ಮೈಸೂರು : ಜೆ.ಎಸ್.ಎಸ್ ಆಸ್ಪತ್ರೆಗೆ ಸಿಕ್ತು  ಎನ್ಎಬಿಎಚ್ ಮಾನ್ಯತೆ …

ಮೈಸೂರು,ಜು,17,2019(www.justkannada.in): ಜೆಎಸ್ಎಸ್ ಆಸ್ಪತ್ರೆಗೆ ನ್ಯಾಷನಲ್ ಎಕ್ರಿಡಿಟೇಶನ್ ಬೋರ್ಡ್  ಫಾರ್ ಹಾಸ್ಪಿಟಲ್ ಅಂಡ್ ಹೆಲ್ತ್ ಕೇರ್ ಪ್ರೊವೈಡರ್(ಎನ್ಎಬಿಎಚ್) ಮಾನ್ಯತೆ ದೊರಕಿದೆ.

ನಗರದ ಜೆಎಸ್ಎಸ್ ಆಸ್ಪತ್ರೆ ಸಭಾಂಗಣದಲ್ಲಿ ಎನ್ಎಬಿಎಚ್ ಮಾನ್ಯತೆ ಪ್ರಮಾಣಪತ್ರವನ್ನು ಅನಾವರಣಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಮಾನ್ಯತೆ ದೊರಕಿರುವ ವಿಚಾರ ಪ್ರಕಟಿಸಲಾಯಿತು. ಜೆಎಸ್ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಡಾ.ಸಿ.ಜಿ.ಬೆಟಸೂರಮಠ ಅವರು ಮಾತನಾಡಿ, ಕಳೆದ 1974ರಲ್ಲಿ ಡಾ.ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿಗಳ ಬಯಕೆಯಿಂದ ಅಗ್ರಹಾರದಲ್ಲಿ ಆರಂಭವಾದ ಪ್ರಾಥಮಿಕ ಆರೋಗ್ಯವು 1984ರಲ್ಲಿ 60ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು. 60ಹಾಸಿಗೆಗಳಿಂದ ಆರಂಭವಾದ ಈ ಆಸ್ಪತ್ರೆಯು 1200 ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಮೈಸೂರು ಮತ್ತು ಸುತ್ತಮುತ್ತಲ ಜಿಲ್ಲೆಗಳ ಆರೋಗ್ಯ ಸೇವೆಗೆ ಸಮರ್ಪಿಸಿದರು.

ಹಿರಿಯ ಶ್ರೀಗಳ ಸಂಕಲ್ಪದಂತೆ ಸಾಮಾನ್ಯ ಜನರಿಗೆ ಮತ್ತಷ್ಟು ಹೆಚ್ಚಿನ ಆರೋಗ್ಯ ಸೇವೆ ಸಲ್ಲಿಸಲು ಮತ್ತು ಅನೇಕ ವಿವಿಧ ವಿಶೇಷ ಸೌಲಭ್ಯಗಳುಳ್ಳ 1800 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು 2013ರಲ್ಲಿ ರಾಷ್ಟ್ರಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಮರ್ಪಿಸಿದ್ದರು ಎಂದು ಮಾಹಿತಿ ನೀಡಿದರು.

ಜೆಎಸ್ಎಸ್ ಆಸ್ಪತ್ರೆಯು ಪ್ರಾರಂಭದಿಂದಲೂ ಗುಣಮಟ್ಟದ ಸೇವೆಗೆ ಆದ್ಯತೆ ನೀಡುತ್ತಾ ಬಂದಿದೆ. 2004ರಲ್ಲಿ ಐಎಸ್ಓ-9001-2000 ಮಾನ್ಯತೆ ಪಡೆದಿತ್ತು. ಆಸ್ಪತ್ರೆಯು ಸೇವಾ ಗುಣಮಟ್ಟದ ಮಾನದಂಡವಾದ ಎನ್ಎಬಿಎಚ್ ನಲ್ಲಿ 2016ರಲ್ಲಿ ಪ್ರವೇಶಮಟ್ಟದ ಮಾನ್ಯತೆ ಪಡೆದುಕೊಂಡಿತ್ತು. 2018ರಲ್ಲಿ ಎನ್ಎಬಿಎಚ್ ನ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ನೀಡುತ್ತಿರುವ ಸೇವೆಗಳನ್ನು ಪರಿಶೀಲಿಸಿ 2019ರಲ್ಲಿ ಪೂರ್ಣಪ್ರಮಾಣದ ಎನ್ಎಬಿಎಚ್ ಮಾನ್ಯತೆ ನೀಡಿರುತ್ತಾರೆ ಎಂದು ಬೆಟಸೂರಮಠ ಅವರು ತಿಳಿಸಿದರು.

ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಅಂಗ ಸಂಸ್ಥೆಯಾಗಿರುವ ಎನ್ಎಬಿಎಚ್ (ಜೆಎಸ್ಎಸ್ ಆಸ್ಪತ್ರೆಗೆ ನ್ಯಾಷನಲ್ ಎಕ್ರಿಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ ಅಂಡ್ ಹೆಲ್ತ್ ಕೇರ್ ಪ್ರೊವೈಡರ್) ಆಸ್ಪತ್ರೆ ಹಾಗೂ ಆರೋಗ್ಯ ಸೇವಾ ಕೇಂದ್ರಗಳ ಗುಣಮಟ್ಟದ ಮಾನದಂಡ ನಿರ್ಧರಿಸುವ ಹಾಗೂ ಮಾನ್ಯತೆ ನೀಡುವ ಮಂಡಳಿಯಾಗಿರುತ್ತದೆ ಎಂದು ಹೇಳಿದರು.

Key words: NABH -accreditation -Mysore -JSS Hospital.