ಬಡವರು, ವೃತ್ತಿ ಆಧಾರಿತ ಕಾರ್ಮಿಕರಿಗೆ ತಲಾ ಹತ್ತು ಸಾವಿರ ರೂ. ಧನ ಸಹಾಯ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹ

ಬೆಂಗಳೂರು, ಏಪ್ರಿಲ್ 19, 2020 (www.justkannada.in):

ಬಡ ಕಾರ್ಮಿಕರು, ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು ಇಂತಿದೆ….

ಕುಂಬಾರರು, ನೇಕಾರರು, ಚಮ್ಮಾರರು, ಬಡಗಿಗಳು, ವಿಶ್ವಕರ್ಮರು, ಬುಡಕಟ್ಟು ಜನಾಂಗದವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಆಟೋ ರಿಕ್ಷಾ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, ಮೆಕಾನಿಕ್ ಗಳು, ಹೋಟೆಲ್ ಸಪ್ಲೈಯರ್, ಹೋಟೆಲ್ ಕ್ಲೀನರ್, ಬೀದಿ ಬದಿ ವ್ಯಾಪಾರಿ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರು, ಹೂವು, ಹಣ್ಣು, ಸೊಪ್ಪು ಮಾರುವವರು, ಹೂವು ಕಟ್ಟುವವರು, ಪಾನಿಪುರಿ ವ್ಯಾಪಾರಿಗಳು, ಬೀದಿ ಬದಿ ಇಡ್ಲಿ, ದೋಸೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದವರು, ಕೆತ್ತನೆ, ಕುಸರಿ ಕೆಲಸ ಮಾಡುವವರು, ಕಮ್ಮಾರರು, ಕಲ್ಲು ಒಡೆಯುವವರು, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಬೀಡಿ ಕಟ್ಟುವವರು, ಲಾರಿಗೆ ಸಾಮಾನು ಲೋಡ್ ಮಾಡುವವರು, ಹಳ್ಳಿಕಡೆ ಏರ್ ಪಿನ್, ಗೊಂಬೆ ಮಾರುವವರು, ಗುಜರಿ ವ್ಯಾಪಾರಿಗಳು ಕೂಡ ಈ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಲಿದ್ದು, ಈ ಎಲ್ಲ ವರ್ಗದವರ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಆದರೆ ಈವರೆಗೂ ಪ್ರಧಾನಿ ಮೋದಿ ಅವರಾಗಲಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಈ ವರ್ಗದ ಬಗ್ಗೆ ಒಂದೇ ಒಂದು ಮಾತು ಆಡದಿರುವುದು, ಅವರ ನೆರವಿಗೆ ಬಾರದಿರುವುದು ತಮಗೆ ಅತೀವ ನೋವು ತಂದಿದೆ. ನಾಳೆಯೇ ಮುಖ್ಯಮಂತ್ರಿಗಳ ಬಳಿಗೆ ಕಾಂಗ್ರೆಸ್ ನಿಯೋಗ ತೆಗೆದುಕೊಂಡು ಹೋಗಿ ಅವರ ಪರವಾಗಿ ಖುದ್ದು ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:

ಕೊರೊನಾ ಪರಿಸ್ಥಿತಿ ನಿರ್ವಹಣೆ, ಅಗತ್ಯ ಇರವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಘೋಷಿಸಿದ ಪರಿಹಾರ ಸೂಕ್ತ ರೀತಿಯಲ್ಲಿ ಸಿಗದೆ ಜನ ಸಂಕಟಪಡುತ್ತಿರುವುದನ್ನು ನೋಡಲಾಗದೆ ಬಹಳ ಬೇಸರ ಹಾಗೂ ನೋವಿನಿಂದ ಈ ಪತ್ರಿಕಾಗೋಷ್ಠಿ ಕರೆದಿದ್ದೇನೆ.

ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಎಷ್ಟೆಲ್ಲ ಪರಿಪರಿಯಾಗಿ ಹೇಳಿಕೊಂಡರೂ ನಮ್ಮ ಸದ್ಭಾವನೆಯನ್ನು ಎರಡೂ ಸರಕಾರಗಳು ಅರ್ಥ ಮಾಡಿಕೊಳ್ಳಲು ಹೋಗಲಿಲ್ಲ. ನಾನು ಈ ಸಮಯದಲ್ಲಿ ಮಾತನಾಡಬಾರದು, ಒಂದು ತಿಂಗಳು ಆಗಲಿ ಏನು ಮಾಡುತ್ತಾರೆ ನೋಡೋಣ ಅಂತಾ ಸರ್ಕಾರದ ನಿಲುವುಗಳನ್ನು ಗಮನಿಸುತ್ತಿದ್ದೆವು.

ನಮ್ಮ ಸಂವಿಧಾನದಲ್ಲಿ ಸರ್ಕಾರಗಳು ಪ್ರತಿಯೊಂದು ವರ್ಗದ ಜನರ ರಕ್ಷಣೆ ಮಾಡಬೇಕು ಎಂದು ಹೇಳಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ವೃತ್ತಿಪರ ವರ್ಗದ ಕಾರ್ಮಿಕರ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಈ ವರ್ಗದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ.

ಕೆತ್ತನೆ ಕೆಲಸ ಮಾಡುವವರು, ಕುಸರಿ ಕೆಲಸ ಮಾಡುವವರು, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಬೀಡಿ ಕಟ್ಟುವವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಮೆಕಾನಿಕ್ ಗಳು, ಹೋಟೆಲ್ ಸಪ್ಲೈಯರ್, ಹೋಟೆಲ್ ಕ್ಲೀನರ್, ಮದುವೆ ಮನೇಲಿ ಕೆಲಸ ಮಾಡುವವರು, ಭಟ್ಟರು, ಪೂಜಾರಿಗಳು, ಗುಜರಿ ವ್ಯಾಪಾರಿಗಳು ಸೇರಿದಂತೆ ರಾಜ್ಯದಲ್ಲಿ 1.63 ಕೋಟಿ ಅಸಂಘಟಿತ ವಲಯದ ವೃತ್ತಿಕೌಶಲ್ಯದವರು ಕೆಲಸ ಮಾಡ್ತಾ ಇದ್ದಾರೆ. ಇವರ ಬಗ್ಗೆ ನೀವಾಗಲಿ, ಪ್ರೈಮ್ ಮಿನಿಸ್ಟರ್ ಆಗಲಿ ಒಂದ್ಸಾರಿನಾದ್ರೂ ಯೋಚನೆ ಮಾಡಿದ್ದೀರಾ ಯಡಿಯೂರಪ್ಪನವರೇ? ಒಬ್ಬರಾದರೂ ಅವರ ಬಗ್ಗೆ ಬಾಯಿ ಬಿಟ್ಟಿದ್ದೀರಾ. ಅವರಿಗೆ ಕೆಲಸ ಇಲ್ಲ, ಆಚೆಗೆ ಹೋಗೋವಂಗಿಲ್ಲ. ಸರಕಾರದವರು ಒಂದು ಪೈಸೆ ಪರಿಹಾರನೂ ಕೊಟ್ಟಿಲ್ಲ. ಅವರ ಬದುಕೇನು, ಅವರ ಜೀವನ ಏನು, ಅವರಿಗೆ ಆದಾಯ ಎಲ್ಲಿಂದ ಬರಬೇಕು?

ನೀವಾಗಲಿ, ನಿಮ್ಮ ಮಂತ್ರಿಗಳಾಗಲಿ, ಇಲ್ಲ ಅಧಿಕಾರಿಗಳಾಗಲಿ ಇಂಥ ವೃತ್ತಿಪರರು ಎಷ್ಟು ಜನ ಅವ್ರೆ, ಅವರೆಂಗೆ ಜೀವನ ಮಾಡ್ತಾ ಅವ್ರೆ, ಅವರೇನು ಬದುಕಿದ್ದಾರಾ? ಏನಾಗಿದ್ದಾರೆ ಅಂತ ವಿಚಾರಿಸಿದ್ದೀರಾ?

ನಾನು ಈಗ ಅವರ ಪರ ಮನವಿ ಮಾಡುತ್ತಾ ಇದ್ದೀನಿ. ಕೊಡಿ ಅವರಿಗೆಲ್ಲ ತಿಂಗಳಿಗೆ 10,000 ರುಪಾಯಿ ಪರಿಹಾರಾನಾ. ಕೊರೊನಾ ಮುಗಿಯುವವರೆಗೆ. ನೀವು ಡೆವಲಪ್ ಮೆಂಟ್ ಪ್ರೋಗ್ರಾಮ್ ನಿಲ್ಸಿ. ಮತ್ತೆ ಸರ್ವಪಕ್ಷ ಸಭೆ ಕರೆಯಿರಿ. ಇಲ್ಲವೇ ವಿಧಾನಸಭೆ ಅಧಿವೇಶನ ಕರೆಯಿರಿ. ನೀವು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ನಾವು ಕೈ ಎತ್ತಿ ಸಹಕಾರ ನೀಡುತ್ತೇವೆ. ನಿಮ್ಮ ಬಳಿ ಸರ್ಕಾರ ಇದೆ. ಯಾರು, ಯಾರು ಈ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಶಿಕ್ಷಕರು, ಪಂಚಾಯ್ತಿ ಸಿಬ್ಬಂದಿಗಳ ಮೂಲಕ ಮಾಹಿತಿ ಕಲೆ ಹಾಕಿ, ಅವರ ನೆರವಿಗೆ ಧಾವಿಸಿ. ಈ ವರ್ಗದವರು ದೇಶದ ನಾಗರೀಕರಲ್ಲವೇ? ಭಾರತದ ಬೆಳವಣಿಗೆಯಲ್ಲಿ ಇವರ ಪಾತ್ರ ಇಲ್ಲವೇ? ಇವರೇ ನಮ್ಮ ದೇಶಕ್ಕೆ ಬಲ ತುಂಬುತ್ತಿದರುವವರು. ಅವರ ಬಗ್ಗೆ ನಿಮಗೆ ಕಾಳಜಿ ಇಲ್ಲ ಎಂದರೆ ಏನೆನ್ನಬೇಕು?

ಈ ವಿಚಾರವಾಗಿ ನಾವು ರಾಜಕೀಯ ಮಾಡುತ್ತಲ್ಲ. ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಇಂತಹ ಅಸಂಘಟಿತ ಕೂಲಿ ಕಾರ್ಮಿಕರ ಧ್ವನಿಯಾಗಿ ನಾನು ಇಂದು ಧ್ವನಿ ಎತ್ತದಿದ್ದರೆ ಈ ಸ್ಥಾನದಲ್ಲಿ ಕೂರಲು ನನಗೆ ಅರ್ಹತೆ ಇರುವುದಿಲ್ಲ. ನೀವು ಈ ವರ್ಗದವರನ್ನು ಇವರನ್ನು ನರೇಗಾ ಯೋಜನೆಯಡಿ ಸೇರಿಸುತ್ತೀರಾ ಅಥವಾ ಅಸಂಘಟಿತ ವಲಯ ಕಾರ್ಮಿಕರಿಗಾಗಿಯೇ ವಿಶೇಷ ಯೋಜನೆ ಮಾಡುತ್ತೀರೋ ಅದು ನಿಮಗೆ ಬಿಟ್ಟದ್ದು. ಒಟ್ಟಿನಲ್ಲಿ ಅವರಿಗೆ ಸಹಾಯ ಆಗಬೇಕು ಅಷ್ಟೇ.

ಇನ್ನೂ ಸರ್ಕಾರ ಬದುಕಿದೆ ಅಂದುಕೊಂಡಿದ್ದೇನೆ. ಯಾವ ರೈತನಿಗೂ ಸಂಕಷ್ಟ ಅನುಭವಿಸಲು ಬಿಡಲ್ಲ. ಚೈನ್ ಸಿಸ್ಟಮ್ ಮಾಡುತ್ತೀನಿ ಅಂತೆಲ್ಲಾ ಸರ್ಕಾರ ಹೇಳಿತ್ತು. ಹಣ್ಣು, ತರಕಾರಿ, ಸೊಪ್ಪು ಜಮಿನಿನಲ್ಲೇ ಹಾಳಾಗುತ್ತಿದೆ. ದಯವಿಟ್ಟು ಹೋಗಿ ರಕ್ಷಿಸಿ ಎಂದು ಕೇಳಿಕೊಂಡೆ. ಆದರೆ 12ನೇ ತಾರೀಖಿನವರೆಗೂ ಯಾವುದೇ ನೋಟಿಫಿಕೇಷನ್ ಹೊರಡಿಸಲಿಲ್ಲ. ಇವತ್ತಿನವರೆಗೂ ತಳಮಟ್ಟದಲ್ಲಿ ತೋಟಗಾರಿಕೆ ಅಧಿಕಾರಿಗಳು ಒಂದು ಅಥವಾ ಎರಡು ಕಡೆ ಮಾತ್ರ ಭೇಟಿ ಕೊಟ್ಟಿರುವುದು ಬಿಟ್ಟರೆ ಬೇರೇನೂ ಆಗಿಲ್ಲ. ನಾನು ಭತ್ತ, ರಾಗಿ, ಕಬ್ಬಿನ ಬಗ್ಗೆ ಮಾತನಾಡಲ್ಲ. ಅವುಗಳು ಒಂದು ತಿಂಗಳಾದರೂ ತಳ್ಳುವ ಅವಕಾಶವಿದೆ. ಆದರೆ ಹಣ್ಣು, ತರಕಾರಿ ಮತ್ತು ಸೊಪ್ಪು ಒಂದು ವಾರ ತಡವಾದರೂ ಕೊಳೆತು ಹೋಗುತ್ತದೆ.

ಹೀಗಾಗಿ ನಾನು ನಮ್ಮ ಶಾಸಕರಿಗೆ ನಾಶವಾಗುತ್ತಿರುವ ತರಕಾರಿ, ಹಣ್ಣುಗಳನ್ನು ಖರೀದಿಸಿ, ಬಡವರಿಗೆ ಹಂಚಿ. ಆ ಮೂಲಕ ರೈತರ ನೆರವಿಗೆ ಬನ್ನಿ ಅಂತಾ ಕರೆ ನೀಡಿದೆ. ನಮ್ಮ ದಿನೇಶ್ ಗುಂಡೂರಾಯರು, ಕೃಷ್ಣಭೈರೇಗೌಡರು ಹಾಗೂ ಡಿ.ಕೆ. ಸುರೇಶ್ ಸೇರಿದಂತೆ ನಮ್ಮ ಅನೇಕ ಶಾಸಕರು ಜಮೀನಿಗೆ ಹೋಗಿ ರೈತರಿಂದ ಬೆಳೆ ಖರೀದಿಸುತ್ತಿದ್ದಾರೆ. ತೋಟಗಾರಿಕ ಸಚಿವರ ಕ್ಷೇತ್ರಕ್ಕೆ ಹೋಗಿ ತರಕಾರಿ ಖರೀದಿಸಿದ್ದೇವೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ವ್ಯಾಪಾರ ಮಾಡಿದ್ದೇವೆ.

ನಾನು ಕಿವಿಲಿ ಕೇಳಿ, ಸಾಕ್ಷಿ ಇಲ್ಲದೇ ಮಾತನಾಡಲ್ಲ. ದೇಶದ ಕಣ್ಣು ತೆರೆಯುತ್ತಿರುವ ಮಾಧ್ಯಮಗಳು ಮಾಡಿರುವ ವರದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನೋಡಿ ನಿಂಬೆಹಣ್ಣು, ಮಾವು, ತರಕಾರಿ, ಬಾಳೆಹಣ್ಣು, ಹೂವ ಸೇರಿದಂತೆ ಎಲ್ಲವೂ ಹೊಲದಲ್ಲೇ ಗೊಬ್ಬರವಾಗುತ್ತಿದೆ ಅಂತಾ ಮಾಧ್ಯಮಗಳೇ ಹೇಳುತ್ತಿವೆ. ನಾನು ಇದನ್ನು ಹೇಳುತ್ತಿಲ್ಲ. ನಾವು ಹೇಳಿದರೆ ವಿರೋಧ ಪಕ್ಷ ಟೀಕೆ ಮಾಡುತ್ತಿದೆ ಅಂತೀರಾ. ಮಾಧ್ಯಮಗಳು ಮಾಡಿರುವ ವರದಿಗಳನ್ನು ನೋಡಿ. ಸರ್ಕಾರದ ಘೋಷಣೆ ಶೇ.90 ರಷ್ಟು ಕಾರ್ಮಿಕರಿಗೆ ಸಿಕ್ಕಿಲ್ಲ, ಸಿಗುವುದಿಲ್ಲ ಅಂತಾ ಮಾಧ್ಯಮ ವರದಿ ಹೇಳುತ್ತಿದೆ. ಸರ್ಕಾರದ ಭರವಸೆ ಬಾಯಿ ಮಾತಿಗಷ್ಟೇ ಉಳಿದಿದೆ. ಬಡವರಿಗೆ ಆಹಾರ ಧಾನ್ಯ ತಲುಪಿಲ್ಲ, ಪಡಿತರದಾರರ ಸಮಸ್ಯೆ ಸೇರಿ ಅನೇಕ ಸಂಕಷ್ಟಗಳ ವರದಿಗಳು ಮಾಧ್ಯಮದಲ್ಲಿ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಆ ದೇವರೇ ಕಾಪಾಡಬೇಕು.

ಹೀಗಾಗಿ ಈ ರೈತರಿಗೆ ಪರಿಹಾರ ನೀಡಿ. ಇಂದೇ ಹಣ ನೀಡಿ ಎಂದು ಹೇಳುತ್ತಿಲ್ಲ. ನಾಲ್ಕು ದಿನ ತಡವಾಗಿ ನೀಡಿ. ಆದರೆ ತೋಟಗಳಿಗೆ ಹೋಗಿ ವಿಡಿಯೋ ಮಾಡಿ, ಸಮೀಕ್ಷೆ ನಡೆಸಿ ದಾಖಲು ಮಾಡಿಕೊಳ್ಳಿ. ಇದರಲ್ಲಿ ಪಾರದರ್ಶಕತೆ ಬೇಕು. ಯಾವುದೇ ರೈತ ರಾತ್ರೋರಾತ್ರಿ ಬೆಳೆ ತಂದು ಮೋಸ ಮಾಡುವುದಿಲ್ಲ. ಅದು ಅವನಿಗೆ ಗೊತ್ತಿಲ್ಲ. ಆತನನ್ನು ಕಾಪಾಡಿ. ನಮ್ಮ ಕೃಷಿ ಸಚಿವರು ಸಮಸ್ಯೆ ಗಮನಕ್ಕೆ ತನ್ನಿ ಅಂತಾರೆ. ಯಾವ ನಂಬರ್ ನೀಡಿದ್ದೀರಿ ಸ್ವಾಮಿ, ಸಮಸ್ಯೆನಾ ನಿಮ್ಮ ಮುಂದೆ ತಂದಿಡಲು. ಈ ಹೊತ್ತಲ್ಲಿ ನೀವು ಅವರ ಬಳಿ ಹೋಗಿ ಸಮಸ್ಯೆ ಆಲಿಸಬೇಕು. ಅವರು ನಿಮ್ಮ ಬಳಿ ಬರಲು ಆಗುತ್ತಾ?

ಈ ಪರಿಸ್ಥಿತಿಯಲ್ಲಿ ರೈತ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನೀವು ಈವರೆಗೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ನಾನು ನಿಮ್ಮನ್ನು ದೂಷಿಸುತ್ತಿಲ್ಲ. ನಿಮ್ಮ ಕಣ್ಣು, ಕಿವಿ ತೆಗಿರಿ. ನಿಮ್ಮ ಸರ್ಕಾರ ರಸ್ತೆಯಲ್ಲಿ ಇರಬೇಕು. ತೋಟದಲ್ಲಿ ಇರಬೇಕು.

ಇನ್ನು ಶಿಕ್ಷಣ ಕ್ಷೇತ್ರ. ಸಚಿವ ಸುರೇಶ್ ಕುಮಾರ್ ಅವರು ಪ್ರಜ್ಞಾವಂತರು ಎಂದು ನಂಬಿದ್ದೇನೆ. ನಿನ್ನೆ ಸಭೆ ನಡೆಸಿ ಒಂದು ಹೇಳಿಕೆ ನೀಡಿದ್ದಾರೆ. ಜೂನ್ ವರೆಗೂ ಶಾಲೆ ಕಾಲೇಜು ತೆರೆಯುವಂತಿಲ್ಲ. ಆನ್ ಲೈನ್ ಅಲ್ಲೇ ಪಾಠ ಮಾಡಿ ಅಂತಾ. ಸ್ವಾಮಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಹೇಗ್ರಿ ಸಿಗುತ್ತೇ? ಅವರಿಗೆ ಲ್ಯಾಪ್ ಟಾಪ್ ಕೊಟ್ಟೀದ್ದೀರಾ? ಅವರಿಗೆ ಅಂತರ್ಜಾಲ ಸಂಪರ್ಕ ಇದೆಯಾ? ಅದನ್ನು ಬಳಸಲು ಅವರಿಗೆ ತಿಳುವಳಿಕೆ ಇದೆಯಾ? ಆನ್ ಲೈನ್ ನಲ್ಲಿ ಪರೀಕ್ಷೆಗೆ ಹೇಗೆ ನೋಂದಾವಣಿ ಮಾಡಿಕೊಳ್ಳಲು ಹೇಳುತ್ತೀರಾ, ಹಳ್ಳಿ ಜನ ಹೇಗೆ ಮಾಡ್ತಾರೆ?

ಜನಧನ್ ಅಕೌಂಟ್ ಎಲ್ಲರೂ ಮಾಡಲು ಆಗಿಲ್ಲ. ಅವರಿಗೆ ದುಡ್ಡು ಬಂತೋ ಇಲ್ವೋ ಗೊತ್ತಿಲ್ಲ, ದುಡ್ಡು ಹಾಕಿದ ಮೇಲೆ ಅದನ್ನು ಪಡೆಯಲು ಪಾಪ ಜನರಿಗೆ ಗೊತ್ತಿಲ್ಲ.

ತಮ್ಮ ಸ್ವಾಭಿಮಾನದ ಬದುಕಿನಿಂದ ದೇಶವನ್ನು ಕಟ್ಟುತ್ತಿರುವ ಈ ಅಸಂಘಟಿತ ವರ್ಗದ ಕಾರ್ಮಿಕರಿಗೆ ನೀವು 10 ಸಾವಿರ ನೀಡುವ ಒಂದು ಯೋಜನೆ ಘೋಷಣೆ ಮಾಡಲು ಸಾಧ್ಯವಾಗಲಿಲ್ಲವಲ್ಲಾ ಮುಖ್ಯಮಂತ್ರಿಗಳೇ? ನಾನು ಈ ಜನರ ಪರವಾಗಿ ನಿಮ್ಮ ಮುಂದೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಇವರು ಹಿಂದುಳಿದ ವರ್ಗದ ಜನ ಅಲ್ಲ. ನಮ್ಮನ್ನು ಮುಂದುವರೆಯುವಂತೆ ಮಾಡುತ್ತಿರುವ ಜನ. ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಈ ಜನರ ಬಗ್ಗೆ ಕಾಳಜಿ ವಹಿಸಲಿಲ್ಲ ಅಂದರೆ ಈ ಸರ್ಕಾರ ಯಾಕಿರಬೇಕು?

ನನಗೆ ಒಂದು ಪ್ರಶ್ನೆ ಕಾಡುತ್ತಿದೆ. ಕೊರೋನಾ ಬಗ್ಗೆ ಐಎಂಆರ್ ಸಿ ಅವರು ಅಂಕಿ-ಸಂಖ್ಯೆಗಳನ್ನು ಯಾಕೆ ನೀಡುತ್ತಿಲ್ಲ? ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಸಚಿವರ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಏನೇ ಇದ್ದರೂ ಸುರೇಶ್ ಕುಮಾರ್ ಅವರನ್ನು ಕೇಳುವಂತ ಪರಿಸ್ಥಿತಿ ಬಂದಿದೆ. ಪ್ರತಿ ದಿನ ಅವರು ಸಂಖ್ಯೆಯನ್ನು ಪ್ರಕಟಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ 10 ಲಕ್ಷ ಜನಕ್ಕೆ 10 ಸಾವಿರ ಪರೀಕ್ಷೆ ಮಾಡಿ ಅಂತಾರೆ. ನಮ್ಮಲ್ಲಿ ಎಷ್ಟಾಗುತ್ತಿದೆ? ಯಾರು ಮಾಡುತ್ತಿದ್ದಾರೆ? ಡೋರ್ ಟು ಡೋರ್ ಪರೀಕ್ಷೆ ನಡೆಯುತ್ತಿಲ್ಲ. ಪಾರದರ್ಶಕತೆ ಇಲ್ಲವೇ ಇಲ್ಲ.

ವೈದ್ಯರಿಗೆ 50 ಲಕ್ಷ ರುಪಾಯಿ ವಿಮೆ ಘೋಷಿಸಿದ್ದೀರಿ. ಅದು ಸರಿಯಾಗಿದೆ. ಅದೇ ರೀತಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಯಾಕೆ ವಿಮೆ ಸೌಲಭ್ಯವಿಲ್ಲ? ಅವರೂ ಕೂಡ ಹಗಲಿರುಳು ನಮಗಾಗಿ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೂ 25 ಅಥವಾ 50 ಲಕ್ಷ ವಿಮೆ ನೀಡಿ. ನಾವು ಬೆಂಗಳೂರು ಹಾಲು ಒಕ್ಕೂಟದ ಮೂಲಕ ಅವರಿಗೆ ತಲಾ 3 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಅವರಿಗೆ ಸರ್ಕಾರದಿಂದ 5 ಸಾವಿರವನ್ನೇ ನೀಡಿ. ಆಶಾ ಕಾರ್ಯಕರ್ತೆಯರ ಜತೆ ಅಂಗನವಾಡಿ ಕಾರ್ಯಕರ್ತೆಯರಿಗೂ ವಿಶೇಷ ಪ್ಯಾಕೇಜ್ ನೀಡಿ. ಈಗ ಇವರ ಸೇವೆ ಮಹತ್ವದ್ದಾಗಿಲ್ಲವೇ?

ಇನ್ನು ಅನೇಕ ವಿಚಾರಗಳಿವೆ. ವಿರೋಧ ಪಕ್ಷದ ನಾಯಕರೂ ಕೂಡ ಅನೇಕ ಮಾಹಿತಿ ಪಡೆದುಕೊಂಡಿದ್ದಾರೆ. ನಮ್ಮ ಪಕ್ಷದ ಪರವಾಗಿ ಅವರಿಗೂ ಒಂದಷ್ಟು ಮಾಹಿತಿ ನೀಡಿದ್ದೇವೆ. ನಾನು ಮೂರು ಬಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಅವೆಲ್ಲವನ್ನೂ ಮುಂದೆ ಬಿಚ್ಚಿಡುತ್ತೇನೆ. ಈ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಕಾಪಾಡಬೇಕು ಎಂದಷ್ಟೇ ಪ್ರಧಾನಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ.