ಬಜೆಟ್ ಕಡಿತಕ್ಕೆ ಅನುದಾನ ಕತ್ತರಿ

ಬೆಂಗಳೂರು:ಮೇ-25: ಬಿಬಿಎಂಪಿ ಮಂಡಿಸಿದ್ದ 12,958 ಕೋಟಿ ರೂ. ಬಜೆಟ್​ನಲ್ಲಿ 1,309 ಕೋಟಿ ರೂ. ಕಡಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ, ಕಡಿತದ ಮೊತ್ತವನ್ನು ಹೊಂದಾಣಿಕೆ ಮಾಡಲು ಮುಂದಾಗಿರುವ ಬಿಬಿಎಂಪಿ, ಜನಪ್ರತಿನಿಧಿಗಳಿಗೆ ನೀಡಲಾಗಿದ್ದ ಅನುದಾನ ಕಡಿತಗೊಳಿಸಲು ನಿರ್ಧರಿಸಿದೆ.

ಮುಂದಿನ ವರ್ಷ ಬರಲಿರುವ ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಬಿಎಂಪಿ ಆಡಳಿತ 2019-20ನೇ ಸಾಲಿಗೆ 12,958 ಕೋಟಿ ರೂ. ಮೊತ್ತದ ಭಾರಿ ಗಾತ್ರದ ಬಜೆಟ್ ಮಂಡಿಸಿತ್ತು. ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ಮತ್ತು ಬಜೆಟ್ ಗಾತ್ರ ಹೊಂದಾಣಿಕೆಯಾಗುತ್ತಿಲ್ಲ ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಆಯುಕ್ತರು ಕೂಡ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬಜೆಟ್ ಗಾತ್ರವನ್ನು 9 ಸಾವಿರ ಕೋಟಿ ರೂ.ಗೆ ಇಳಿಸಿ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಅದರ ನಡುವೆಯೂ ನಗರಾಭಿವೃದ್ಧಿ ಇಲಾಖೆ 12,958 ಕೋಟಿ ರೂ.ಗಳಲ್ಲಿ ಕೇವಲ 1,308.89 ಕೋಟಿ ರೂ. ಕಡಿತಗೊಳಿಸಿ 11,648.90 ಕೋಟಿ ರೂ.ಗೆ ಅನುಮೋದನೆ ನೀಡಿದೆ.

ಇಲಾಖೆ ನೀಡಿರುವ ಅನುಮೋದನೆಯಂತೆ ಬಜೆಟ್ ಪರಿಷ್ಕರಿಸಬೇಕಿದ್ದು, ಬಿಬಿಎಂಪಿ ಕಸರತ್ತು ನಡೆಸುತ್ತಿದೆ. ವಿಭಾಗವಾರು ನೀಡಿರುವ ಅನುದಾನ ಕಡಿತಗೊಳಿಸುವ ಬದಲು ಮೇಯರ್, ಉಪಮೇಯರ್ ನಿಧಿ, ಬಿಬಿಎಂಪಿ ಸದಸ್ಯರ ವಾರ್ಡ್ ಮತ್ತು ಶಾಸಕರ ಕ್ಷೇತ್ರಗಳಲ್ಲಿ ಕೈಗೊಳ್ಳಲು ನಿಗದಿ ಮಾಡಲಾಗಿರುವ ಅನುದಾನ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇನ್ನೊಂದು ವಾರದಲ್ಲಿ ಪರಿಷ್ಕೃತ ಬಜೆಟ್ ಸಿದ್ಧಗೊಳ್ಳಲಿದೆ.

800 ಕೋಟಿ ರೂ. ಕಡಿತ: ಸರ್ಕಾರ ಬಜೆಟ್ ಕಡಿತಗೊಳಿಸುತ್ತದೆ ಎಂಬ ಮುನ್ಸೂಚನೆ ಇದ್ದ ಕಾರಣ ಬಿಬಿಎಂಪಿ ಆಡಳಿತ ಈ ಹಿಂದೆಯೇ ಅನುದಾನ ಕಡಿತ ಕಾರ್ಯ ಆರಂಭಿಸಿತ್ತು. ಅದರಂತೆ ಬಿಬಿಎಂಪಿಯ ಎಲ್ಲ ಸದಸ್ಯರು, ಶಾಸಕರ ಅನುದಾನದಲ್ಲಿ ಶೇ.20 ಕಡಿತಗೊಳಿಸಲಾಗುತ್ತಿದೆ. ಜತೆಗೆ ವಾರ್ಡ್, ವಿಧಾನಸಭಾ ಕ್ಷೇತ್ರವಾರು ಕೈಗೊಳ್ಳಬಹುದಾದ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಅನುದಾನ ಕಡಿತಗೊಳಿಸಲಾಗಿದೆ. ಅವೆಲ್ಲದರಿಂದ 800 ಕೋಟಿ ರೂ. ಕಡಿಮೆ ಮಾಡಲಾಗಿದೆ. ಇನ್ನೂ 509 ಕೋಟಿ ರೂ. ಕಡಿತಗೊಳಿಸುವುದು ಬಾಕಿಯಿದೆ.

ಶೇ. 5ರಿಂದ 11 ಕಡಿತ: ಬಿಬಿಎಂಪಿ ಸದಸ್ಯರು, ಶಾಸಕರ ಅನುದಾನದ ಜತೆಗೆ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ ಮತ್ತು ಜೆಡಿಎಸ್ ನಾಯಕರಿಗೆ ನೀಡಲಾಗಿರುವ ಅನುದಾನ ಕಡಿತಗೊಳಿಸಲಾಗುತ್ತಿದೆ. ಅದರ ಜತೆಗೆ ಕೆಲ ಯೋಜನೆಗಳಿಗೆ ಹೆಚ್ಚುವರಿಯಾಗಿ ನಿಗದಿ ಮಾಡಲಾಗಿರುವ ಅನುದಾನವನ್ನು ಕಡಿಮೆ ಮಾಡಲಾಗುತ್ತಿದೆ. ಆ ಎಲ್ಲದರಿಂದಾಗಿ ಬಾಕಿ 509 ಕೋಟಿ ರೂ. ಕಡಿಮೆ ಮಾಡಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದಷ್ಟು ಮೊತ್ತಕ್ಕೆ ಬಜೆಟ್ ಇಳಿಸಲಾಗುತ್ತಿದೆ.

605 ಕೋಟಿ ರೂ.: ಬಜೆಟ್​ನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರ ವಿವೇಚನೆಗೆ ಒಳಪಟ್ಟ ಅನುದಾನ 150 ಕೋಟಿ ರೂ. ಮತ್ತು ಮೇಯರ್ ವಿವೇಚನೆಗೆ ಒಳಪಟ್ಟ ಅನುದಾನ 125 ಕೋಟಿ ರೂ. ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 75 ಕೋಟಿ ರೂ. ಮೀಸಲಿಡಲಾಗಿದೆ. ಅದರ ಜತೆಗೆ ಉಪಮೇಯರ್ ಭದ್ರೇಗೌಡ ಪ್ರತಿನಿಧಿಸುವ ನಾಗಪುರ ವಾರ್ಡ್​ನಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳಿಗಾಗಿ 10 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅದರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರ ವಿವೇಚನೆಗೊಳಪಟ್ಟ ಅನುದಾನ ಹೊರತುಪಡಿಸಿ ಉಳಿದ ಅನುದಾನಗಳಿಗೆ ಕತ್ತರಿ ಹಾಕಲಾಗುತ್ತಿದೆ.

ನಗರಾಭಿವೃದ್ಧಿ ಇಲಾಖೆ ಸೂಚಿಸಿದಂತೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಜನಪ್ರತಿನಿಧಿಗಳ ಅನುದಾನದಲ್ಲಿ ಮೊದಲು ಕಡಿತಗೊಳಿಸಲಾಗುವುದು. ಆನಂತರ ಅಗತ್ಯವಿದ್ದರೆ ವಿಭಾಗವಾರು ಅನುದಾನ ಕಡಿತಗೊಳಿಸಿ, ಬಜೆಟ್ ಗಾತ್ರವನ್ನು 11,649 ಕೋಟಿ ರೂ.ಗೆ ಇಳಿಸಲಾಗುತ್ತದೆ.

| ಅಬ್ದುಲ್ ವಾಜಿದ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ

ಇಳಿಕೆ ಬಜೆಟ್​ಗೆ ಆರ್ಥಿಕ ಇಲಾಖೆ ಒಪ್ಪಿಗೆ

ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಕಳುಹಿಸಿದ್ದ 12,958 ಕೋಟಿ ರೂ. ಮೊತ್ತದ ಬಜೆಟ್​ಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಆರ್ಥಿಕ ಇಲಾಖೆ ಒಪ್ಪಿರಲಿಲ್ಲ. ಬಿಬಿಎಂಪಿ ಆಯುಕ್ತರು ಬರೆದಿದ್ದ ಪತ್ರವನ್ನು ಪರಿಗಣಿಸಿ ಆರ್ಥಿಕ ಇಲಾಖೆ ಅಧಿಕಾರಿಗಳು ಬಜೆಟ್ ಗಾತ್ರವನ್ನು 9,500 ಕೋಟಿ ರೂ.ಗೆ ಇಳಿಸುವಂತೆ ಸೂಚಿಸಿದ್ದರು. ಆದರೆ, ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಮಧ್ಯಪ್ರವೇಶಿಸಿದ್ದರಿಂದ 11,648 ಕೋಟಿ ರೂ. ಮೊತ್ತಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

ಬಿಬಿಎಂಪಿ ಬಜೆಟ್ ಅನುಮೋದನೆಗೆ ವಿರೋಧ

ಬೆಂಗಳೂರು: ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವಾಗಲೇ ಬಿಬಿಎಂಪಿ ಬಜೆಟ್​ಗೆ ಅನುಮೋದನೆ ನೀಡಿರುವ ನಗರಾಭಿವೃದ್ಧಿ ಇಲಾಖೆ ಕ್ರಮದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಬಿಬಿಎಂಪಿ ಕೌನ್ಸಿಲ್​ನಲ್ಲಿ ಅನುಮೋದನೆ ನೀಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದ ಬಜೆಟ್​ಗೆ,

ನಗರಾಭಿವೃದ್ಧಿ ಇಲಾಖೆ ಮೇ 22ರಂದು ಅನುಮೋದನೆ ನೀಡಿತ್ತು. 12,958 ಕೋಟಿ ರೂ. ಇದ್ದ ಬಜೆಟ್ ಗಾತ್ರವನ್ನು 11,649 ಕೋಟಿ ರೂ.ಗೆ ಇಳಿಸಲಾಗಿತ್ತು. ಆದರೆ, ಹೀಗೆ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವಾಗ ಬಜೆಟ್​ಗೆ ಅನುಮೋದನೆ ನೀಡಿರುವುದು ನಿಯಮಬಾಹಿರ ಎಂಬುದು ಪ್ರತಿಪಕ್ಷ ಬಿಜೆಪಿ ಅಭಿಪ್ರಾಯ. ಹೀಗಾಗಿಯೇ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ನಿಯಮದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಹೊಸ ಯೋಜನೆಗಳನ್ನು ಘೋಷಿಸಬಾರದು ಮತ್ತು ಜಾರಿಗೊಳಿಸಬಾರದು ಎಂದಿದೆ. ಆದರೆ, ಬಿಬಿಎಂಪಿ ಬಜೆಟ್ ಮಂಡಿಸಿದ್ದು ಚುನಾವಣೆ ಘೋಷಣೆಗೂ ಹಿಂದೆ. ಹೀಗಾಗಿ ಅದಕ್ಕೆ ಅನುಮೋದನೆ ನೀಡಿರುವುದು ಸಮಂಜಸವಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಸಮರ್ಥಿಸಿಕೊಂಡಿದ್ದಾರೆ.
ಕೃಪೆ:ವಿಜಯವಾಣಿ

ಬಜೆಟ್ ಕಡಿತಕ್ಕೆ ಅನುದಾನ ಕತ್ತರಿ
subsidy-scissors-for-budget-cuts