟ್’ ನಲ್ಲೇ ನೋಡಬೇಕಾದ ಜಾಗ ಅಂತ ತೀರ್ಮಾನಿಸಿದ್ದು ದೂದ್ ಸಾಗರವನ್ನು.

ಒಮ್ಮೆ ದಿಕ್ಕು ನಿರ್ಧಾರವಾಗುವುದನ್ನೇ ಕಾಯುತ್ತಾ ಕೂತಿದ್ದಂತೆ ಇನೋವಾ ಶರವೇಗದಲ್ಲಿ ಹಾವೇರಿ ಹುಬ್ಬಳ್ಳಿ ಧಾರವಾಡವನ್ನು ಹಿಂದಿಕ್ಕಿ, ಎಡಕ್ಕೆ ಹೊರಳಿ, ಉತ್ತರ ಕನ್ನಡದ ಕಾಡು ಹೊಕ್ಕು, ಸಿಕ್ಕ ಸಿಕ್ಕ ರೈಲ್ವೆ ಹಳಿಗಳ ಬಳಿ ರೈಲಿಗೆ ಮೊದಲು ಹೋಗಲು ಬಿಟ್ಟು, ಯಾವುದೇ ಗೂಡಂಗಡಿ ಕಂಡರೂ ಫ್ರೆಶ್ ಹಾಲಿನಲ್ಲಿ ಮಾಡಿಸಿದ ಖಡಕ್ ಟೀ ಕುಡಿದು ಓಡತೊಡಗಿತು

‘ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ನಿನ್ನೆ ಕ್ಯಾಸಲ್ ರಾಕ್ ನಲ್ಲಿ ದಾಖಲಾಗಿದೆ. ೨೧ ಸೆಂಟಿ ಮೀಟರ್ ಮಳೆ’ ಎನ್ನುವ ಸುದ್ದಿಯತ್ತ ನಮ್ಮ ಕಣ್ಣು ಬಿದ್ದದ್ದು ಅದೇ ಕ್ಯಾಸಲ್ ರಾಕ್ ರೈಲ್ವೆ ಸ್ಟೇಶನ್ ಗೆ ಕಾಲಿಟ್ಟಾಗಲೇ.

‘ಹೌದೇನ್ರೀ ?’ ಅಂತ ಅಲ್ಲಿನ ಸ್ಟೇಶನ್ ಮಾಸ್ತರ್ ನನ್ನು ಕೇಳಿದಾಗ ೨೧ ಅಲ್ಲ ೨೭ ಅಂತ ತಿದ್ದಿದ. ಪೇಪರ್ ಪ್ರಿಂಟ್ ಆಗೋವರೆಗೂ ಬಿದ್ದದ್ದು ೨೧ ಆದರೆ ಇವತ್ತು ಬೆಳಗ್ಗೆ ವರೆಗೆ ೨೭ ಅಂದ.

‘ಸುಳ್ಳು ಹೇಳ್ತಾನೆ ಬಿಡು’ ಅಂತ ಗುಮಾನಿ ಪಡುವ ವೇಳೆಗೆ ನಾವು ‘ಹಗಲಿರುಳೆನ್ನದೆ ಹೊಡೆಯುವ ಜಡಿಮಳೆ’ಗೆ ಸಿಕ್ಕು ತೊಯ್ದು ತೊಪ್ಪೆಯಾಗಿ ಹೋಗಿದ್ದೆವು.

ದೂದ್ ಸಾಗರ್ ಇರುವ ದಿಕ್ಕು ಯಾವುದು ಅಂತ ನೋಡುವಷ್ಟರಲ್ಲೇ ಅದರ ಒಂದು ಸ್ಯಾಂಪಲ್ ರುಚಿ ನಮಗೆ ಸಿಕ್ಕಿತ್ತು.

ನಾವು ಚಳಿಗೆ ಗಡ ಗಡ ನಡುಗುತ್ತಾ ಕೂತಿದ್ದೆವು. ಹೌರಾದಿಂದ ಗೋವಾದತ್ತ ಓಡುತ್ತಿದ್ದ ರೈಲು ನಮ್ಮನ್ನು ‘ಬಂದರೆ ಬನ್ನಿ, ಬಿಟ್ಟರೆ ಬಿಡಿ’ ಎನ್ನುವಂತೆ ಎರಡು ನಿಮಿಷ ಕಣ್ಣು ಮಿಟುಕಿಸಿತು.

ಚಕ್ರ ತಿರುಗುತ್ತಿದ್ದಂತೆಯೇ ಎಲ್ಲೆಲ್ಲೋ ಇದ್ದ ನಾವು ಯಾವ್ಯಾವುದೋ ಬೋಗಿಯಲ್ಲಿ ತೂರಿಕೊಂಡುಬಿಟ್ಟೆವು.

ಇಲ್ಲಿಂದ ೧೬ ಕಿ ಮೀ ರೈಲಿನ ಕಿಟಕಿ, ಬಾಗಿಲಿಗೇ ಅಂಟಿ ಕೊಂಡಿರಿ. ಎಲ್ಲೆಲ್ಲೂ ಝರಿಗಳೇ ಎಂದು ವಡಾ ಪಾವ್ ಮಾರುತ್ತಿದ್ದಾತ ‘ಪಿಚ್ಚರ್ ಅಭಿ ಬಾಕೀ ಹೈ’ ಎನ್ನುವಂತೆ ಹೇಳಿದ.

ನಾವಂತೂ ಆತ ಪಾನ್ ಪರಾಗ್ ಸೋರುತ್ತಿದ್ದ ಬಾಯನ್ನುಒರೆಸಿದ ಕೈನಿಂದಲೇ ವಡಾ ಪಾವ್ ಹಂಚುತ್ತಾ ಹೊರಟಿದ್ದನ್ನು ನೋಡುತ್ತಾ ನಿಂತಿದ್ದೆವು.

ಆತನೇ ನಮ್ಮ ಮೊದಲ ಹಾಗೂ ಕೊನೆಯ ಗೈಡ್. ಆಮೇಲೆ ಜಪ್ಪಯ್ಯ ಎಂದರೂ ನಿಮಗೆ ನೀವೇ ಮಾರ್ಗದರ್ಶಿಗಳು

ರೈಲು ಕಿಯ್ಯೋ ಕಿರ್ರೋ ಎನ್ನುತ್ತಾ ನಿಂತಿತೋ ಇಲ್ಲವೋ ಎನ್ನುವಂತೆ ಒಂದಿಷ್ಟು ಜರ್ಕ್ ಹೊಡೆಯಿತು ಆ ವೇಳೆಗೆ ನಾವೆಲ್ಲರೂ ಉದುರಿಕೊಂಡಿದ್ದೆವು.

ಯಾಕಪ್ಪಾ ಹೀಗೆ ಎಂದರೆ ದೂದ್ ಸಾಗರ್ ನಲ್ಲಿ ರೈಲ್ವೆ ಸ್ಟೇಶನ್ ಇಲ್ಲ. ಇಲ್ಲಿ ರೈಲು ಭಗವಾನ್ ಮಹಾವೀರ ಸಂರಕ್ಷಿತ ಅರಣ್ಯವನ್ನು ಪ್ರವೇಶಿಸುವ ಮುನ್ನ ತನ್ನ ಬ್ರೇಕ್ ಸರಿ ಇದೆಯೇ, ಕೀಲು ಪಕ್ಕೆಲುಬು ನೆಟ್ಟಗಿದೆಯೇ ಎಂದು ಪರೀಕ್ಷಿಸಿಕೊಳ್ಳಲು ಐದು ನಿಮಿಷ ನಿಲ್ಲಿಸುತ್ತದೆ ಅಷ್ಟೇ.

ಅಲ್ಲಿ ಉದುರಿಕೊಂಡಿದ್ದ ನಾವು ಎಲ್ಲಿದ್ದೇವೆ ಎಂದು ಕಣ್ಣು ಬಿಟ್ಟರೆ ಆಗಲೇ ಗೋವಾ ನೆಲದಲ್ಲಿ!.

ಇಲ್ಲಿಂದ ಒಂದು ಕಿ ಮೀ ಅಷ್ಟು ನಡೆಯಿರಿ ಎಂದರು. ನಡೆಯೋಣ ಎಂದರೆ ಎದುರಿಗೆ ಕಂಡದ್ದು ಉದ್ದೋ ಉದ್ದಕ್ಕೆ ಬಿದ್ದಿದ್ದ ರೈಲ್ವೆ ಹಳಿಗಳು ಮಾತ್ರ.

ಸರಿ ಜಡಿಯುತ್ತಿದ್ದ ಮಳೆ ಆ ವೇಳೆಗಾಗಲೇ ನಮಗೆ ಹಳೆ ಕಾಲದ ನೆಂಟನೇನೋ ಎನ್ನುವಂತಾಗಿದ್ದ. ಅದರ ಸಮೇತ ರೈಲು ಹಳಿಯ ಮೇಲೆ ಹೆಜ್ಜೆ ಹಾಕುತ್ತಾ, ಸುರಂಗ ಸಿಕ್ಕೆಡೆ ಎಳೆ ಹುಡುಗರಂತೆ ಹೋ ಎಂದು ಕಿರುಚುತ್ತಾ, ಟಾರ್ಚ್ ಹತ್ತಿಸಿ ಹೊರಬಂದೆವು.

ಅಷ್ಟರಲ್ಲೇ ಆರ್ಭಟ ಕೇಳಿಸಿತು. ನನಗೆ ಮಂಗಳೂರಿನಲ್ಲಿ ಸಮುದ್ರದ ಪಕ್ಕವೇ ಮನೆ ಮಾಡಿಕೊಂಡಿದ್ದ ಕಾರಣ ಅದರ ಆರ್ಭಟ ಹೇಗಿರುತ್ತದೆ ಎಂದು ಗೊತ್ತಿತ್ತು.

ಆದರೆ ಇದು ಹಾಗಲ್ಲ. ‘ಸುತ್ತುವ ಮುತ್ತುವ ಎಲೆಸೆರೆಗೆತ್ತುವ ಸಮೀರ ಸಂತತ ಹಾಯೆ’ ಎನ್ನುವಂತೆ ಆ ಸಮೀರನನ್ನು ಜೊತೆ ಮಾಡಿಕೊಂಡು ಸಿಕ್ಕ ಸಿಕ್ಕೆಡೆಯೆಲ್ಲಾ ಚಿಮ್ಮುತ್ತಿದ್ದ ಜಲಪಾತ.

ನೋಡೋಣ ಎಂದು ನಾಲ್ಕು ಹೆಜ್ಜೆ ಮುಂದೆ ಹೆಜ್ಜೆ ಹಾಕಿದ್ದಷ್ಟೇ ಗೊತ್ತು ಆ ನೀರಿನ ಹೊಡೆತಕ್ಕೆ ನಾವು ತಂದಿದ್ದ ಛತ್ರಿಗಳು ಎಲ್ಲೋ ಹೋಗಿತ್ತು, ತೊಟ್ಟ ಕೋಟು ಟೋಪಿಗಳು ಎಲ್ಲೋ ಬಿದ್ದಿತ್ತು.

ಟೋಪಿ ಕೋಟು ಛತ್ರಿ ಬಿಡಿ ನಮ್ಮನ್ನೇ ಒಂದು ಹೊಡೆತಕ್ಕೆ ಎತ್ತಿ ಆ ಘಾಟಿಯ ಆಳಕ್ಕೆಸೆದು ಮೂಳೆಯಾಗಿಸಿಬಿಡುತ್ತೇನೆ ಎನ್ನುವ ರೋಷದಿಂದ ದೂದ್ ಸಾಗರ್ ಕುಣಿಯುತ್ತಿತ್ತು.

ದೂದ್ ಸಾಗರ ಜಲಪಾತದ ಬಳಿ ಹೋಗುವ ಮಾತು ಬಿಡಿ ಅದರ ಎದುರಿದ್ದ ರೈಲ್ವೆ ಸೇತುವೆಯ ಮೇಲೆ ಒಮ್ಮೆ ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಹೋಗಿ ಬಂದರೇ ಸಾಕು ವೀರ ಪ್ರಶಸ್ತಿ ಕೊಟ್ಟು ಸನ್ಮಾನಿಸಿಬಿಡಬಹುದಿತ್ತು.

೧೦೦ ಅಡಿ ಅಗಲಕ್ಕೆ ಹರಡಿಕೊಂಡಿದ್ದ ಈ ಜಲಪಾತ ೧೦೧೭ ಅಡಿ ಎತ್ತರದಿಂದ ಬೀಳುತ್ತದೆ.

ಯಾಕೋ ಬೇಂದ್ರೆ ನೆನಪಾದರು. ‘ಇಳಿದು ಬಾ ತಾಯಿ ಇಳಿದು ಬಾ’ ಎಂದ ಬೇಂದ್ರೆ ಇಲ್ಲಿಗೆ ಬಂದಿದ್ದರೆ ಯಾರೂ ಕೇಳದೆಯೇ ಧುಮ್ಮಿಕ್ಕುತ್ತಿದ್ದ ಈ ಜಲಪಾತವನ್ನು ಕಂಡು ಕವಿತೆಯನ್ನು ತಮ್ಮೊಳಗೇ ಇಟ್ಟುಕೊಂಡುಬಿಡುತ್ತಿದ್ದರೇನೋ

ಭಾರತದ ಜಲಪಾತಗಳ ಪೈಕಿ ಇದು ನಾಲ್ಕನೆಯ ಅತಿ ಎತ್ತರದ ಜಲಪಾತ ಎನಿಸಿಕೊಂಡಿದೆ. ಜಗತ್ತಿನಲ್ಲಿ ೨೨೭ನೆಯದು. ನೀರು ಎನ್ನುವುದರ ರುದ್ರ ಸೌಂದರ್ಯ ನೋಡಬೇಕು ಎಂದರೆ ದೂದ್ ಸಾಗರ ಬಿಟ್ಟರೆ ನಮ್ಮ ಹತ್ತಿರದಲ್ಲಿ ಮತ್ತೊಂದಿಲ್ಲ.

ಜೋಗಕ್ಕೆ ಹತ್ತಾರು ಸಲ ಹೋಗಿರುವ ನನಗಂತೂ ‘ಸಾಯೋದ್ರಲ್ಲಿ ಒಮ್ಮೆ ನೋಡು ಜೋಗಾದ್ ಗುಂಡಿ..’ ಎನ್ನುವ ಸಾಲನ್ನು ಬದಲಿಸಬೇಕು ಎಂದು ಇದೇ ಮೊದಲ ಬಾರಿ ಅನಿಸಿಹೋಯ್ತ