ಮೊಟ್ಟ ಮೊದಲ ಬಾರಿಗೆ ಈ ವಿದ್ಯಾರ್ಥಿಗಳಿಗೆ ಡಬ್ಬಲ್ ಟ್ರೀಟ್.

ಬೆಂಗಳೂರು, ನವೆಂಬರ್ 14, 2022 (www.justkannada.in): ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವಂತಹ ಶಾಲೆಗಳು ಹಾಗೂ ಅನಾಥಾಲಯಗಳ ಸುಮಾರು ೪೦೦ ಮಕ್ಕಳಿಗೆ ಈ ಬಾರಿ ಮಕ್ಕಳ ದಿನಾಚರಣೆಯ ಮುನ್ನಾ ದಿನದ ಸಂಜೆ ಬಹಳ ವಿಶೇಷವಾಗಿತ್ತು. ಈ ಮಕ್ಕಳಿಗಾಗಿ ರೋಟ್ರ್ಯಾಕ್ಟ್ ಜಿಲ್ಲಾ ಸಂಸ್ಥೆ 3190 ವತಿಯಿಂದ, ರೇಣುಕಾ ಪ್ರಸನ್ನ ಚಿತ್ರಮಂದಿರದಲ್ಲಿ ನಡೆಯುತ್ತಿರುವ ದಿವಂಗತ ಪುನೀತ್ ರಾಜ್‌ ಕುಮಾರ್ ಅವರ ಗಂಧದಗುಡಿ ಚಲನಚಿತ್ರದ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಮೇಲಾಗಿ, ಈ ಮಕ್ಕಳನ್ನು ಕಾಣಲು ಚಿತ್ರದ ನಿರ್ದೇಶಕ ಅಮೋಘವರ್ಷ ಆಗಮಿಸಿದುದು ಈ ಮಕ್ಕಳಿಗೆ ಮತ್ತೊಂದು ಆಶ್ಚರ್ಯದ ಸಂಗತಿಯಾಗಿತ್ತು.

“ಮಕ್ಕಳು ದೊಡ್ಡ ಪರದೆಯ ಮೇಲೆ ಮೊದಲ ಬಾರಿಗೆ ಪ್ರಾಣಿಗಳನ್ನು ನೋಡಲು ಬಹಳ ಉತ್ಸುಕರಾಗಿರುತ್ತಾರೆ. ಈ ಮಕ್ಕಳು ಪಡುವ ಆನಂದ ಹಾಗೂ ಅವರು ತಟ್ಟುವ ಚಪ್ಪಾಳೆಗಳನ್ನು ನೋಡುವುದೇ ನಮಗೊಂದು ಸಂತಸ. ಈ ಮಕ್ಕಳ ಕಣ್ಣಲ್ಲಿ ಕಂಡು ಬಂದಂತಹ ಉಲ್ಲಾಸ ನನಗೆ ಬಹಳ ಸಂತೋಷ ನೀಡಿತು,” ಎಂದು ಅಮೋಘವರ್ಷ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ಚಲನಚಿತ್ರಕ್ಕೆ ಲಭಿಸಿದ ಪ್ರತಿಕ್ರಿಯೆ ಅದ್ವಿತೀಯವಾಗಿದೆ. “ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಚಲನಚಿತ್ರವನ್ನು ಎಲ್ಲಾ ವಯೋಮಾನದವರು ನೋಡಿ ಆನಂದಿಸಿದ್ದಾರೆ. ನಮ್ಮ ರಾಜ್ಯ ಹಾಗೂ ನಮ್ಮ ದೇಶದ ಶ್ರೀಮಂತ ಸಂಪನ್ಮೂಲವನ್ನು ದೊಡ್ಡ ಪರದೆಯ ಮೇಲೆ ನೋಡುವುದೇ ಒಂದು ರೀತಿಯ ಆನಂದ ಮತ್ತು ಹೆಮ್ಮೆಯ ವಿಷಯ ಎಂದು ಚಿತ್ರವನ್ನು ವಿಕ್ಷಿಸಿದ ಅನೇಕರು ನನಗೆ ತಿಳಿಸಿದ್ದಾರೆ. ಈ ಚಿತ್ರದ ವೀಕ್ಷಕರು ಸ್ವತಃ ಅಪ್ಪುವಿನೊಂದಿಗೆ ಪ್ರಯಾಣಿಸಿದಂತೆ ಭಾಸವಾಗಿದೆ, ಅದು ಇಂತಹ ಚಿತ್ರವೊಂದನ್ನು ನಿರ್ದೇಶಿಸಿದ ನನಗೆ ಅತ್ಯಂತ ದೊಡ್ಡ ಕೊಡುಗೆ,” ಎಂದರು.

ರೊಟ್ರ್ಯಾಕ್ಟ್ ಜಿಲ್ಲಾ ೩೧೯೦ ಸಂಸ್ಥೆಯ ಸ್ವಯಂಸೇವಕರು, ಹಿಹೆಚ್‌ಪಿಎಸ್, ನಾಗರಾವಿ ಶಾಲೆ, ಫಾರೂಕಿಯ ಬಾಲಕಿಯರ ಪ್ರೌಢಶಾಲೆ, ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸುಮಂಗಲಿ ಸೇವಾಶ್ರಮ, ಸ್ವಾವಲಂಬನ್ ಅಂಗವಿಕಲರ ಸೇವಾ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಅನಾಥ ಶಿಶು ಸೇವಾಶ್ರಮದಂತಹ ವಿವಿಧ ಎನ್‌ ಜಿಒಗಳು ನಡೆಸುತ್ತಿರುವ ಶಾಲೆಗಳು ಹಾಗೂ ಅನಾಥಾಲಯಗಳ ಮಕ್ಕಳಿಗಾಗಿ ಏರ್ಪಡಿಸಿತು.

ಈ ಎಲ್ಲಾ ಮಕ್ಕಳನ್ನು ಒಂದೇ ಬಾರಿಗೆ ಒಂದೇ ಪರದೆಯಡಿ ಈ ಚಿತ್ರವನ್ನು ತೋರಿಸಿಲು ಯೋಜಿಸಲಾಯಿತು. ಇದಕ್ಕಾಗಿ ರೂ.೨೫,೫೦೦ ವೆಚ್ಚವಾಗಿದೆ. ಜೊತೆಗೆ ಮಕ್ಕಳಿಗೆ ಚಲನಚಿತ್ರದ ವೀಕ್ಷಿಸುವ ಸಮಯದಲ್ಲಿ ಲಘು ಉಪಾಹರವನ್ನೂ ಸಹ ನೀಡಲಾಯಿತು.

ರೊಟ್ರ್ಯಾಕ್ಟ್ ನ ತರುಣ್ ಯು. ಅವರು ಈ ಸಂಬಂಧ ಮಾತನಾಡಿ, “ನಮ್ಮ ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಹಾಗೂ ಅವರಿಗೆ ಈ ವಯಸ್ಸಿನಲ್ಲಿಯೇ ನಮ್ಮ ರಾಜ್ಯದ ಕಾಡು, ಮೇಡು, ಪ್ರಾಣಿ ಪಕ್ಷಿಗಳ ಕುರಿತು ತಿಳಿದುಕೊಳ್ಳಲು ಚಲನಚಿತ್ರ ವೀಕ್ಷಣೆ ಅತ್ಯಂತ ಸೂಕ್ತವಾದ ವಿಧಾನ ಎಂದನಿಸಿತು. ಇಷ್ಟೊಂದು ಮಕ್ಕಳು ಒಟ್ಟಿಗೆ ಒಮ್ಮೆಗೆ ಚಿತ್ರವನ್ನು ವೀಕ್ಷಿಸುವುದನ್ನು ನೋಡುವ ಹಾಗೂ ಅವರು ಆನಂದಿಸುವ ಅನುಭವವೇ ನಮಗೆ ಒಂದು ವಿಶೇಷ ಎಂದರು.

ಈ ಪೈಕಿ ಅನೇಕ ಮಕ್ಕಳು ತಮ್ಮ ಜೀವನದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಬಂದ ಅನುಭವವಾಗಿದೆ. “ನಾನು ಇದೇ ಮೊದಲ ಬಾರಿಗೆ ಚಲನಚಿತ್ರ ಮಂದಿರವನ್ನು ನೋಡುತ್ತಿದ್ದೇನೆ. ಈ ಚಿತ್ರವನ್ನು ನೋಡಲು ಕಾತುರನಾಗಿದ್ದೆ. ನನಗೆ ಇದೊಂದು ಅತ್ಯಂತ ಸಂತೋಷ ನೀಡಿದ ವಿಷಯವಾಗಿದೆ. ನನ್ನ ಜೊತೆಗೆ ಇತರೆ ಶಾಲೆಗಳ ಮಕ್ಕಳಿಗೂ ಸಹ ಇದೊಂದು ವಿಶೇಷ ಅನುಭವವಾಯಿತು. ಅವರೊಂದಿಗೆ ಕುಳಿತು ಸಿನಿಮಾ ನೋಡಿದ್ದೇ ನನಗೆ ಎಂದಿಗೂ ಮರೆಯದ ವಿಷಯವಾಗಿದೆ. ಚಲನಚಿತ್ರ ಮುಗಿದ ನಂತರ ನಾವು ಈ ಚಿತ್ರದ ನಿರ್ದೇಶಕರಾದ ಅಮೋಘವರ್ಷ ಅವರನ್ನು ಕಾಣುವ ಅವಕಾಶವೂ ದೊರೆಯಿತು. ನಮಗೆಲ್ಲಾ ತುಂಬಾ ಸಂತೋಷವಾಗಿದೆ,” ಎಂದು ಓರ್ವ ವಿದ್ಯಾರ್ಥಿ ತನ್ನ ಅನಿಸಿಕೆಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ.

ಸರ್ಕಾರಿ ಶಾಲಾ ಮಕ್ಕಳಿಗೆ ರಸಪ್ರಶ್ನೆ..

ವೈಟ್‌ ಫೀಲ್ಡ್ ಹಾಗೂ ಸುತ್ತಮುತ್ತಲಿನಲ್ಲಿರುವ ಸುಮಾರು 12 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶನಿವಾರದಂದು ಮಕ್ಕಳ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವ ರಸಪ್ರಶ್ನೆ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಇನ್ನರ್ ವೀಲ್ ಕ್ಲಬ್ ಆಫ್ ಬೆಂಗಳೂರು ಐಟಿ ಕಾರಿಡಾರ್ (ಐಡಬ್ಲ್ಯುಸಿಬಿಐಟಿಸಿ) ಹಾಗೂ ರೋಟರಿ ಕ್ಲಬ್ ಆಫ್ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸತ್ಯಪೂರ್ಣ ಎಂಬ ಶಿಕ್ಷಕರೊಬ್ಬರು ಈ ರಸಪ್ರಶ್ನೆಯನ್ನು ರೂಪಿಸಿದರು. ಈ ಎರಡೂ ಸಂಸ್ಥೆಗಳು ದತ್ತು ತೆಗೆದುಕೊಂಡಿರುವಂತಹ ಈ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅವರ ವಿದ್ಯಾರ್ಥಿಗಳಿಗೆ ರಸಪ್ರಶ್ನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಅತ್ಯಂತ ಸಂತಸದ ವಿಷಯವಾಗಿತ್ತು. ಈ ರಸಪ್ರಶ್ನೆ ಕಾರ್ಯಕ್ರಮವನ್ನು ರಾಮಗೊಂಡನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು. ಪ್ರತಿ ತಂಡದಲ್ಲಿ ನಾಲ್ಕು ಹಾಗೂ ಐದನೇ ತರಗತಿಗಳಲ್ಲಿ ಕಲಿಯುತ್ತಿರುವ ತಲಾ ಇಬ್ಬರಂತೆ, ಒಟ್ಟು ನಾಲ್ವರು ವಿದ್ಯಾರ್ಥಿಗಳಿದ್ದರು.

ಐಡಬ್ಲ್ಯುಸಿಬಿಐಟಿಸಿಯ ಹಿಂದಿನ ಅಧ್ಯಕ್ಷರಾದ ಅನು ನಂಬಿಯಾರ್ ಹಾಗೂ ಕಾರ್ಯದರ್ಶಿ ಶಾಂತ ದಿವಾಕರನ್ ಅವರು ಕಾರ್ಯಕ್ರಮದಲ್ಲಿ ಕ್ವಿಜ್ ಮಾಸ್ಟರ್‌ ಗಳಾಗಿದ್ದರು. ಅಂಬೇಡ್ಕರ್‌ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಗೆದ್ದರು. ವಿಜಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರನ್ನರ್ ಅಪ್ ಆದರು.  ವಿಜೇತರಿಗೆ ಟ್ರೋಫಿಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೋಟೇರಿಯನ್ ಸುಮೇಧಾ ಅವರು ಇಂತಹ ಕಾರ್ಯಕ್ರಮಗಳನ್ನು ಪ್ರಾದೇಶಿಕ ಮಟ್ಟದಲ್ಲಿಯೂ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು. ಐಡಬ್ಲ್ಯುಸಿಬಿಐಟಿಸಿಯ ಅಧ್ಯಕ್ಷರಾದ ಶಾಂತಿ ಸುಬ್ರಮಣಿಯನ್ ಅವರು ಸರ್ಕಾರಿ ಶಾಲೆಗಳ ಮಕ್ಕಳೊಂದಿಗೆ ವಿಶೇಷ ದಿನಗಳನ್ನು ಆಚರಿಸಿವುದನ್ನು ಸಂಸ್ಥೆ ಅಭ್ಯಾಸ ಮಾಡಿಕೊಂಡಿರುವುದಾಗಿ ತಿಳಿಸಿದರು. ಈ ವರ್ಷ ೧೨ ಶಾಲೆಗಳೊಂದಿಗೆ ಸೇರಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿರುವುದಾಗಿಯೂ ತಿಳಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: double -treat –first- time- students.