ನವ ಕರ್ನಾಟಕ ನಿರ್ಮಾಣ, ರೈತ ಕೇಂದ್ರಿತ ಅಭಿವೃದ್ಧಿ: ಹಲವು ಘೋಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಆ,15,2021(www.justkannada.in): ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆರಂಭವಾಗಲಿದೆ. ರೈತ ಕೇಂದ್ರಿತ ಅಭಿವೃದ್ಧಿ ಜತೆಗೆ ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.  ಬಳಿಕ ರಾಜ್ಯವನ್ನ ಉದ್ದೇಶಿಸಿ ಮಾತನಾಡಿದ ಅವರು, ಇಂದು ಸಂಗೊಳ್ಳಿ ರಾಯಣ್ಣರ ಜನ್ಮದಿನವೂ ಆಗಿದೆ, ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ರಾಣಿ ಚೆನ್ನಮ್ಮ ನಮ್ಮೆಲ್ಲರ ಅಭಿಮಾನದ ಸಂಕೇತ. ರಾಯಣ್ಣರ ತ್ಯಾಗ, ಬಲಿದಾನ ಬಹಳ ಮಹತ್ವದ್ದಾಗಿದೆ. ರಾಯಣ್ಣ ಜನ್ಮದಿನ ಆಚರಣೆ ಮಾಡಲಾಗುತ್ತಿದೆ. ಅವರ ಜನ್ಮ ದಿನ ಆಚರಿಸುತ್ತಿರುವುದು ನಮಗೆ ಖುಷಿಯ ವಿಚಾರ. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣೆ ಮಾಡಬೇಕು. ಸ್ವಾತಂತ್ರ್ಯ ಸೇನಾನಿಗಳಿಗೆ ಭಾವಪೂರ್ಣ, ಭಕ್ತಿಪೂರ್ಣ ನಮನ ಎಂದು ಹೇಳಿದರು.

ರೈತಕೇಂದ್ರಿತ ಅಭಿವೃದ್ಧಿಗೆ ಚಿಂತನೆ

ಇಂದಿನಿಂದಲೇ ನವ ಕರ್ನಾಟಕ ನಿರ್ಮಾಣ ಆರಂಭವಾಗುತ್ತದೆ. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಇದೆ. ರೈತನನ್ನು ಕೇಂದ್ರ ಬಿಂದುವಾಗಿ ಅಭಿವೃದ್ಧಿ ಮಾಡಬೇಕು. ರೈತ ಕೇಂದ್ರಿತ ಅಭಿವೃದ್ಧಿ ಚಿಂತನೆ ಮಾಡುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ, ಕೈಗಾರಿಕಾ ಕ್ಷೇತ್ರದಲ್ಲಿ ಶೇ.4ರಷ್ಟು ಬೆಳವಣಿಗೆಯಾಗುತ್ತೆ, ಸೇವಾ ವಲಯದಲ್ಲಿ ಶೇ.10ರಷ್ಟು ಬೆಳವಣಿಗೆಯಾಗುತ್ತೆ  ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಲವು ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ…

ಅಮೃತ ರೈತ ಉತ್ಪಾದಕ ಸಂಸ್ಥೆ ಯೋಜನೆಯನ್ನು ಘೋಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ, ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು ಸಂಸ್ಥೆಗಳ ಆರಂಭ ಮಾಡಲಾಗುವುದು. 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಂಸ್ಥೆಗೆ 30 ಲಕ್ಷ ರೂ.ನಂತೆ 3 ವರ್ಷ ನೀಡಲಾಗುವುದು. ಇದಕ್ಕಾಗಿ 225 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವುದು. ಶೇ.100ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್, ಡಿಜಿಟಲ್ ಗ್ರಂಥಾಲಯಗಳೊಂದಿಗೆ ಶಾಲೆ ಸ್ಥಾಪನೆ. ಶಾಲೆಗಳ ಸಮಗ್ರ ಮೂಲಸೌಕರ್ಯದೊಂದಿಗೆ ಅಭಿವೃದ್ಧಿ ಮಾಡಲಾಗುವುದು  ಎಂದು ಸಿಎಂ ಬೊಮ್ಮಯಿ ತಿಳಿಸಿದರು.

ಅಮೃತ ನಿರ್ಮಲ ನಗರ ಯೋಜನೆ, ಅಮೃತ ಶಾಲಾ ಸೌಲಭ್ಯ ಯೋಜನೆಯನ್ನ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಹಾಗೆಯೇ 750 ಅಂಗನವಾಡಿ ಕೇಂದ್ರಗಳು ಮೇಲ್ದರ್ಜೆಗೆ ಅಮೃತ ಅಂಗನವಾಡಿ ಯೋಜನೆಯಡಿ ಪ್ರತಿ ಅಂಗನವಾಡಿ 1 ಲಕ್ಷ ರೂಪಾಯಿ ನೀಡಲಾಗುವುದು. ಇದಕ್ಕಾಗಿ 7.5 ಕೋಟಿ ರೂ. ವಿನಿಯೋಗಿಸಲಾಗುವುದು ಎಂದರು.

Key words: New Karnataka – Farmer -Centered –Development-independence day-CM Basavaraja Bommai