ಯಾವುದೇ ಕಾರಣಕ್ಕೂ ಮದ್ಯ ಮಾರಾಟ ಅವಕಾಶ ಇಲ್ಲ‌: ಸಚಿವ ರಮೇಶ್ ಜಾರಕಿಹೊಳಿ‌

ಬೆಳಗಾವಿ, ಏಪ್ರಿಲ್ 19, 2020 (www.justkannada.in): ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

*ಕೋವಿಡ್ – 19 ನಿಯಂತ್ರಣ* ಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಬೆಳಗಾವಿ ನಗರದ ಪ್ರವಾಸಿಮಂದಿರದಲ್ಲಿ ಶನಿವಾರ (ಏ.೧೮) *ಜಿಲ್ಲೆಯ ಉನ್ನತ ಅಧಿಕಾರಿಗಳ ಜೊತೆಗೆ ನಡೆದ ಸಭೆ* ಯಲ್ಲಿ ಮಾತನಾಡಿದ ಸಚಿವರು ಸದ್ಯಕ್ಕೆ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿರುವುದರಿಂದ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಆದ್ದರಿಂದ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬರುವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ಆರಂಭಿಸಬಾರದು ಎಂದರು.

ಯಾವುದೇ ಒತ್ತಡಕ್ಕೂ ಮಣಿಯದೇ ಸೂಕ್ತ ವ್ಯವಸ್ಥೆ ಇರುವ ಹೋಟೆಲ್ ಗಳನ್ನು ಮಾತ್ರ ಕ್ವಾರಂಟೈನ್ ಗೆ ಪಡೆದುಕೊಳ್ಳಬೇಕು ಎಂದು ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಲಾಕ್ ಡೌನ್ ನಿಂದಾಗಿ ಜನರ ಹಣಕಾಸಿನ ಪರಿಸ್ಥಿತಿ ವಿಷಮವಾಗಿದ್ದು, ಸಹಕಾರಿ ಬ್ಯಾಂಕುಗಳನ್ನು ಪುನಃ ತೆರೆದು ಗ್ರಾಹಕರಿಗೆ ಸೇವೆ ಒದಗಿಸುವ ಬಗ್ಗೆ ಕೂಡಲೇ ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಕೊರೋನಾ ‌ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಗಳನ್ನು ಕಡ್ಡಾಯವಾಗಿ ನೀಡಬೇಕು. ಅದಕ್ಕಾಗಿ ಹೆಚ್ಚುವರಿಯಾಗಿ ಪಿಪಿಇ ಕಿಟ್ ಗಳನ್ನು ಖರೀದಿಸಲು ಕ್ರಮವಹಿಸಬೇಕು ಮತ್ತು ಜಿಲ್ಲೆಗೆ ಇನ್ನೂ ಹೆಚ್ಚಿನ ವೆಂಟಿಲೇಟರ್ ಗಳನ್ನು ಒದಗಿಸಬೇಕು ಎಂದು *ಜಲಸಂಪನ್ಮೂಲ ಸಚಿವರು*, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿಕೊಂಡರು.