Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Front Page ‘ತುಳಿದು ಬದುಕುವುದಲ್ಲ, ತಿಳಿದು ಬದುಕುವುದು ಧರ್ಮ’– ಗವಿಸಿದ್ದೇಶ್ವರ ಶ್ರೀ

‘ತುಳಿದು ಬದುಕುವುದಲ್ಲ, ತಿಳಿದು ಬದುಕುವುದು ಧರ್ಮ’– ಗವಿಸಿದ್ದೇಶ್ವರ ಶ್ರೀ

ಮೈಸೂರು,ಅಕ್ಟೋಬರ್,11,2026 (www.justkannada.in):  “ಧರ್ಮವೆಂದರೆ ಮನುಷ್ಯನನ್ನು ಸ್ವರ್ಗಕ್ಕೆ ಕರೆದೊಯ್ಯುವುದಲ್ಲ; ನಾವು ಬದುಕುತ್ತಿರುವ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡುವುದು. ತುಳಿದು ಬದುಕುವುದಲ್ಲ, ತಿಳಿದು ಬದುಕುವುದು ನಿಜವಾದ ಧರ್ಮ” ಎಂದು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.

ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಸಾಂಸ್ಕೃತಿಕ ಪರಂಪರೆ, ಮೈಸೂರು ರಾಜಮನೆತನದ ಕೊಡುಗೆ, ಕನ್ನಡದ ಸಾಮರಸ್ಯದ ಪರಂಪರೆ ಹಾಗೂ ದುಡಿಮೆಯ ಮಹತ್ವವನ್ನು ಒತ್ತಿಹೇಳಿದರು.

ದೊರೆಯ ಹಬ್ಬ ಇಂದು ಧರೆಯ ಹಬ್ಬ!

“ಒಂದು ಕಾಲದಲ್ಲಿ ದೊರೆಯ ಹಬ್ಬವಾಗಿದ್ದ ದಸರಾ ಇಂದು ಧರೆಯ ಹಬ್ಬವಾಗಿದೆ. ದಸರಾ ಎಂದರೆ ನಾಡಿನ ಗತವೈಭವ, ವರ್ತಮಾನ ಮತ್ತು ಭವಿಷ್ಯದ ಸಂಗಮ. ಅರಮನೆಗಳ ನಗರ, ಸಂಸ್ಕಾರವಂತರ ನಗರ, ಅರಿವಿನ ನಗರ, ಸಾಂಸ್ಕೃತಿಕ ನಗರ ಹಾಗೂ ಗುರುಮನೆಗಳ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿದೆ” ಎಂದು ಬಣ್ಣಿಸಿದರು.Gavisiddeshwara Sri gavishri1

ತುಂಗಭದ್ರೆಯ ತೀರದಿಂದ ಕಾವೇರಿ ನಾಡಿಗೆ ಬಂದಿರುವುದಾಗಿ ಉಲ್ಲೇಖಿಸಿದ ಶ್ರೀಗಳು, ಮಹಾನವಮಿ ಗುಡ್ಡದ ಪರಂಪರೆಯ ವೈಭವವನ್ನು ಮೈಸೂರಿನ ದಸರಾ ಪ್ರತಿಬಿಂಬಿಸುತ್ತದೆ ಎಂದರು.

ಕಾಣದ ಕೈಗಳಿಗೆ ಶರಣು!

“ಇಂದು ಕಾಣುತ್ತಿರುವ ವೈಭವದ ಹಿಂದೆ ಕಾಣದ ಕೈಗಳಿವೆ. ಆ ಎಲ್ಲ ಶ್ರಮಜೀವಿಗಳಿಗೆ ನನ್ನ ಶರಣು, ಶರಣಾರ್ಥಿ” ಎಂದು ಹೇಳಿದ ಅವರು, ದಸರಾ ಕೇವಲ ಉತ್ಸವವಾಗಿರದೆ ಜನರ ಪರಿಶ್ರಮ, ಸಂಸ್ಕೃತಿ ಮತ್ತು ಸಾಮೂಹಿಕ ಬದುಕಿನ ಪ್ರತೀಕವಾಗಬೇಕು ಎಂಬ ಸಂದೇಶ ನೀಡಿದರು.

ದಸರಾ ಉದ್ಘಾಟನೆಗೆ ಬಂದಿರುವುದು ಕೇವಲ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಲ್ಲ; ನಾಡಿಗೆ ಪ್ರಾರ್ಥನೆ ಸಲ್ಲಿಸಲು ಎಂದು ತಿಳಿಸಿದ ಶ್ರೀಗಳು, “ಕನ್ನಡದ ದೀಪ ಹಚ್ಚಿದ್ದಾರೆ. ಆ ಆಶಯದ ದೀಪ ಎಂದಿಗೂ ಆರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಬಂದಿದ್ದೇನೆ” ಎಂದರು.

ಪಂಪನಿಂದ ಕುವೆಂಪುವರೆಗೆ ಸಾಮರಸ್ಯದ ಸಂದೇಶ

ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಸಂದೇಶ ಸಾರುತ್ತದೆ. ನೀತಿ ಮತ್ತು ಪ್ರೀತಿಯ ನೆಲೆಯಲ್ಲಿ ನಾಡು ಕಟ್ಟಬೇಕು. ಗ್ರಂಥಗಳು ಬೇರೆ ಇರಬಹುದು, ಪಂಥಗಳು ಬೇರೆ ಇರಬಹುದು; ಆದರೆ ಮಾನವೀಯತೆ ಮತ್ತು ಸತ್ಯದ ಹಾದಿ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿದರು.

ದುಡಿಮೆಯನ್ನು ಪ್ರೀತಿಸಬೇಕೇ ಹೊರತು ಹಣವನ್ನಷ್ಟೇ ಆರಾಧಿಸಬಾರದು. ಶ್ರಮದ ಗೌರವ ಅರಿಯಬೇಕು. ದುಡಿದು ಬದುಕುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಮೈಸೂರು ರಾಜಮನೆತನದ ಕೊಡುಗೆ ಸ್ಮರಣೀಯ

ಮೈಸೂರು ರಾಜಮನೆತನವನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಶ್ರೀಗಳು, ಶಿಕ್ಷಣ ಮತ್ತು ಜ್ಞಾನ ಕ್ಷೇತ್ರಗಳ ಬೆಳವಣಿಗೆಗೆ ರಾಜಮನೆತನ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ಮೈಸೂರಿನ ಐತಿಹಾಸಿಕ ಪರಂಪರೆಯ ಪಾತ್ರ ಮಹತ್ವದ್ದಾಗಿದೆ ಎಂದರು.Gavisiddeshwara Sri gavishri

ಬುದ್ಧನ ಸಂದೇಶವನ್ನು ಸ್ಮರಿಸಿದ ಅವರು, “ಬೆಳಕಾಗು” ಎಂಬ ಆಶಯದಂತೆ ಪ್ರತಿಯೊಬ್ಬರೂ ಸಮಾಜಕ್ಕೆ ಬೆಳಕಾಗಬೇಕು ಎಂದು ಕರೆ ನೀಡಿದರು. ಅರಮನೆಯಿಂದ ಬಂದ ಸಾಹಿತ್ಯಕ್ಕಿಂತ ಮಣ್ಣಿನಿಂದ, ಜನಜೀವನದಿಂದ ಮೂಡಿಬಂದ ಸಾಹಿತ್ಯಕ್ಕೂ ಅಪಾರ ಮೌಲ್ಯವಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರತಿಪಾದಿಸಿದರು.

ಭೂಮಿಯನ್ನೇ ಸ್ವರ್ಗವಾಗಿಸೋಣ

“ಮುಗಿಲಿನಿಂದ ಮಳೆ ಬರಬೇಕು, ಮಣ್ಣಿನಿಂದ ಬೆಲೆ ಬರಬೇಕು, ಜನರ ಬದುಕಿನಲ್ಲಿ ಕಳೆ ತುಂಬಬೇಕು” ಎಂದು ಆಶಿಸಿದ ಗವಿಸಿದ್ದೇಶ್ವರ ಶ್ರೀಗಳು, ಸಮಾಜದಲ್ಲಿ ಪ್ರೀತಿ, ಸಾಮರಸ್ಯ, ದುಡಿಮೆಯ ಗೌರವ ಮತ್ತು ಮಾನವೀಯ ಮೌಲ್ಯಗಳು ಬೆಳೆಯಬೇಕು ಎಂದು ಸಂದೇಶ ನೀಡಿದರು.

ಮೈಸೂರು ದಸರಾ ಉದ್ಘಾಟನಾ ವೇದಿಕೆಯಿಂದ ಗವಿಸಿದ್ದೇಶ್ವರ ಸ್ವಾಮೀಜಿ ನೀಡಿದ ಈ ಸಂದೇಶವು ಉತ್ಸವದ ವೈಭವದ ಆಚೆಗೆ ಮಾನವೀಯತೆ, ಸಾಮಾಜಿಕ ಸಾಮರಸ್ಯ ಮತ್ತು ನಾಡಿನ ಅಭಿವೃದ್ಧಿಯ ಅಗತ್ಯವನ್ನು ಎತ್ತಿಹಿಡಿಯಿತು.Mysuru Dasara jk02_new jk02 new

 

English Summary
Title

Mysuru Dasara 2026 Inauguration: Gavisiddeshwara Swamiji Shares Powerful Speech on Social Harmony

Short Description
Revered seer Sri Abhinava Gavisiddeshwara Swamiji officially inaugurated the grand Mysuru Dasara 2026 festival at Chamundi Hill. Attended by top dignitaries, the traditional ceremony marked the beginning of Karnataka’s famous cultural celebration. During his powerful inaugural address, the Swamiji delivered an inspiring message focused on humanity, urging people to live mindfully rather than trampling over others. Emphasizing social harmony, strong human values, and the dignity of labour, the seer highlighted that true state development lies in achieving social equality and elevating the collective spirit of society.
Keywords
Gavisiddeshwara Sri, Mysuru Dasara, Inauguration, Speech