ವ್ಯಕ್ತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 187 ನಾಣ್ಯಗಳನ್ನ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು.

ರಾಯಚೂರು, ನವೆಂಬರ್ 28, 2022 (www.justkannada.in): ರಾಯಚೂರಿನ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಒಟ್ಟು 187 ನಾಣ್ಯಗಳನ್ನು ಹೊರಗೆ ತೆಗೆದ ಸುದ್ದಿ ವರದಿಯಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದಂತಹ ವೈದ್ಯರ ಪ್ರಕಾರ, ರಾಯಚೂರಿನ ಲಿಂಗಸಗೂರಿನ 58 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಯಾವುದೋ ಒಂದು ರೀತಿಯ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ ಹಲವು ನಾಣ್ಯಗಳನ್ನು ನುಂಗಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಹಾಗೂ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಡಾ. ಈಶ್ವರ್ ಕಲಬುರಗಿ, ಡಾ. ಪ್ರಕಾಶ್ ಕಟ್ಟೀಮನಿ, ಅರವಳಿಕತೆ ತಜ್ಞರಾದ ಡಾ. ಅರ್ಚನಾ ಹಾಗೂ ಡಾ. ರೂಪಲ್ ಹುಲಕುಂದೆ ಅವರಿದ್ದರು.

ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ ಹೊರಗೆ ತೆಗೆದ ನಾಣ್ಯಗಳ ಪೈಕಿ 5 ರೂ. ಗಳ ೫೬ ನಾಣ್ಯಗಳು ಹಾಗೂ ರೂ.1 ರ ೮೦ ನಾಣ್ಯಗಳಿದ್ದವು. ಇವೆಲ್ಲಾ ಸೇರಿ ಬರೋಬ್ಬರಿ ಒಂದೂವರೆ ಕೆಜಿ ತೂಕವಿತ್ತಂತೆ.

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಲಾಯಿತು. ಕ್ಷ-ಕಿರಣ ಹಾಗೂ ಎಂಡೋಸ್ಕೋಪಿಕ್ ಚಿತ್ರಗಳ ಮೂಲಕ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಪತ್ತೆಯಾಗಿದೆ. “ಆತನನ್ನು ರಕ್ಷಿಸಲು ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿತ್ತು. ಆತನನ್ನು ಆಸ್ಪತ್ರೆಗೆ ಕರೆತಂದಾಗ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ನಾಣ್ಯಗಳನ್ನು ಹೊರಕ್ಕೆ ತೆಗೆಯಲಾಗಿದೆ,” ಎಂದು ಮಾಧ್ಯಮಕ್ಕೆ ಡಾ. ಈಶ್ವರ್ ಕಲಬುರಗಿ ಅವರು ಮಾಹಿತಿ ನೀಡಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  doctor -successfully -removed -187 coins – man’s- stomach