ಬೆಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ಪ್ರಕರಣ ಪತ್ತೆ: ಕಾಲೇಜು ತಾತ್ಕಾಲಿಕ ಬಂದ್ ಗೆ ಸೂಚಿಸಿದ ಸಚಿವ ಡಾ.ಸುಧಾಕರ್.

 

ಬೆಂಗಳೂರು, ಸೆಪ್ಟೆಂಬರ್ 3, 2021 : (www.justkannada.in news) ಹೊರಮಾವು ನರ್ಸಿಂಗ್ ಕಾಲೇಜು ಹಾಗೂ ಕೆಜಿಎಫ್ ನ ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಲೇಜು ಮುಚ್ಚಿ ಸುರಕ್ಷತಾ ಕ್ರಮಕ್ಕೆ ಸೂಚಿಸಲಾಗಿದೆ.

ಹೊರರಾಜ್ಯದಿಂದ ವಿದ್ಯಾರ್ಥಿಗಳು ಬರುವುದರಿಂದ ಶಿಕ್ಷಣ ಸಂಸ್ಥೆಗಳು ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಹೊರಮಾವು ಕ್ರಿಸ್ಟಿಯನ್ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಹೇಳಿದಿಷ್ಟು…

300 ಮಂದಿ ಪೈಕಿ 34 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ತಾತ್ಕಾಲಿಕವಾಗಿ ಕಾಲೇಜು ಮುಚ್ಚಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ.
ಕರ್ನಾಟಕ ಶೈಕ್ಷಣಿಕ ಕೇಂದ್ರವಾಗಿದ್ದು, ಅನೇಕ ವಿದ್ಯಾರ್ಥಿಗಳು ಬರುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 800 ನರ್ಸಿಂಗ್ ಕಾಲೇಜುಗಳಿವೆ. ಕೆಜಿಎಫ್ ಹಾಗೂ ಹೊರಮಾವು ನರ್ಸಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೋವಿಡ್ ಸೋಂಕಿಗೀಡಾಗಿರುವುದು ಕಂಡುಬಂದಿದೆ. ಹೊರಮಾವು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ಬಂದವರಾಗಿದ್ದಾರೆ. 600 ವಿದ್ಯಾರ್ಥಿಗಳ ಪೈಕಿ 34 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, ಬಹುತೇಕ ಲಕ್ಷಣರಹಿತರಾಗಿದ್ದಾರೆ. ಇವರೆಲ್ಲರೂ ಕೇರಳದಿಂದ ಬಂದಿದ್ದು, ಇವರ ಮಾದರಿಯನ್ನು ಜೀನೋಮಿಕ್ ಸೀಕ್ವೆನ್ಸ್ ಗೂ ಕಳುಹಿಸಲಾಗುವುದು ಎಂದು ತಿಳಿಸಿದರು.

ಸೋಂಕಿತ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್, ಹೋಟೆಲ್ ಮೊದಲಾದ ಕಡೆ ಐಸೋಲೇಶನ್ ಮಾಡಲಾಗುವುದು. ಇನ್ನೂ ಹಲವರನ್ನು ಸಂಸ್ಥೆಯಲ್ಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. 7-8 ದಿನಗಳ ಕಾಲ ಸಂಸ್ಥೆಯನ್ನು ಮುಚ್ಚಿ, ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಈ ಸಂಸ್ಥೆ ಇರುವ ಪ್ರದೇಶವನ್ನು ಸೂಕ್ಷ್ಮ ಕಂಟೇನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಸುತ್ತಮುತ್ತಲಿನ 700-800 ನಿವಾಸಿಗಳಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಪತ್ತೆ ಮಾಡಿ ಪರೀಕ್ಷೆ ಮಾಡಲು ಸೂಚಿಸಲಾಗಿದೆ.

ಕೇರಳದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿಯೇ ಇದೆ. ಆ ಕಾರಣದಿಂದ ಗಡಿಭಾಗದಲ್ಲಿ ಪ್ರತ್ಯೇಕ ಸೂಚನೆ, ಮಾರ್ಗಸೂಚಿ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಕೇರಳದಿಂದ ಬರುವಾಗಲೇ ನೆಗಟಿವ್ ವರದಿ ಹೊಂದಿರಬೇಕು, ಲಸಿಕೆ ಪಡೆದಿರಬೇಕೆಂದು ಸೂಚಿಸಲಾಗಿದೆ. ಆದರೂ ಈ ರೀತಿ ಸೋಂಕು ಕಂಡುಬಂದಿರುವುದರಿಂದ ಕ್ರಮ ವಹಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

ಗಣೇಶ ಹಬ್ಬ ಆಚರಣೆ ಭಾವನಾತ್ಮಕವಾದುದು. ಆದರೆ ನೆರೆಯ ಕೇರಳದಲ್ಲಿ ಓಣಂ, ಮೊಹರಂ ನಿಂದ ಕೋವಿಡ್ ಹತೋಟಿ ತಪ್ಪಿದೆ. ಆ ರೀತಿ ರಾಜ್ಯದಲ್ಲಿ ಹಳಿ ತಪ್ಪಬಾರದು ಎಂಬುದು ಸರ್ಕಾರದ ಉದ್ದೇಶ. ಅಂತಿಮವಾಗಿ ಸರ್ಕಾರ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣ ನಿಯಂತ್ರಣದಲ್ಲೇ ಇದೆ ಎಂದರು.
ಶಾಲೆಗಳು ಆರಂಭವಾಗಿದ್ದು, ಎಲ್ಲ ಕಡೆ ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಪೋಷಕರಷ್ಟೇ ಜವಾಬ್ದಾರಿಯನ್ನು ಸರ್ಕಾರ ಹೊತ್ತಿದೆ. ಗಡಿಭಾಗ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಎಚ್ಚರ ವಹಿಸಲಾಗಿದೆ. ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಸಮರ್ಪಕ ಪರಿಶೀಲನೆ ಇರಬೇಕೆಂದು ಸೂಚಿಸಲಾಗಿದೆ ಎಂದರು.

key words : bangalore-covid-college-close-sudhakar

———-