ಇನ್ಮುಂದೆ ರೈಲು ಪ್ರಯಾಣಿಕರು ಲಗ್ಗೇಜ್‌ ಗೆ ಪ್ರತ್ಯೇಕ ಶುಲ್ಕ ಭರಿಸಬೇಕು..

ಬೆಂಗಳೂರು, ಜೂನ್ ,7, 2022(www.justkannada.in): ದಶಕಗಳಿಂದಲೂ ಭಾರತೀಯರು ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಏಕೆಂದರೆ ರೈಲಿನಲ್ಲಿ ಲಗ್ಗೇಜ್ ಎಷ್ಟು ಬೇಕಾದರೂ ತೆಗೆದುಕೊಂಡು ಹೋಗಬಹುದು. ಆದರೆ ಇನ್ನು ಮುಂದೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ಭಾರತೀಯ ರೈಲ್ವೆ (ಐಆರ್‌ ಸಿಟಿಸಿ) ಹೊಸ ನಿಯಮಾವಳಿಗಳನ್ನು ಪರಿಚಯಿಸುತ್ತಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಚ್ಚುವರಿ ಲಗ್ಗೇಜ್‌ ಗೆ ಶುಲ್ಕಗಳನ್ನು ವಿಧಿಸಲು ನಿರ್ಧರಿಸಿದೆ. ಹೆಚ್ಚಿನ ಲಗ್ಗೇಜ್ ಇದ್ದರೆ ಪ್ರಯಾಣಿಕರು ಮುಂಚಿತವಾಗಿಯೇ ರಿಸರ್ವ್ ಮಾಡಿಸಬೇಕು ಅಥವಾ ಹೆಚ್ಚುವರಿ ಸ್ಥಳಾವಕಾಶವನ್ನು ಬುಕ್ ಮಾಡಿಕೊಳ್ಳಬೇಕು.

ನೈಋತ್ಯ ರೈಲ್ವೆ ಪ್ರಕಾರ ಎಸಿ ಫಸ್ಟ್ ಕ್ಲಾಸ್‌ ನಲ್ಲಿ ೭೦ ಕೆಜಿ, ಎಸಿ೨-ಟೈಯರ್‌ ನಲ್ಲಿ ೫೦ ಕೆಜಿ, ಎಸಿ ಚೇರ್ ಕಾರ್‌ ನಲ್ಲಿ ಹಾಗೂ ಸ್ಲೀಪರ್ ಕ್ಲಾಸ್‌ ನಲ್ಲಿ ೪೦ ಕೆಜಿ ಮತ್ತು ೨ನೇ ಕ್ಲಾಸ್‌ ನಲ್ಲಿ ೨೫ ಕೆಜಿವರೆಗೆ ಮಾತ್ರ ಲಗ್ಗೇಜ್ ತೆಗೆದುಕೊಂಡು ಹೋಗಬಹುದು. ಲಗ್ಗೇಜ್‌ ನ ಕನಿಷ್ಠ ದರ ರೂ.೩೦ ವಿಧಿಸಲಾಗುತ್ತದೆ.

ಒಂದು ವೇಳೆ ಪ್ರಯಾಣಿಕರು ಮುಂಚಿತವಾಗಿಯೇ ತಮ್ಮ ಲಗ್ಗೇಜ್ ಅನ್ನು ಬುಕ್ ಮಾಡಿಸದಿದ್ದರೆ ಹಾಗೂ ಹೆಚ್ಚುವರಿ ಲಗ್ಗೇಜ್ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದರೆ ಈಗ ನಿಗಧಿಪಡಿಸಿರುವ ಲಗ್ಗೇಜ್ ಶುಲ್ಕಕ್ಕಿಂತ ಆರು ಪಟ್ಟು ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.

ನೈಋತ್ಯ ರೈಲ್ವೆ ವಿಭಾಗದ ಪ್ರಯಾಣಿಕ ಸೇವೆಗಳ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನುಪ್ ದಯಾನಂದ್ ಅವರು ಈ ಸಂಬಂಧ ಮಾತನಾಡಿ,”ಸಾಮಾನ್ಯವಾಗಿ ಜನರು ತುಂಬಾ ಲಗ್ಗೇಜ್‌ ನೊಂದಿಗೆ ಪ್ರಯಾಣಿಸುತ್ತಾರೆ ಹಾಗೂ ತಮ್ಮ ಲಗ್ಗೇಜ್ ಅನ್ನು ಮೇಲಿನ ಬರ್ತ್ ಗಳಲ್ಲಿ ಇಡುತ್ತಾರೆ, ಆ ಮೂಲಕ ಇತರರಿಗೆ ತೊಂದರೆ ಉಂಟಾಗುತ್ತದೆ. ಹೆಚ್ಚಿನ ಲಗ್ಗೇಜ್ ಇದ್ದರೆ ಅದಕ್ಕೆ ಹಣ ಪಾವತಿಸಬೇಕು. ಲಗ್ಗೇಜ್‌ ಗೆ ಮುಂಚಿತವಾಗಿಯೇ ರಿಸರ್ವೇಷನ್ ಮಾಡಿಸಬಹುದು. ಇದರಿಂದ ಲಗ್ಗೇಜ್ ಅನ್ನು ವ್ಯವಸ್ಥಿತವಾದ ರೀತಿಯಲ್ಲಿ ಸಾಗಿಸುವುದು ಸುಲಭವಾಗಲಿದೆ,” ಎಂದು ವಿವರಿಸಿದರು.

ರೈಲ್ವೆ ಸಚಿವಾಲಯವು ಒಂದು ಟ್ವೀಟ್‌ ನಲ್ಲಿ ರೈಲು ಪ್ರಯಾಣಿಕರು ಸಾಧ್ಯವಾದಷ್ಟೂ ಕಡಿಮೆ ಲಗ್ಗೇಜ್ ತೆಗೆದುಕೊಂಡು ಹೋಗಬೇಕೆಂದು ಕೋರಿದೆ, ಏಕೆಂದರೆ ಹೆಚ್ಚು ಲಗ್ಗೇಜ್ ಇದ್ದರೆ ಪ್ರಯಾಣದ ಆನಂದ ಅರ್ಧದಷ್ಟು ಕಡಿಮೆಯಾಗುತ್ತದೆ.

ಆದಾಗ್ಯೂ, ಜನರು ಈ ನಿರ್ಧಾರವನ್ನು ಸಕಾರಾತ್ಮಕವಾಗಿ ಪರಿಗಣಿಸಿಲ್ಲ. ಬೆಂಗಳೂರಿನ ನಿವಾಸಿ ಅಶೋಕ್ ಎಸ್ ಅವರು ಹೇಳುವಂತೆ, “ರೈಲ್ವೆ ಒದಗಿಸುತ್ತಿರುವ ಸೌಕರ್ಯಗಳು ಅಷ್ಟು ಉತ್ತಮವಾಗೇನೂ ಇಲ್ಲ. ರೈಲುಗಳಲ್ಲಿರುವ ಶೌಚಾಲಯಗಳಲ್ಲಿ ಅಷ್ಟು ನೈರ್ಮಲ್ಯ ಇರುವುದಿಲ್ಲ; ನೆಲವನ್ನು ಶುಚಿಗೊಳಿಸುವುದಿಲ್ಲ. ಹಾಗಾಗಿ ಇಷ್ಟು ಕಳಪೆ ಸೌಕರ್ಯವಿರುವಾಗ ಹೆಚ್ಚು ಶುಲ್ಕವನ್ನೇಕೆ ಕೊಡಬೇಕು?,” ಎಂದರು.

ಕೆಲವು ಪ್ರಯಾಣಿಕರ ಅಭಿಪ್ರಾಯದ ಪ್ರಕಾರ ರೈಲ್ವೆ ಇಲಾಖೆಯು ಲಗ್ಗೇಜ್‌ ಗೆ ಶುಲ್ಕವನ್ನು ವಿಧಿಸುವುದಕ್ಕೆ ಮುಂಚೆ ಸರಿಯಾದ ಸಮಯಕ್ಕೆ ರೈಲುಗಳ ಸೇವೆಯನ್ನು ಒದಗಿಸಲು ತಿಳಿಸಿದ್ದಾರೆ. ಜೊತೆಗೆ ಕಾಯುವ ಪಟ್ಟಿಯಲ್ಲಿರುವ ರಿಸರ್ವೇಷನ್‌ ಗಳ ಕುರಿತಾಗಿಯೂ ಪ್ರಯಾಣಿಕರಲ್ಲಿ ಸಾಕಷ್ಟು ಗೊಂದಲವಿದೆ.

ಬೆಂಗಳೂರಿನಲ್ಲಿ ಐಟಿ ವೃತ್ತಿಯಲ್ಲಿರುವ ಆಶಿಕಾ ನಾಯರ್ ಅವರು, “ರೈಲುಗಳು ಬಹುಪಾಲು ಸರಿಯಾದ ಸಮಯಕ್ಕೆ ಸ್ಥಾನ ತಲುಪುವುದಿಲ್ಲ. ಪ್ರತಿ ಬಾರಿ ನಾವು ರೈಲಿನಲ್ಲಿ ಪ್ರಯಾಣಿಸಿದಾಗಲೂ ವಿಳಂಬವಾಗಿದೆ,” ಎನ್ನುತ್ತಾರೆ.

ಬೆಂಗಳೂರಿನವರೇ ಆದ ಮತ್ತೊಮ್ಮ ನಿವಾಶಿ ಅತುಲ್ ಮ್ಯಾಥ್ಯೂ ಅವರು ಹೇಳುವಂತೆ ಸಾಮಾನ್ಯವಾಗಿ ಕೆಳ ಮಧ್ಯಮ ವರ್ಗದವರು ಹಾಗೂ ಬಡವರೇ ಲಗ್ಗೇಜುಗಳೊಂದಿಗೆ ಅವರ ಹುಟ್ಟಿದ ಊರುಗಳಿಗೆ ಹೆಚ್ಚಾಗಿ ರೈಲುಗಳಲ್ಲಿ ಓಡಾಡುತ್ತಾರೆ. “ಇಲಾಖೆ ಈಗ ಲಗ್ಗೇಜ್ ಮೇಲೂ ಶುಲ್ಕ ವಿಧಿಸಿದರೆ ಆ ವರ್ಗದ ಜನರಿಗೆ ಹೊರೆಯಾಗುತ್ತದೆ. ಎಸಿ ಫಸ್ಟ್ ಕ್ಲಾಸ್‌ ನಲ್ಲಿ ಪ್ರಯಾಣಿಸುವವರಿಗೆ ಬೇಕಾದರೆ ಲಗ್ಗೇಜ್ ಶುಲ್ಕ ವಿಧಿಸಲಿ, ಆದರೆ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವ ಸಾಮಾನ್ಯರಿಗೆ ಏಕೆ ಶುಲ್ಕ?” ಎನ್ನುತ್ತಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: train passengers – pay -separate fee -luggage