ಮೈಸೂರು ಭೂ ಹಗರಣ: ನೆಪ ಮಾತ್ರಕ್ಕೆ ಸಮೀಕ್ಷೆ : ಇದರಲ್ಲಿ ಜಿಲ್ಲಾ ಮಂತ್ರಿಗಳ ಪಾತ್ರವೂ ಇದೆ-ವಾಟಾಳ್ ನಾಗರಾಜ್ ಆರೋಪ.

ಮೈಸೂರು,ಸೆಪ್ಟಂಬರ್,18,2021(www.justkannada.in) ಮೈಸೂರು ಭೂ ಹಗರಣ ವಿಚಾರ ಸಂಬಂಧ ತಮಗೆ ಬೇಕಾದ ಗುಲಾಮ ಅಧಿಕಾರಿಗಳನ್ನು ಇಲ್ಲಿ ಇಟ್ಟಿಕೊಂಡರು. ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿದರು. ಇದರಲ್ಲಿ ಜಿಲ್ಲಾ ಮಂತ್ರಿಗಳ ಪಾತ್ರವೂ ಇದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, ಮೈಸೂರು ಭೂ ಹಗರಣ ಮರು ತನಿಖೆಗೆ ಆಗ್ರಹಿಸಿದರು. ಭೂಹಗರಣದ ಬಗ್ಗೆ ಮನೀಷ ಮೌದ್ಗಲ್ ಸರ್ವೆ ಮಾಡಲು ಸಂಪೂರ್ಣ ಅಧಿಕಾರ ಇದೆ. ಅದು ಸರ್ವೆ ಇಲಾಖೆ. ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ವಿರುದ್ದ ಭೂ ಮಾಫಿಯಾದವರು ಸಾಕಷ್ಟು ಕೆಲಸ ಮಾಡಿದರು. ತಮಗೆ ಬೇಕಾದ ಗುಲಾಮ ಅಧಿಕಾರಿಗಳನ್ನು ಇಲ್ಲಿ ಇಟ್ಟಿಕೊಂಡರು. ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿದ್ದು, ಇದರಲ್ಲಿ ಜಿಲ್ಲಾ ಮಂತ್ರಿಗಳ ಪಾತ್ರವೂ ಇದೆ ಎಂದು ಆರೋಪಿಸಿದರು.

ನೀವು ಎರಡನೇ ತನಿಖೆ ಯಾಕೆ ವಿರೋಧ ಮಾಡಿದ್ರಿ. ತನಿಖೆ ಆಗಲಿ ಬಿಡಿ. ಮೊದಲ ತನಿಖೆ ಸತ್ಯವಾಗಿದೆಯೊ ಇಲ್ಲವೊ ಗೊತ್ತಾಗಲಿದೆ. ಎರಡನೆ ತನಿಖೆ ರದ್ದು ಮಾಡಿದ್ದು ಯಾರು. ನಿಮಗೆ ರದ್ದು ಮಾಡಲು ಯಾವ ನೈತಿಕ ಹಕ್ಕಿದೆ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಮೈಸೂರಿನಲ್ಲಿ ಭೂ ಮಾಫಿಯಾ ಹೆಚ್ಚಾಗಿದೆ. ಇದು ಗಂಭೀರ ಪರಿಸ್ಥಿತಿ. ಶಾಸನ ಸಭೆಯಲ್ಲೂ ಇದು ಚರ್ಚೆ ಆಗಲಿಲ್ಲ. ಇದು ಚರ್ಚೆ ಆಗಬೇಕಾಗಿತ್ತು‌. ಯಾರೊ ಒಬ್ಬ ಸದಸ್ಯ ರೋಹಿಣಿ ಸಿಂಧೂರಿ ಅವರ ವಿರುದ್ಧ ಗುಡುಗಿದ್ದಾರೆ. ಹಕ್ಕುಚ್ಯುತಿ ಇರೋದು ಸದನದ ತೊಂದರೆ ಆದಾಗ. ವೈಯಕ್ತಿಕವಾಗಿ ಅಲ್ಲ. ಶಾಸನ ಸಭೆ ಸ್ವಾರ್ಥಕ್ಕೆ ಬಳಕೆ ಆಗಿದೆ. ಶಾಸನ ಸಭೆ ದನದ ಕೊಟ್ಟಿಗೆಗಿಂತ  ಹಿಂದೆ ಬಿದ್ದಿದೆ‌. ಶಾಸನ ಸಭೆಗೆ ಗಾಂಭೀರ್ಯ, ಅದರ ಶಕ್ತಿ ದುರುಪಯೋಗ ಮಾಡಿಕೊಳ್ಳಬಾರದು. ಮನಿಷಾ ಮೌದ್ಗಿಲ್ ಸಮಿತಿ ತನಿಖೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಸಂಸದರು ಬಹಳ ಬೇಜವಾಬ್ದಾರಿ ಮಾತು ಆಡಿದ್ದಾರೆ. ಸಣ್ಣ ಮಕ್ಕಳು ಮಾತಾಡಿದಂತೆ ಮಾತಾಡಬಾರದು. ಸಂಸದ ಅಂದರೆ ಗ್ರಾಪಂ ಸದಸ್ಯ ಅಲ್ಲ‌. ಲೋಕಸಭಾ ಸದಸ್ಯ ಜವಾಬ್ದಾರಿಯಿಂದ ಮಾತಾನಾಡಬೇಕು. ನೀವು ಮೊದಲು ರಾಜೀನಾಮೆ ನೀಡಬೇಕಿತ್ತು. ಈಗ ಕೂಡಲೆ ರಾಜೀನಾಮೆ ನೀಡಬೇಕು. ನಿಮಗೆ ನೈತಿಕ ಹಕ್ಕಿಲ್ಲ‌ ಎಂದು ವಾಟಾಳ್ ನಾಗಾರಾಜ್ ಹರಿಹಾಯ್ದರು.

Key words: Mysore- land- scam-role -district ministers – – Vatal Nagaraj