ನಾಗರಿಕ ಸೌಕರ್ಯ ಗುತ್ತಿಗೆ ಕಾಮಗಾರಿಗಳು ಏಕೆ ವಿಳಂಬವಾಗುತ್ತವೆ ಗೊತ್ತೆ…?

ಬೆಂಗಳೂರು, ಸೆಪ್ಟೆಂಬರ್ 4,2021 (www.justkannada.in): ರಸ್ತೆ ರಿಪೇರಿ, ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕೆಲಸಗಳು, ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿಗಳಂತಹ ಸಣ್ಣ ಕಾಮಗಾರಿಗಳು ಏಕೆ ವಿಳಂಬವಾಗುತ್ತವೆ ಅಥವಾ ಎಂದಿಗೂ ಮುಗಿಯುವುದೇ ಇಲ್ಲ ನಿಮಗೆ ಗೊತ್ತೇ? ಏಕೆಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ನೆಚ್ಚಿನ ಗುತ್ತಿಗೆದಾರರಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಕಾಮಗಾರಿ ಗುತ್ತಿಗೆಗಳನ್ನು ನೀಡುತ್ತಿದೆ.

ಇದರಿಂದಾಗಿ ನಗರದಲ್ಲಿ ನಡೆಯುವ ಇಂತಹ ಕಾಮಗಾರಿಗಳು ಸ್ವಾಭಾವಿಕವಾಗಿಯೇ ಪೂರ್ಣಗೊಳ್ಳೂವಲ್ಲಿ ಬಹಳ ನಿಧಾನವಾಗುತ್ತವೆ. ಈ ಮೂಲಕ ನಾಗರಿಕರಿಗೆ ಅನಾನುಕೂಲವಾಗುತ್ತದೆ.

ಆಯುಕ್ತರ ವ್ಯಾಪ್ತಿಯಡಿ ಕಾರ್ಯನಿರ್ವಹಿಸುವ ತಾಂತ್ರಿಕ ಮೇಲ್ವಿಚಾರಣಾ ಕೋಶವು (ಟಿವಿಸಿಸಿ) ಇತ್ತೀಚೆಗೆ ನಡೆಸಿದ ಒಂದು ತನಿಖೆಯು, ಎಂಎಸ್‌ ವಿ ಕನ್ಸ್ಟ್ರಕ್ಷನ್ಸ್ ಕಂಪನಿಗೆ ಬಿಬಿಎಂಪಿ ವತಿಯಿಂದ ಬರೋಬ್ಬರಿ 47 ಯೋಜನೆಗಳ ಕಾಮಗಾರಿ ಗುತ್ತಿಗೆಯನ್ನು ನೀಡಿರುವುದು ಕಂಡು ಬಂದಿದೆ.

ಈ ಕಂಪನಿಗೆ ಗರಿಷ್ಠ ರೂ.೧೬೩ ಕೋಟಿಗಳಷ್ಟು ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಮಾತ್ರ ಸಾಮರ್ಥ್ಯವಿದೆ. ಆದರೆ ಬಿಬಿಎಂಪಿಯ ಕೃಪಾಕಟಾಕ್ಷದಿಂದ ಆ ಕಂಪನಿಗೆ ರೂ.೨೯೬ ಮೊತ್ತದ ಕಾಮಗಾರಿಗಳ ಗುತ್ತಿಗೆಯನ್ನು ಲಭಿಸಿದೆ. ಮೇಲಾಗಿ ಇದೇ ಕಂಪನಿಯು ಪುನಃ ರೂ.೧೭೨ ಕೋಟಿ ಮೊತ್ತದ ಕಾಮಗಾರಿಗಳನ್ನು ಬಿಬಿಎಂಪಿ ವತಿಯಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಒಟ್ಟು ಈ ಕಂಪನಿಗೆ ವಹಿಸಿರುವ ಕಾಮಗಾರಿಗಳ ಮೊತ್ತ ರೂ.೪೬೮.೩೯ ಕೋಟಿಗಳಾಗಿವೆ.

ಸರಳವಾಗಿ ಹೇಳುವುದಾದರೆ, ಬಿಬಿಎಂಪಿಯು ಈ ಕಂಪನಿಗೆ ಸಮರ್ಥವಾಗಿ ಕೈಗೊಳ್ಳಬಹುದಾಗಿರುವ ಗರಿಷ್ಠ ಗುತ್ತಿಗೆಗಳಿಗಿಂತ ಮೂರುಪಟ್ಟು ಜವಾಬ್ದಾರಿಯನ್ನು ನೀಡಿದೆ.

ಗುತ್ತಿಗೆ ಕಾಮಗಾರಿಗಳ ಹರಾಜು ಸಾಮರ್ಥ್ಯ, ಗುತ್ತಿಗೆದಾರನ ಹಿಂದಿನ ವರ್ಷದ ಒಟ್ಟು ಗರಿಷ್ಠ ವಹಿವಾಟಿನಲ್ಲಿ ಪ್ರಸ್ತುತ ಅವರ ಬಳಿ ಇರುವಂತಹ ಒಟ್ಟು ಕಾಮಗಾರಿಗಳ ಸಂಖ್ಯೆಯನ್ನು ಕಳೆದು ಲೆಕ್ಕ ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಗುತ್ತಿಗೆದಾರರ ಬಳಿ ತಾವು ವಹಿಸಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವಂತಹ ಸಾಧನಗಳು, ಉಪಕರಣಗಳು, ಹಣ ಹಾಗೂ ವಾಹನಗಳಿರುವುದನ್ನು ಖಾತ್ರಿಪಡಿಸಬಹುದು.

ಈ ಹಗರಣ ಬಯಲಿಗೆ ಬಂದದ್ದು ಹೇಗೆ

ಸರಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಟಿವಿಸಿಸಿಯು, ರಸ್ತೆ ಮೂಲಭೂತಸೌಕರ್ಯ, ಯೋಜನೆಗಳು (ಕೇಂದ್ರ) ಹಾಗೂ ಕೆರೆಗಳು ಒಳಗೊಂಡಂತೆ, ಬೆಂಗಳೂರು ನಗರದ ಎಂಟು ವಲಯಗಳ ಕಾರ್ಯನಿರ್ವಾಹಕ ಇಂಜಿನಿಯರುಗಳಿಗೆ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಕಂಪನಿಗೆ ಎಷ್ಟು ಯೋಜನೆಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸುವ ದಾಖಲೆಗಳನ್ನು ಐದು ದಿನಗಳ ಒಳಗಾಗಿ ಒದಗಿಸಬೇಕೆಂದು ಸೂಚಿಸಲಾಯಿತು. ಬಿಬಿಎಂಪಿ ವತಿಯಿಂದ ಗರಿಷ್ಠ ಕಾಮಗಾರಿಗಳನ್ನು ಕಸಿದುಕೊಳ್ಳಲು ಕಂಪನಿಯು ಗಂಭೀರ ಸ್ವರೂಪದ ಭ್ರಷ್ಟಾಚಾರ ಎಸಗಿರುವುದು ಈ ಮೂಲಕ ಕಂಡು ಬಂದಿದೆ.

ಈ ಟಿವಿಸಿಸಿ ತನಿಖೆಯು ಹಲವು ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಗುತ್ತಿಗೆದಾರರು, ಭ್ರಷ್ಟ ಅಧಿಕಾರಿಗಳ ನೆರವಿನೊಂದಿಗೆ ಮೇಲಧಿಕಾರಿಗಳ ಕಣ್ಣು ತಪ್ಪಿಸಿ ಬಿಬಿಎಂಪಿ ಇಂದ ಇಷ್ಟೊಂದು ಕಾಮಗಾರಿಗಳ ಗುತ್ತಿಗೆಯನ್ನು ಪಡೆಯುವುದು ಹೇಗೆ ಸಾಧ್ಯವಾಯಿತು?

ಮೂಲಗಳ ಪ್ರಕಾರ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಕಂಪನಿಯು ಇತರೆ ವಲಯಗಳಲ್ಲಿ ಗುತ್ತಿಗೆಗಳನ್ನು ಪಡೆಯಲು ತನ್ನ ಹಾಲಿ ಗುತ್ತಿಗೆಗಳ ಸಂಖ್ಯೆಯನ್ನು ವಿವಿಧ ಬಿಬಿಎಂಪಿ ವಲಯಗಳಲ್ಲಿ ಅಡಗಿಸಿಟ್ಟಿತ್ತಂತೆ. ಇದರಿಂದ ಕಂಪನಿಯು ದೊಡ್ಡ ಗುತ್ತಿಗೆಗಳನ್ನು ಪಡೆಯಲು ತಮಗೆ ಸಾಮರ್ಥ್ಯವಿದೆ ಎಂದು ತೋರಿಸಲು ನೆರವಾಗಿದೆ.

ಈ ಕಂಪನಿಯು ಸಿವಿ ರಾಮನ್ ನಗರ, ಮಹದೇವಪುರ, ದಾಸರಹಳ್ಳಿ ಯೋಜನೆಗಳು (ಪೂರ್ವ ವಿಭಾಗ), ಯಲಹಂಕ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ, ಬಿಟಿಎಂ ಲೇಔಟ್, ಜಯನಗರ, ಮಹಾಲಕ್ಷ್ಮಿಪುರ ಹಾಗೂ ರಾಜಾಜಿನಗರವೂ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಉದಾಹರಣೆಗೆ, ಈ ಗುತ್ತಿಗೆ ಕಂಪನಿಯು ತನ್ನ ಬಳಿ ಹಾಲಿ ಯಾವುದೇ ಕಾಮಗಾರಿಗಳಿಲ್ಲ ಎಂದು ತೋರಿಸಿ, ಸಿವಿ ರಾಮನ್‌ನಗರದಲ್ಲಿನ ಒಂದು ಯೋಜನೆಗೆ ತಮ್ಮ ಬಿಡ್ ಸಾಮರ್ಥ್ಯವನ್ನು ರೂ.೧೦೮ ಕೋಟಿ ಎಂದು ತೋರಿಸಿದೆ.

ಈ ಕಂಪನಿ ಪಡೆದಿರುವ ಕಾಮಗಾರಿಗಳಲ್ಲಿ ರಸ್ತೆಗಳ ಡಾಂಬರೀಕರಣ ಬಹಳ ದೊಡ್ಡ ಕಾಮಗಾರಿಯಾಗಿದ್ದು, ಮೇಲೆ ವಿವರಿಸಿರುವ ಎಲ್ಲಾ ವಿಭಾಗಗಳಲ್ಲಿಯೂ ಕಾಮಗಾರಿಗಳ ಗುತ್ತಿಗೆಯನ್ನು ಪಡೆದುಕೊಂಡಿದೆ. ಆನಂದರಾವ್ ವೃತ್ತ, ಹೆಚ್‌ಎಸ್‌ಆರ್ ಬಡಾವಣೆ, ಯಶವಂತಪುರ, ಮತ್ತಿಕೆರೆ, ನಾಯಂಡಹಳ್ಳಿ, ಸಿಲ್ಕ್ ಬೋರ್ಡ್ ಹಾಗೂ ಇತರೆ ಸ್ಥಳಗಳಲ್ಲಿ ಈ ಕಂಪನಿಯು ಅತ್ಯಂತ ಕಡಿಮೆ ಬಿಡ್ಡರ್ ಆಗಿ ತೋರಿಸಿಕೊಂಡಿದೆ. ಜೊತೆಗೆ ಈ ಕಂಪನಿಯು ಬಿನ್ನಿ ಮಿಲ್ ಟ್ಯಾಂಕ್ ಬಂಡ್ ಹಾಗೂ ವಿಜಯನಗರ ಪೈಪ್‌ಲೈನ್ ರಸ್ತೆಯ ನಡುವಿನ ಪಾದರಾಯನಪುರ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಗೂ ಅತ್ಯಂತ ಕಡಿಮೆ ಬಿಡ್ಡರ್ ಎಂದು ತೋರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕುತೂಹಲಕರವಾದ ಸಂಗತಿ ಎಂದರೆ ಈ ಗುತ್ತಿಗೆದಾರ ಕಂಪನಿಯೂ ಇನ್ನೂ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ಅನುಮಾನವಿದೆ, ಏಕೆಂದರೆ ಟಿವಿಸಿಸಿ ನಿಯಮಗಳು ಕೋರಿದಂತೆ ಅನೇಕ ಕಾರ್ಯನಿರ್ವಾಹಕ ಇಂಜಿನಿಯರುಗಳು ಎಲ್ಲಾ ದಾಖಲಾತಿಗಳನ್ನು ಒದಗಿಸಿಲ್ಲ. ಇಂತಹ ಇಂಜಿನಿಯರುಗಳ ಪೈಕಿ ಶಾಂತಿನಗರ, ಗಾಂಧಿನಗರ, ಕೆ.ಆರ್.ಪುರಂ ಹಾಗೂ ಬ್ಯಾಟರಾಯನಪುರ ವಿಭಾಗಳ ಇಂಜಿನಿಯರುಗಳು ಸೇರಿದ್ದಾರೆ.

‘ಸೂಕ್ತ ಕ್ರಮ’ ಕೈಗೊಳ್ಳುವ ಸಲುವಾಗಿ ಈ ವರದಿಯನ್ನು ನಗರಾಭಿವೃದ್ಧಿ ಇಲಾಖೆಯ (ಯುಡಿಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಸಲ್ಲಿಸಲಾಗಿದೆ.

ಈ ಸಂಬಂಧ ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. “ಸಂಬಂಧಪಟ್ಟ ಇಂಜಿನಿಯರುಗಳು ಕಾಮಗಾರಿಗಳ ಗುತ್ತಿಗೆಯನ್ನು ನೀಡುವಾಗ ಸರಿಯಾಗಿ ತಾಂತ್ರಿಕ ಮೌಲ್ಯಮಾಪನವನ್ನು ನಡೆಸಬೇಕು. ಆಡಳಿತಾತ್ಮಕವಾಗಿ ನಾವು ಹೆಚ್ಚು ಏನೂ ಮಾಡಲಾಗುವುದಿಲ್ಲ,” ಎಂದರು. ವರದಿಯಲ್ಲಿ ನೀಡಿರುವ ಶಿಫಾರಸ್ಸುಗಳ ಪ್ರಕಾರ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

ಈ ನಡುವೆ ಗುತ್ತಿಗೆದಾರ ಎಂ.ಎಸ್. ವೆಂಕಟೇಶ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: why –contract-works- delayed-bangalore