ಉಚಿತ ತರಬೇತಿ ಕಾರ್ಯಾಗಾರ ಸಮಾರೋಪ

ಮೈಸೂರು: ಮೈಸೂರು ವಕೀಲರ ಸಂಘ, ಜೆಎಸ್‌ಎಸ್ ಕಾನೂನು ಕಾಲೇಜು ಹಾಗೂ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ ಕುವೆಂಪುನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಶನಿವಾರ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರಿನ ಎರಡನೇ ಪ್ರಧಾನ ಹೆಚ್ಚುವರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ವಿರೂಪಾಕ್ಷಯ್ಯ ಎಚ್.ಎಂ. ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್. ಆರ್. ಸೋಮಶೇಖರ್ ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವ ಸ್ವಾಮಿ ಹಾಗೂ ಕಾರ್ಯದರ್ಶಿ ಉಮೇಶ್ ಎಸ್. ಭಾಗವಹಿಸಿದ್ದರು.

ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕ ಎಚ್.ಎನ್. ವೆಂಕಟೇಶ್, ಹಿರಿಯ ವಕೀಲ ಎಂ.ಡಿ. ಹರೀಶ್ ಕುಮಾರ್ ಹೆಗ್ಡೆ, ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ. ರಾಮಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರು ಎಸ್.ಆರ್ ಸೋಮಶೇಖರ್ ಮಾತನಾಡಿ, ನಾನು ಮೊದಲು ಇಲ್ಲಿಗೆ ಬಂದಾಗ ಮೈಸೂರು ಜಿಲ್ಲಾ ವಕೀಲರ ಸಂಘದ ಬಗ್ಗೆ ಸ್ವಲ್ಪ ಬೇಸರವಿತ್ತು. ಉದ್ಘಾಟನೆ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಇರಲಿಲ್ಲ. ಕೇವಲ ಲಾ ಗೈಡ್ ವೆಂಕಟೇಶ್ ಹಾಗೂ ಜೆಎಸ್‌ಎಸ್ ಕಾನೂನು ಕಾಲೇಜಿನವರು ಮತ್ತು ಕೆಲ ಹಿರಿಯ ವಕೀಲರು ಮಾತ್ರ ಇದ್ದರು. ಇದರ ಜೊತೆಗೆ ಇತ್ತೀಚೆಗೆ ಚಿಕ್ಕ ಚಿಕ್ಕ ವಿಚಾರವಾಗಿ ನ್ಯಾಯಾಲಯದ ಕಲಾಪಗಳಿಂದ ವಕೀಲರು ದೂರ ಉಳಿಯುವ ವಿಚಾರ ತಿಳಿದು ಮನಸಿಗೆ ನೋವಾಗಿತ್ತು. ಆದರೆ ಈಗ ಅದರಲ್ಲಿ ಬದಲಾವಣೆಯಾಗಿದೆ. ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈ ಉತ್ಸಾಹ ಇದೇ ರೀತಿ ಇರಲಿ ಎಂದು ಹಾರೈಸಿದರು.

ವಿರುಪಾಕ್ಷಯ್ಯ ಅವರು ಕಾರ್ಯಾಗಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾನೂನು ಅಂದರೆ ವಕೀಲರು ನ್ಯಾಯಾಧೀಶರು ಎಲ್ಲರೂ ಸೇರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಕೀಲ ಎಚ್ ಜಿ ಕೃಷ್ಣಮೂರ್ತಿ ಮಾತನಾಡಿ, ಕಳೆದ 10 ದಿನಗಳಿಂದಲೂ ಕಾರ್ಯಾಗಾರದಲ್ಲಿ ತಪಸ್ಸಿನಂತೆ ಕೆಲಸ ಮಾಡಿದ್ದಾರೆ ಎಂದು  ಸಂತಸಪಟ್ಟರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ವಕೀಲರಾದ ಎಂ ಎಸ್ ಸಾವಿತ್ರಿ ಮಾತನಾಡಿದರು.
ಇದೇ ವೇಳೆ ಕಾರ್ಯಾಗಾರದಲ್ಲಿ ಉಪನ್ಯಾಸ ಪಡೆದ ವಕೀಲ ಅಭ್ಯರ್ಥಿಗಳು ಲಾಗೈಡ್ ವೆಂಕಟೇಶ್ ಅವರಿಗೆ ಗೌರವಪೂರ್ವಕವಾಗಿ ಪ್ರೀತಿಯ ಕಾಣಿಕೆ ನೀಡಿ ತಮ್ಮ ಕೃತಜ್ಞತೆ ಸಲ್ಲಿಸಿದರು.

Key words : mysore- law-guide