ಕಾಯ್ದೆ ಉಲ್ಲಂಘಿಸಿ ಮೈಸೂರು ವಿವಿಗೆ ಸಿಂಡಿಕೇಟ್ ಸದಸ್ಯೆ ನೇಮಕ ಅ’ಸಿಂಧು’…!

 

ಮೈಸೂರು, ಡಿ.14, 2019 : (www.justkannada.in news) : ವಿಶ್ವವಿದ್ಯಾನಿಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವ ವೇಳೆ ವಿಶ್ವವಿದ್ಯಾನಿಲಯದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ನೇಮಕ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆಯಷ್ಟೆ ರಾಜ್ಯ ಸರಕಾರ, ವಿವಿಧ ವಿಶ್ವವಿದ್ಯಾನಿಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಆದರೆ ಈ ನೇಮಕಾತಿ ಮಾಡುವ ವೇಳೆ ‘ ಕರ್ನಾಟಕ ವಿಶ್ವವಿದ್ಯಾನಿಲಯ ಕಾಯ್ದೆ 2000’ ಇದನ್ನು ಸಂಪೂರ್ಣ ಕಡೆಗಣಿಸಿ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಗ ಅದು ಶೈಕ್ಷಣಿಕ ವಲಯದಲ್ಲಿ ತೀವ್ರ ಅಸಮಧಾನಕ್ಕೆ ಎಡೆಮಾಡಿದೆ.

ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವ ವೇಳೆಯಲ್ಲೂ ಈ ಉಲ್ಲಂಘನೆ ನಡೆದಿದೆ. ‘ ಕರ್ನಾಟಕ ಯುನಿವರ್ಸಿಟಿ ಆ್ಯಕ್ಟ್ 2000’ ಇದರ ಪ್ರಕಾರ, ಒಂದು ಬಾರಿ ಸದಸ್ಯರಾಗಿ ನೇಮಕಗೊಂಡವರನ್ನು ಮತ್ತೆ ಇನ್ನೊಂದು ಅವಧಿಯಲ್ಲಿ ಅದೇ ಸ್ಥಾನಕ್ಕೆ ನೇಮಕ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.

ಮೈಸೂರು ವಿವಿಯ ಸಿಂಡಿಕೇಟ್ ಗೆ ವಿವಿಧ ಮೀಸಲಿನಡಿ ಒಟ್ಟು ಆರು ಜನರನ್ನು ನೇಮಕ ಮಾಡಲಾಗಿದೆ. ಇವರುಗಳೆಂದರೆ, ಚಾಮರಾಜನಗರದ ಪ್ರದೀಪ್ ಕುಮಾರ್ ದೀಕ್ಷಿತ್ (ಸಾಮಾನ್ಯ), ಮಂಡ್ಯದ ಪ್ರೊ.ದೊಡ್ಡಚಾರಿ (ಸಾಮಾನ್ಯ), ಮೈಸೂರಿನ ಸಿಂಧು ಸುರೇಶ್ (ಮಹಿಳೆ) ಮಂಡ್ಯ ಜಿಲ್ಲೆಯ ಡಾ.ಈ.ಸಿ.ನಿಂಗರಾಜು (ಹಿಂದುಳಿದ ವರ್ಗ), ಹಾಸನ ಜಿಲ್ಲೆಯ ಡಾ.ದಾಮೋಧರ (ಪರಿಶಿಷ್ಠ ಪಂಗಡ), ಬೆಂಗಳೂರಿನ ಡಾ.ಸಯ್ಯದ್ ಕಾಝು ಮೊಹೀದ್ದಿನ್ (ಅಲ್ಪಸಂಖ್ಯಾತ).

ಈ ಪೈಕಿ ಮೈಸೂರಿನ ಸಿಂಧು ಸುರೇಶ್ ನೇಮಕ ಈಗ ವಿವಾದಕ್ಕೆ ಎಡೆ ಮಾಡಿದೆ. ಇವರು ಈ ಹಿಂದೆ 2002 ರಲ್ಲಿ ಇದೇ ಮೈಸೂರು ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಈಗ ಮತ್ತೆ 17 ವರ್ಷಗಳ ಬಳಿಕ 2019 ರಲ್ಲಿ ಮೈಸೂರು ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ಮರು ನಾಮಕರಣಗೊಂಡಿರುವುದು ನಿಯಮ ಬಾಹಿರ. ಇದು ‘ ಕರ್ನಾಟಕ ಯೂನಿವರ್ಸಿಟಿ ಆ್ಯಕ್ಟ್ 2000’ ಕಾಯ್ದೆಯ ಸ್ಪಷ್ಟ ಉಲ್ಲಂಘನೆ.

ವಿಫಲ ಯತ್ನ :

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, 2008 ರಲ್ಲಿ ಸಹ ಮೈಸೂರು ವಿವಿಯ ಸಿಂಡಿಕೇಟ್ ಗೆ ಸಿಂಧು ಸುರೇಶ್ ಅವರನ್ನು ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿತ್ತು. ಆದರೆ ಆಗ ಮೈಸೂರು ವಿವಿ ಕುಲಪತಿಯಾಗಿದ್ದ ಪ್ರೊ.ತಳವಾರ್ ಅವರು, ಸಿಂಧು ಸುರೇಶ್ ನೇಮಕ ಪ್ರಶ್ನಿಸಿ ಸರಕಾರಕ್ಕೆ ಪತ್ರ ಬರೆದಿದ್ದರು. ಕಾರಣ ಈ ಹಿಂದೆ 2002 ರಲ್ಲಿ ಸಿಂಧು ಸುರೇಶ್ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಈಗ ಮತ್ತೆ ಅವರನ್ನೇ ಮರು ನೇಮಿಸಲಾಗಿದೆ. ಇದು ವಿವಿಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ವಿಶ್ವವಿದ್ಯಾನಿಲಯ ಈಗೇನು ಮಾಡಬೇಕು ಎಂದು ಪತ್ರದಲ್ಲಿ ರಾಜ್ಯ ಸರಕಾರಕ್ಕೆ ಮಾಹಿತಿ ಕೋರಿದ್ದರು. ಆನಂತರ ಸರಕಾರದಿಂದ ಈ ಪತ್ರಕ್ಕೆ ಯಾವುದೇ ಪ್ರತ್ಯುತ್ತರ ಬಾರದ ಕಾರಣ ನೇಮಕ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಮೂರನೇ ಬಾರಿಗೆ ನೇಮಕದ ಆದೇಶ ಹೊರ ಬಿದ್ದಿದೆ.

ವಿದ್ಯಾರ್ಹತೆ ಗೊಂದಲ :

ಮೈಸೂರು ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ಸಿಂಧು ಸುರೇಶ್ ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆದೇಶದಲ್ಲಿನ ವಿದ್ಯಾರ್ಹತೆ ಮಾಹಿತಿ ಗೊಂದಲಕ್ಕೆ ಕಾರಣವಾಗಿದೆ. ಈ ಹಿಂದೆ 2002 ರಲ್ಲಿ ಸಿಂಧು ಸುರೇಶ್  ಅವರು ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿದ್ದ ವೇಳೆ ವಕೀಲರು (ಎಲ್.ಎಲ್.ಬಿ ) ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಈಗ 2019 ರಲ್ಲಿನ ಸರಕಾರದ ಆದೇಶದದಲ್ಲಿ ಎಂಎಸ್ಸಿ, ಪಿಎಚ್ಡಿ ಎಂದು ನಮೂದಿಸಲಾಗಿದೆ. ಇದು ಗೊಂದಲಕ್ಕೆ ಎಡೆಮಾಡಿದೆ.

key words : mysore-univesity-syndicate-member-nomination-irregular-sindhu-suresh

karnataka state governament violates ‘ karnataka univrrsity act 2000 ‘ while nominating the syndicate members.