ಗ್ರಾ.ಪಂಗಳಲ್ಲಿ ಟಿವಿ ಅಳವಡಿಸುವ ಮೂಲಕ ಆನ್ ಲೈನ್ ಶಾಲಾ ಕಲಿಕೆಯಲ್ಲಿರುವ ಅಂತರ ನೀಗಿಸಲು ಸರ್ಕಾರದಿಂದ ಯೋಜನೆ.

ಬೆಂಗಳೂರು, ಜುಲೈ 13,2021  (www.justkannada.in): ಇಂಟೆರ್‌ ನೆಟ್ ಸಂಪರ್ಕ ಅಲಭ್ಯತೆ, ಉಪಕರಣಗಳ ಕೊರತೆ ಹಾಗೂ ನೆಟ್‌ ವರ್ಕ್ ಸಮಸ್ಯೆಗಳಿಂದಾಗಿ ಆನ್‌ ಲೈನ್ ತರಗತಿಗಳಿಂದ ಶಾಲಾ ವಿದ್ಯಾರ್ಥಿಗಳು ವಂಚಿತರಾಗುವ ಸಮಸ್ಯೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಗ್ರಾಮಗಳಲ್ಲಿ ಆನ್‌ಲೈನ್ ಶಿಕ್ಷಣವನ್ನು ಕಲ್ಪಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿರುವ ಸ್ಥಳ ಹಾಗೂ ಮೂಲಭೂತಸೌಕರ್ಯವನ್ನು ಬಳಸಿಕೊಳ್ಳಲು ಚಿಂತಿಸಿದೆ.jk

ಈ ಕುರಿತು ಮಾತನಾಡಿರುವ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, “ಯಾವುದೇ ಉಪಕರಣ ಹೊಂದಿಲ್ಲದಿರುವ ಕಾರಣದಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ, ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 5,766  ಗ್ರಾಮ ಪಂಚಾಯಿತಿಗಳಲ್ಲಿ ಟಿವಿಗಳನ್ನು ಅಳವಡಿಸಿ ಆ ಮೂಲಕ ಶಿಕ್ಷಣ ಒದಗಿಸಲು ಯೋಜಿಸುತ್ತಿದ್ದೇವೆ,” ಎಂದು ತಿಳಿಸಿದರು.

ಪ್ರೊ. ದೊರೆಸ್ವಾಮಿ, ರಾಜ್ಯ ಸರ್ಕಾರದ ಶಿಕ್ಷಣ ಸಲಹಾಗಾರ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಲಹಾಗಾರ ಪ್ರಶಾಂತ್ ಪ್ರಕಾಶ್ ಅವರ ಭೇಟಿಯ ನಂತರ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು, “ರಾಜ್ಯದಾದ್ಯಂತ ಮಳೆಗಾಲದಿಂದಾಗಿಯೂ ಸಹ ಅನೇಕ ವಿದ್ಯಾರ್ಥಿಗಳು, ಅದರಲ್ಲಿಯೂ ವಿಶೇಷವಾಗಿ ಮಲೆನಾಡು ಭಾಗಗಳಲ್ಲಿ, ನೆಟ್‌ ವರ್ಕ್ ಸಮಸ್ಯೆ ತುಂಬಾ ಇರುವ ಕಾರಣಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಂದ ವಂಚಿತರಾಗಿರುವುದು ತಿಳಿದು ಬಂದಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಎಂದಿನಂತೆ ಆಫ್‌ಲೈನ್ ತರಗತಿಗಳನ್ನು ಆರಂಭಿಸಲು ವಿಳಂಬವಾಗುತ್ತಿದೆ. ಹಾಗಾಗಿ ಇನ್ನೂ ಸ್ವಲ್ಪ ಕಾಲ ಆನ್‌ಲೈನ್ ತರಗತಿಗಳನ್ನೇ ಅವಲಂಭಿಸವುದು ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ ವರ್ಕ್ ಅನ್ನು ಬಲಪಡಿಸಬೇಕಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಕಲಿಕೆ ಖಾತ್ರಿಪಡಿಸುವುದನ್ನು ಮುಂದುವರೆಸಬಹುದು,” ಎಂದು ತಿಳಿಸಿದ್ದಾರೆ.

ಇದಕ್ಕೆ ಮುಂಚೆ ಸಚಿವ ಸುರೇಶ್ ಕುಮಾರ್ ಅವರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನೂ ಭೇಟಿ ಮಾಡಿದರು. ಶಿಕ್ಷಣ ಸಚಿವರ ಕಚೇರಿಯ ಪ್ರಕಾರ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಸೂಚನೆಯ ಮೇರೆಗೆ ರಾಜ್ಯದಾದ್ಯಂತ ಮೊಬೈಲ್ ನೆಟ್‌ವರ್ಕ್ ಅನ್ನು ಬಲಪಡಿಸುವ ಕುರಿತಂತೆ ಮೊಬೈಲ್ ಸೇವೆ ಒದಗಿಸುವ ಕಂಪನಿಗಳವರೊಂದಿಗೆ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಚರ್ಚಿಸಿದ್ದು ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿರುವುದಾಗಿ ತಿಳಿಸಿದ್ದಾರೆ, ಎಂದು ಹೇಳಿದರು.

ಜುಲೈ 19 ಹಾಗೂ 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರದ ತೀರ್ಮಾನವನ್ನು ಮಾನ್ಯ ಉಚ್ಛ ನ್ಯಾಯಾಲಯ ಎತ್ತಿಹಿಡಿದಿರುವುದನ್ನು ಸಚಿವ ಸುರೇಶ್ ಕುಮಾರ್ ಅವರು ಈ ಸಂದರ್ಭಧಲ್ಲಿ ಸ್ವಾಗತಿಸಿದರು. “ಉಚ್ಛ ನ್ಯಾಯಾಲಯದ ಈ ತೀರ್ಪು ವಿದ್ಯಾರ್ಥಿಗಳಲ್ಲಿ ಮತ್ತು ಪರೀಕ್ಷೆಗಳನ್ನು ನಡೆಸಲು ಸರ್ಕಾರದ ವಿಶ್ವಾಸವನ್ನು ಹೆಚ್ಚಿಸಿದೆ,” ಎಂದರು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Plans – government – bridge – gap – online school- learning – TV-minister –suresh kumar