ಮನಿ ಆರ್ಡರ್ ಹಣವನ್ನು ತಲುಪಿಸುವಲ್ಲಿ ನ್ಯೂನತೆ ಎಸಗಿದ ಅಂಚೆ ಕಚೇರಿಗೆ ಬಿತ್ತು ದಂಡ…

ಮೈಸೂರು ಸೆ.18,2019(www.justkannada.in):  ಮೊಮ್ಮಗಳಿಗೆ ಇ ಮನಿ ಆರ್ಡರ್ ಮೂಲಕ  ಕಳಿಸಿದ ಹಣವನ್ನು ತಲುಪಿಸದೆ ಸೇವಾ ನ್ಯೂನತೆ ಎಸಗಿದ ಅಂಚೆ ಇಲಾಖೆಗೆ ಮೈಸೂರಿನ ಜಿಲ್ಲಾ ಗ್ರಾಹಕರ ವೇದಿಕೆಯು ರೂ.8000 ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ವಿವರ…

ಮೈಸೂರಿನ ವಿದ್ಯಾರಣ್ಯಪುರಂ ಬಡಾವಣೆಯ ಸುಜಯ ಫಾರಂ ರಸ್ತೆಯ ಬೆಸ್ತರ ಬ್ಲಾಕ್ ನಿವಾಸಿ ಭೈರಯ್ಯನವರು ಬೆಂಗಳೂರಿನ ಕೆಂಗೇರಿ ಅಂಚೆಪಾಳ್ಯದಲ್ಲಿರು ಯು ಎಸ್ ಎ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಮೊಮ್ಮಗಳಿಗೆ ದಿನಾಂಕ 18.07.2018ರಂದು 500 ರೂಪಾಯಿಗಳನ್ನು ಎಲೆಕ್ಟ್ರಾನಿಕ್ ಮನಿ ಆರ್ಡರ್ ರೂಪದಲ್ಲಿ ಮೈಸೂರಿನ ಚಾಮುಂಡಿ ಪುರಂ ಪೋಸ್ಟ್ ಆಫೀಸ್ ಮೂಲಕ ಕಳಿಸಿದ್ದರು.

ತನ್ನ ಮೊಮ್ಮಗಳಿಗೆ ಹಣ ಕಳಿಸಿ 12 ದಿನ ಕಳೆದರೂ ಸಹ ಪಾವತಿಯಾಗದ ಕಾರಣ ಭೈರಯ್ಯನವರು 30.07.2018ರಂದು ಅಂಚೆ ಇಲಾಖೆಗೆ ದೂರು ನೀಡಿದರು. ಈ ದೂರಿಗೆ ಅಂಚೆ ಇಲಾಖೆಯು ಸ್ಪಂದಿಸದೇ ಉಡಾಫೆಯ ಉತ್ತರ ನೀಡಿದುದರಿಂದ ಬೇಸತ್ತ ಭೈರಯ್ಯನವರು 14.08.2018 ರಂದು ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ದೂರು ನೀಡಿ ಮನಿ ಆರ್ಡರ್ ಮೂಲಕ ತಾನು ಕಳಿಸಿದ ರೂ.500 ಮೊತ್ತದ ಜೊತೆಗೆ ರೂ.20.000 ಪರಿಹಾರವನ್ನು ಅಂಚೆ ಇಲಾಖೆಯಿಂದ ದೊರಕಿಸಿಕೊಡಬೇಕೆಂದು ಕೋರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು ಅಂಚೆ ಇಲಾಖೆಯು ಸೇವಾ ನ್ಯೂನತೆ ಎಸಗಿರುವುದು ಸಾಬೀತಾಗಿದೆಯೆಂದು ತೀರ್ಪು ನೀಡಿ ಭೈರಯ್ಯನವರಿಗೆ ರೂ.5000 ಪರಿಹಾರವನ್ನೂ,ಗ್ರಾಹಕರಿಗೆ ಮಾನಸಿಕ ಕಿರುಕುಳ ಹಾಗೂ ತೊಂದರೆ ನೀಡಿದುದಕ್ಕಾಗಿ ರೂ.1000 ಹಾಗೂ ಪ್ರಕರಣದ ಖರ್ಚು-ವೆಚ್ಚದ ಬಾಬ್ತು ರೂ.2000 ಗಳನ್ನು 60 ದಿನಗಳೊಳಗಾಗಿ ಪಾವತಿಸುವಂತೆ ಆದೇಶಿಸಿದೆ. ಇದಕ್ಕೆ ತಪ್ಪಿದಲ್ಲಿ ರೂ.8000 ಗಳನ್ನು ವಾರ್ಷಿಕ 10% ಬಡ್ಡಿಯೊಂದಿಗೆ ಪಾವತಿಸ ಬೇಕಾಗುತ್ತದೆಂದೂ ಆದೇಶಿದೆ.

ಅಂಚೆ ಇಲಾಖೆಯು ಈ ಪರಿಹಾರದ ಮೊತ್ತವನ್ನು ಪಾವತಿಸಲು ವಿಫಲವಾದರೆ ಮೈಸೂರು ವಿಭಾಗದ ಅಂಚೆ ಇಲಾಖೆಯ ಸೀನಿಯರ್ ಸೂಪರಿಂಟೆಂಡೆಂಟ್  ಹಾಗೂ ಚಾಮುಂಡಿ ಪುರಂ ಅಂಚೆ ಕಚೇರಿಯ ಸಬ್ ಪೋಸ್ಟ್ ಮಾಸ್ಟರ್ ಅವರು ಸೆರೆವಾಸ ಅನುಭವಿಸಬೇಕಾಗುತ್ತದೆಂದು ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಯು ಆದೇಶ ಹೊರಡಿಸಿದೆ. ದೂರುದಾರರಾದ ಭೈರಯ್ಯನವರ ಪರವಾಗಿ ವಕೀಲ ಪ್ರದೀಪ್.ಡಿ ವಕಾಲತ್ ವಹಿಸಿ ವಾದಿಸಿದ್ದರು.

Key words: penalty- post office – deficient -delivering – order –money-mysore