ಹಿಂದೂ ಧರ್ಮಕ್ಕೆ ವೇದಗಳೇ ಮೂಲ ಧರ್ಮಗ್ರಂಥಗಳು: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಮೈಸೂರು, ನವೆಂಬರ್ 06, 2022 (justkannada.in): ಸನಾತನ ಹಿಂದೂ ಧರ್ಮಕ್ಕೆ ವೇದಗಳೇ ಮೂಲ ಧರ್ಮ ಗ್ರಂಥಗಳು ಎಂದು ತುಮಕೂರು ಶ್ರೀರಾಮಕೃಷ್ಣ – ವಿವೇಕಾನಂದಾಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಡಾ.ಎಸ್.ರಾಧಾಕೃಷ್ಣನ್ ತತ್ತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದಲ್ಲಿ’ ಭಾರತ ಸಂಸ್ಕೃತಿ, ಸಂಸ್ಕೃತ ಭಾರತಿ ‘ ಎಂಬ ವಿಷಯದ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನಾತನ ಧರ್ಮ ವ್ಯಕ್ತಿ ಆಧಾರಿತ ಧರ್ಮವಲ್ಲ. ತತ್ತ್ವ ಆಧಾರಿತ ಧರ್ಮ. ಇದು ಹೆಚ್ಚು ಪ್ರಚಾರ ಆಗಬೇಕು. ಪ್ರಾಧ್ಯಾಪಕರು ಈ ವಿಷಯವನ್ನು ಮಕ್ಕಳಿಗೆ ತಿಳಿಸಬೇಕು. ಸನಾತನ ಧರ್ಮದಲ್ಲಿ ಋಷಿಗಳು, ಅವತಾರ ಪುರುಷರಿಂದ ಅಷ್ಟೇ ರಚನೆಯಾಗಿಲ್ಲ.‌ಭಾರತ ಸಂಸ್ಕೃತ ಮತ್ತು ಸಂಸ್ಕೃತಿಯ ತ್ರಿವೇಣಿ ಸಂಗಮ. ಸನಾತನ ಭಾರತೀಯ ಧರ್ಮದಲ್ಲಿ ಭಗವಂತನ ಸ್ವರೂಪ ಅಡಗಿದೆ.‌ ಶಂಕರಾಚಾರ್ಯರು, ವಿವೇಕಾನಂದರು ನಮ್ಮ‌ದೇಶದ ಆದರ್ಶ ಪುರುಷರು ಎಂದರು.

ಕೋವಿಡ್ ಸಮಯದಲ್ಲಿ ಅಮೆರಿಕಾದ ಅಧ್ಯಕ್ಷ ಮೆದುಳಿನಿಂದ ಯೋಚಿಸಿದರು. ಪರಿಣಾಮ ಪ್ರಾಣಬಿಟ್ಟವರ ಸಂಖ್ಯೆ ಹೆಚ್ಚಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಹೃಯದಿಂದ ಯೋಚಿಸಿದರು. ಹಾಗಾಗಿ ಪ್ರಾಣಹಾನಿ ಅಮೆರಿಕಾಕ್ಕೆ ಹೋಲಿಸಿದರೆ ಕಡಿಮೆ ಇತ್ತು. ಜೊತೆಗೆ ಕೋವಿಡ್ ಭಾರತದ ಆರ್ಥಿಕ ವ್ಯವಸ್ಥೆ ಮೇಲೆ ಅಂತಹ ಪರಿಣಾಮ ಬೀರಲಿಲ್ಲ. ಅಂತಃಕರಣ ಹಾಗೂ ಮಾನವೀಯ ಮೌಲ್ಯಗಳು ಭಾರತೀಯರ ರಕ್ತದಲ್ಲೇ ಇದೆ. ಸನಾತನ ಧರ್ಮಕ್ಕೆ ಸಾವಿಲ್ಲ. ಭಾರತದ ಧರ್ಮ ಹಾಗೂ ಸಂಸ್ಕೃತಿಯನ್ನು ಪೂರ್ವಗ್ರಹ ಇಲ್ಲದೆ ಅಧ್ಯಯನ ಮಾಡಿದರೆ ನೈಜ ಸ್ವರೂಪ ಸಿಗುತ್ತದೆ
ಎಂದರು.

ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಂದರ್ಶಕ ಪ್ರಾಧ್ಯಾಪಕ ಪ್ರೊ.ಅನಂತರಾಮು, ರಾಮಶೇಷು ಹಾಗೂ ಪ್ರೊ.ಸುರೇಶ್ ಸೇರಿದಂತೆ ಇತರರು ಇದ್ದರು.