ಸ್ಥಳದಲ್ಲೇ ಕವಿತೆ ರಚಿಸಲು ಪ್ರೇರೇಪಿಸಿ ನಗದು ಬಹುಮಾನ ನೀಡಿದ ಅಧಿಕಾರಿ….

ರಾಮನಗರ ಡಿ.14,2019(www.justkannada.in): ಸಾಹಿತ್ಯಾಸಕ್ತಿ ಮೂಡಿಸಲು ಅಧಿಕಾರಿಯೊಬ್ಬರು ಸಭಿಕರಾಗಿ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಕವಿತೆ ರಚಿಸಲು ಪ್ರೇರೇಪಿಸಿ ವೈಯಕ್ತಿಕವಾಗಿ 7 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರಸಂಶಿಸಿದ ಅಪರೂಪದ ಪ್ರಸಂಗ ನಡೆದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಮನಗರದ ಎಂ.ಎಚ್. ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ವಿವಿಧ ತಾಲ್ಲೂಕುಗಳ ಕವಿಗಳು ಆಗಮಿಸಿದ್ದರು. ಕಾಲೇಜಿನ ಬಿ.ಎಡ್ ವಿದ್ಯಾರ್ಥಿಗಳು ಸಹ ಸಭಿಕರಾಗಿದ್ದರು.

ಕವಿಗೋಷ್ಠಿ ಉದ್ಘಾಟನೆ ಸಂದರ್ಭದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾಗಿರುವ  ಜಿಲ್ಲಾ ವಾರ್ತಾಧಿಕಾರಿ ಎಸ್. ಶಂಕರಪ್ಪ ಅವರು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸಲು ಸ್ಥಳದಲ್ಲಿ ಕಾವ್ಯ ರಚನೆ ಮಾಡುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಬಹುಮಾನ ನೀಡುವುದಾಗಿ ಘೋಷಿಸಿದರು.

ಇದರಿಂದ ಸಭಿಕರಾಗಿ ಆಗಮಿಸಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ಸ್ಥಳದಲ್ಲಿ ಕವಿತೆ ರಚನೆ ಮಾಡಿ ವಾಚನ ಮಾಡಿದರು. ಪ್ರೇರಣೆಗೊಂಡು ಕವಿತೆ ರಚಿಸಿದ 7 ವಿದ್ಯಾರ್ಥಿಗಳಿಗೆ ಎಸ್. ಶಂಕರಪ್ಪ ಅವರು ವೈಯಕ್ತಿಕವಾಗಿ ತಲಾ 500 ರೂ.ಗಳ ನಗದು ಹಾಗೂ ಪ್ರಮಾಣ ಪತ್ರವನ್ನು ಕಾರ್ಯಕ್ರಮದಲ್ಲಿ ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಬಿ.ಎಡ್. ವಿದ್ಯಾರ್ಥಿಗಳಾದ ಸೌಮ್ಯ ಬಿ.ಕೆ., ಪೂಜಾ ಟಿ.ಎಸ್., ಸಂಜಯ್ ಎಂ.ಎಸ್., ಪುನೀತ್ ಎಂ.ವಿ., ವಿನಯ್ ಕುಮಾರ, ಚೈತ್ರ ಎ.ಎಸ್. ಹಾಗೂ ವಿನಾಯಕ ಅವರು ಕವನ ರಚಿಸಿ ವಾಚಿಸಿದರು. ಬಹುಮಾನ ಹಾಗೂ ಪ್ರಮಾಣ ಪತ್ರ ಸ್ವೀಕರಿಸಿದ ಈ ವಿದ್ಯಾರ್ಥಿಗಳು ಸಾಹಿತ್ಯ ರಚನೆಗೆ ಮುಂದಾಗುವುದಾಗಿ ವೇದಿಕೆಯಲ್ಲೇ ತಿಳಿಸಿದರು.

ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ಚಂದ್ರಶೇಖರ್, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿಂ.ಲಿA. ನಾಗರಾಜು ಅವರು ವಿದ್ಯಾರ್ಥಿಗಳನ್ನು ಸಾಹಿತ್ಯದೆಡೆಗೆ ಆಸಕ್ತಿ ತೋರುವಂತೆ ಮಾಡಿದ ಎಸ್. ಶಂಕರಪ್ಪ ಅವರ ಕಾರ್ಯವನ್ನು ಕುರಿತು ಶ್ಲಾಘಿಸಿದರು.

Key words: ramanagar- officer-prize -inspired –poetry- on the spot