ರಾಜ್ಯ ಬಿಜೆಪಿಯಲ್ಲಿರುವ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು- ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಸಮಾಧಾನ.

ದಾವಣಗೆರೆ, ಅಕ್ಟೋಬರ್ 24.2023(www.justkannada.in):  ವಿಧಾನಸಭೆ ಚುನಾವಣೆ ಬಳಿ ಪದೇ ಪದೇ ಸ್ವಪಕ್ಷದ ನಾಯಕರ ವಿರುದ್ದವೇ ಬೇಸರ ಹೊರಹಾಕುತ್ತಿದ್ದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಇದೀಗ ಮತ್ತೆ ತಮ್ಮ ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ, ರಾಜ್ಯ ಬಿಜೆಪಿಯಲ್ಲಿರುವ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು.  ನಾವು ಮಾತನಾಡಿದರೆ ಪಕ್ಷವಿರೋಧಿ, ಅವರು ಮಾತನಾಡಿದ್ರೆ ಪಕ್ಷ ಸಂಘಟನೆ. ಎಂಎಲ್​ಸಿ ಹಾಗೂ ರಾಜ್ಯಸಭಾ ಸ್ಥಾನ ಅವರು ಹೇಳಿದವರಿಗೆ ನೀಡ್ತಾರೆ. ಅವರ ಒಳ ಹೊಡೆತಗಳು ಹೇಳತೀರದು ಎಂದು ಪರೋಕ್ಷವಾಗಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್  ಅಸಮಾಧಾನ ಹೊರಹಾಕಿದರು.

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯದಲ್ಲಿ ಅವರಂಥ ಜಾತ್ಯತೀತ ಹಾಗೂ ಸಮರ್ಥ ನಾಯಕ ಬೇಕು. ವಿಜಯದಶಮಿ ದಿನ ಒಂದು ಮಾತು ಹೇಳ್ತಿದ್ದೇನೆ, ರಾಜ್ಯದಲ್ಲಿ ಬಿಎಸ್​ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಸೂಕ್ತ. ಬಿಎಸ್​ವೈ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಹಿಂದೆ ನಿಲ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.

ನಾನು ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಭಾರತೀಯ ಜನತಾ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಹೋಗಬೇಕು. ಮೊನ್ನೆ ಚುನಾವಣೆ ವೇಳೆ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಹಳಬರ ಕಾಲು ಏನಾದರೂ ಬಿದ್ದು ಹೋಗಿದ್ದವಾ? ಚುನಾವಣೆ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಬಿಎಸ್​ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡೋದು ಬೇಡ ಅಂತ ಒತ್ತಡ ಹಾಕಿದ್ದೆವು. ಕೆಲ ನಾಯಕರು ಯಡಿಯೂರಪ್ಪರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಕಿಡಿಕಾರಿದರು.

Key words: Dictatorship – state- BJP -should end- Former MLA -MP Renukacharya