ಕೃಷಿಕರಿಗೆ ಕ್ರೆಡಿಟ್ ಕಾರ್ಡ್ ವಿತರಣೆ: ಸಚಿವ ಬಿ.ಸಿ.ಪಾಟೀಲ್

ಮಂಗಳೂರು, ಮೇ 05, 2020 (www.justkannada.in): ಕೇಂದ್ರ – ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ರಾಜ್ಯದ ರೈತರಿಗಾಗುತ್ತಿರುವ ಅನಾನುಕೂಲ ಪರಿಹರಿಸಲು ಸದ್ಯದಲ್ಲಿಯೇ ಕೃಷಿ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

ಇಂದು ಅವರು ಮಂಗಳೂರು ಜಿಲ್ಲಾ ಕೃಷಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಢಿ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರಿಗೆ ಅನೇಕ ಅನುಕೂಲಗಳನ್ನು ನೀಡುತ್ತಿವೆ. ಅವುಗಳನ್ನು ಪಡೆಯಲು ಬೇಕಾದ ದಾಖಲೆಗಳನ್ನು ಹೊಂದಿಸಿಕೊಳ್ಳಲು ರೈತರು ಕಚೇರಿಯಿಂದ ಕಚೇರಿಗೆ ಅಲೆಯಬೇಕು. ನಂತರ ದಾಖಲೆಗಳನ್ನು ಹೊತ್ತುಕೊಂಡು ತಿರುಗಬೇಕಿ.‌ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು.

ಈ ಕಾರ್ಡಿನಲ್ಲಿ ಕೃಷಿಕರ ಹೆಸರು, ಊರು, ಜಮೀನಿನ‌ ಪಹಣಿ ದಾಖಲೆಗಳು, ಇದುವರೆಗೂ ಬ್ಯಾಂಕ್ ಸೊಸೈಟಿ ಸಾಲವೂ ಸೇರಿದಂತೆ ಪಡೆದಿರುವ ಅಥವಾ ಪಡೆದಿರದ ಸೌಲಭ್ಯಗಳ ವಿವರಗಳು ಅಡಕವಾಗಿರುತ್ತವೆ.‌ಸಂಬಂಧಿಸಿದ ಕಚೇರಿಯಲ್ಲಿ ಕಾರ್ಡ್ ಸ್ವೈಪ್ ಮಾಡಿದರೆ ಕಂಪ್ಯೂಟರಿನಲ್ಲಿ ಈ ಎಲ್ಲ ವಿವರಗಳು ಮೂಡುತ್ತವೆ.‌ಇಷ್ಟರಲ್ಲಾಗಲೇ ಈ ಯೋಜನೆ ಚಾಲ್ತಿಗೆ ಬರಬೇಕಿತ್ತು. ಕೋವಿಡ್ – 19ನಿಂದಾಗಿ ತುಸು‌‌ ಮುಂದೆ ಹೋಗಿದೆ. ಅತೀ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದರು.

ಕೃಷಿ‌ ಕ್ರೆಡಿಟ್ ಕಾರ್ಡ್ ಅನ್ನು ಪ್ರುಟ್ಸ್ ಎಂಬ ಆ್ಯಪ್‍ಗೆ ಟ್ಯಾಗ್ ಮಾಡಲಾಗುವುದು. ಈ‌ ಆ್ಯಪ್ ನಲ್ಲಿ ಕೃಷಿಗೆ ಸಂಬಂಧಿಸಿದ ಸಕಲ ವಿವರಗಳೂ ಇರುತ್ತವೆ ಎಂದು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಭತ್ತದ ಕೃಷಿಯನ್ನೂ ನರೇಗಾದಡಿ ತರಲು, ಕಟಾವು ಯಂತ್ರಗಳಿಗೆ ಸಬ್ಸಿಡಿ ಹೆಚ್ಚಿಸಲು ಪ್ರಸ್ತಾಪ ಸಲ್ಲಿಸಿದ್ದಾರೆ. ಈಗಾಗಲೇ ಕಟಾವು ಯಂತ್ರಗಳಿಗೆ 38 ಲಕ್ಷ ರೂಪಾಯಿ ಸಬ್ಸಿಡಿ‌ ನೀಡಲಾಗುತ್ತಿದೆ. ಸಹಕಾರಿ ಕೃಷಿ ಒಕ್ಕೂಟಗಳನ್ನು ಜಾರಿಗೆ ತಂದರೆ ಅಲ್ಲಿಗೂ ಅದನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ಕೃಷಿಕರಿಗೆ ಅಗತ್ಯ ಸಹಾಯ – ಮಾರ್ಗದರ್ಶನ ಮಾಡಲು‌ ಸದ್ಯದಲ್ಲಿಯೇ ರೈತಮಿತ್ರರ ನೇಮಕ ಮಾಡಲಾಗುವುದು. ಇದರಲ್ಲಿ ಶೇಕಡ 85ರಷ್ಟು ಹುದ್ದೆಗಳಿಗೆ ಕೃಷಿ ಡಿಪ್ಲೊಮಾ‌ ಪಡೆದವರನ್ನು ಶೇಕಡ 15 ರಷ್ಟು ಹುದ್ದೆಗಳಿಗೆ ಕೃಷಿ ಪದವಿ ಪಡೆದವರನ್ನು ನೇಮಿಸಲಾಗುವುದು. ಪ್ರತಿ 2 ಗ್ರಾಮ‌ ಪಂಚಾಯ್ತಿಗಳಿಗೆ ಒಬ್ಬರು ರೈತಮಿತ್ರರು ಇರುತ್ತಾರೆ ಎಂದು ವಿವರಿಸಿದರು.

ಸದ್ಯದಲ್ಲಿಯೇ ರಾಜ್ಯದಲ್ಲಿ ಕೃಷಿ ಮೊಬೈಲ್ ಕ್ಲಿನಿಕ್ ಗಳು ಅಸ್ತಿತ್ವಕ್ಕೆ ಬರುತ್ತವೆ. ಇವುಗಳು ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಇರುತ್ತವೆ. ಈ ಮೊಬೈಲ್ ಕ್ಲಿನಿಕ್ ಗಳಲ್ಲಿ‌ ಮಣ್ಣು – ಪೋಷಕಾಂಶ – ಕೀಟ – ರೋಗ ಪತ್ತೆ ಸೌಲಭ್ಯಗಳಿರುತ್ತವೆ ಎಂದು ವಿವರಿಸಿದರು.

ಮುಂಗಾರು ಹಂಗಾಮು ಚಟುವಟಿಕೆ ಸುಗಮವಾಗಿ ಸಾಗಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ.‌ಬಿತ್ತನೆಬೀಜ ಗೊಬ್ಬರಗಳನ್ನು ಎಷ್ಟು ಪ್ತಮಾಣದಲ್ಲಿಯಾದರೂ ಪುರೈಸಲು ಸಿದ್ಧ ಎಂದು ಭರವಸೆ ನೀಡಿದರು