ಕಾಲೇಜು ಕೊಠಡಿ  ಖಾಲಿ ಮಾಡುವಂತೆ ಬೆಂಗಳೂರು ವಿವಿ ಮಾಜಿ ಕುಲಪತಿಗೆ ಯುವಿಸಿಇ ಆದೇಶ.

ಬೆಂಗಳೂರು, ಡಿಸೆಂಬರ್ 13, 2022 (www.justkannada.in): ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಯುವಿಸಿಇ), 2018ರಲ್ಲೇ ಬೋಧನಾ ವೃತ್ತಿಯಿಂದ ನಿವೃತ್ತರಾದರೂ ಸಹ ಇನ್ನೂ ಅನಧಿಕೃತವಾಗಿ ಇರುವಂತಹ ಕೊಠಡಿಯನ್ನು ಕೂಡಲೇ ತೆರವುಗೊಳಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೆ.ಆರ್. ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದೆ.

ಸೋಮವಾರದಂದು, ಈಗ ಸ್ವಾಯತ್ತ ವಿಶ್ವವಿದ್ಯಾಲಯವಾಗಿರುವ ಯುವಿಸಿಇನ ಆಡಳಿತ ಮಂಡಳಿ ಸದಸ್ಯರ ಎರಡನೇ ಸಭೆ ನಡೆಯಿತು. ಈ ಸಭೆಯಲ್ಲಿ ವೇಣುಗೋಪಾಲ್ ಅವರಿಗೆ ತತ್‌ ಕ್ಷಣವೇ ಕೊಠಡಿಯನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು. ವೇಣುಗೋಪಾಲ್ ಅವರು ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಬೋಧಕರಾಗಿದ್ದಾಗ ಅವರಿಗೆ ಯುವಿಸಿಇ ವತಿಯಿಂದ ಒಂದು ಕೊಠಡಿಯನ್ನು ನೀಡಲಾಗಿತ್ತು.

ಈ ಸಂಬಂಧ ಮಾತನಾಡಿರುವ ಯುವಿಸಿಇನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದಂತೆ, “ಸೇವೆಯಿಂದ ನಿವೃತ್ತರಾದ ನಂತರವೂ ಸಹ ಹಾಗೂ ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾಗಲೂ ಸಹ ಅವರು ಆ ಕೊಠಡಿಯನ್ನು ಉಪಯೋಗಿಸುತ್ತಿದ್ದರು. ಅವರ ಸೇವಾ ಹಿರಿತನವನ್ನು ಗಮನಿಸಿ, ಹಾಗೂ ಆಗ ಅವರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಕಾರಣದಿಂದಾಗಿ ನಾವು ಅವರನ್ನು ಪ್ರಶ್ನಿಸರಲಿಲ್ಲ. ಆದರೆ ಅವರು ಕುಲಪತಿ ಸೇವಾವಧಿ ಪೂರ್ಣಗೊಂಡ ನಂತರವೂ ಸಹ, ತಡರಾತ್ರಿಯವರೆಗೆ ಹಾಗೂ ರಜಾ ದಿನಗಳಲ್ಲಿ ಆ ಕೊಠಡಿಯನ್ನು ಬಳಸುವುದನ್ನು ಮುಂದುವರೆಸಿದರು.”

ವಿಶ್ವವಿದ್ಯಾಲಯದ ಅನುಮೋದನೆ ಇಲ್ಲದೆಯೇ ವೇಣುಗೋಪಾಲ್ ಅವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿಗಳನ್ನೂ ಸಹ ತೆಗೆದುಕೊಳ್ಳುತ್ತಿದ್ದರಂತೆ. “ಓರ್ವ ಅತಿಥಿ ಉಪನ್ಯಾಸಕನಾಗಿ ತರಗತಿಗಳನ್ನು ತೆಗೆದುಕೊಳ್ಳಬೇಕಾದರೂ ಸಹ ಅದಕ್ಕೆ ಮೀಸಲಾಗಿರುವ ನಿಬಂಧನೆಗಳನ್ನು ಪಾಲಿಸಬೇಕು,” ಎಂದು ಯುವಿಸಿಯ ಹಿರಿಯ ಅಧಿಕಾರಿ ತಿಳಿಸಿದರು.

ಯುವಿಸಿಇ ಪ್ರಾಂಶುಪಾಲರು ವೇಣುಗೋಪಾಲ್ ಅವರಿಗೆ ಹಾಗೂ ಮಧ್ಯಂತರ ನಿರ್ದೇಶಕ ಹೆಚ್.ಎನ್. ರಮೇಶ್ ಅವರಿಗೆ ಈ ಸಂಬಂಧ ಒಂದು ಪತ್ರವನ್ನು ಬರೆದಿದ್ದು, ಆ ಪತ್ರದ ಒಂದು ಪ್ರತಿ ಮಾಧ್ಯಮಕ್ಕೂ ಲಭ್ಯವಾಗಿದೆ. ಆ ಪತ್ರದ ಸಾರಾಂಶ ಹೀಗಿದೆ: “ತಾವು ಯುವಿಸಿಯ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಬೋಧನಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ತಮಗೆ ಒಂದು ಕಾಲೇಜಿನ ಕೊಠಡಿಯೊಂದನ್ನು ಬಳಸಲು ನೀಡಲಾಗಿತ್ತು. ಆದರೆ ತಾವು ಅಕ್ಟೋಬರ್ ೩೧, ೨೦೧೮ರಂದು ಸೇವೆಯಿಂದ ನಿವೃತ್ತರಾದರೂ ಸಹ ಈಗಲೂ ಆ ಕೊಠಡಿಯನ್ನು ತೆರವುಗೊಳಿಸಿಲ್ಲ. ಆ ಕೊಠಡಿ ಇತರೆ ಅಧಿಕೃತ ಉದ್ದೇಶಗಳಿಗೆ ಅತ್ಯವಶ್ಯಕವಾಗಿರುವ ಕಾರಣದಿಂದಾಗಿ ತತ್‌ಕ್ಷಣವೇ ಆ ಕೊಠಡಿಯನ್ನು ತೆರವುಗೊಳಿಸಬೇಕೆಂದು ಈ ಮುಲಕ ಸೂಚಿಸಲಾಗಿದೆ.”

“ತಮಗೆ ನಿವೃತ್ತಿಯ ನಂತರವೂ ಸಹ ವಿದ್ಯಾರ್ಥಿಗಳಿಗೆ ಪಾಠ ಹೇಳುವುದು ತುಂಬಾ ಇಷ್ಟವಾದ ಕೆಲಸ ಎಂದು, ಬೋಧನೆಯಲ್ಲಿ ತಮಗಿರುವ ಆಸಕ್ತಿಯ ಬಗ್ಗೆ ನಮಗೆ ತಿಳಿದಿದೆ. ಆದರೆ ನೀವು ನಿಮ್ಮ ಬೋಧನಾ ವೃತ್ತಿಯನ್ನು ಮುಂದವರೆಸಲು ಬಯಸಿದರೆ, ಸುಸ್ವಾಗತ. ಆದರೆ ಬಿಓಜಿ ಅಧ್ಯಕ್ಷರಿಂದ ಮುಂಚಿತವಾಗಿ ಅನುಮೋದನೆಯನ್ನು ಪಡೆದುಕೊಳ್ಳಬೇಕು,” ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಸಂಪರ್ಕಿಸಿದಾಗ ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ. ಮುತ್ತುರಾಮನ್ ಅವರು, ಇದೊಂದು ಆಂತರಿಕ ವಿಷಯವಾಗಿದೆ ಎಂದು ತಿಳಿಸಿ ತಮ್ಮ ಅಭಿಪ್ರಾಯವನ್ನು ನೀಡಲು ನಿರಾಕರಿಸಿದರು. ವೇಣುಗೋಪಾಲ್ ಅವರು ಈ ಸಂಬಂಧ ಮಾತನಾಡಲು ಲಭ್ಯವಾಗಲಿಲ್ಲ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: UVCE -orders – former –VC- Bangalore University – college- room