ಆಕರ್ಷಕ ಚನ್ನಪಟ್ಟಣ ಗೊಂಬೆಗಳ ಅಂದಕ್ಕೆ ಮನಸೋತ ಯದುವೀರ್ ತ್ರಿಷಿಕಾ ದಂಪತಿ….

ಮೈಸೂರು,ಜನವರಿ,23,2021(www.justkannada.in):  ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ತಯಾರಾಗುವ ಮರದ ಗೊಂಬೆಗಳಿಗೆ ಆಕರ್ಷಿತರಾಗದವರೇ ಇಲ್ಲ. ಬಣ್ಣ ಬಣ್ಣದ ಗೊಂಬೆಗಳು, ವಿಶಿಷ್ಟ ಕೆತ್ತನೆ, ಆಕರ್ಷಕ ಬಣ್ಣ, ವಿನ್ಯಾಸಗಳಿಂದ ಎಲ್ಲರ ಮನಸೂರೆಗೊಳಿಸುವ ಈ ಚನ್ನಪಟ್ಟಣದ ಗೊಂಬೆಗಳಿಗೆ ಇದೀಗ  ಮೈಸೂರು ರಾಜವಂಶಸ್ಥ ಯದುವೀರ್- ತ್ರಿಷಿಕಾಕುಮಾರಿ ದಂಪತಿ ಮನಸೋತಿದ್ದಾರೆ.

ಹೌದು ದೇಶ-ವಿದೇಶದಲ್ಲೂ ಈ ಗೊಂಬೆಗಳು ಸದ್ದು ಮಾಡಿದ್ದವು. ಇಂದಿಗೂ ಬಹು ಬೇಡಿಕೆಯುಳ್ಳ ಚನ್ನಪಟ್ಟಣದ ಮರದ ಗೊಂಬೆಗಳ ಅಂದಕ್ಕೆ ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ತ್ರಿಷಿಕಾ ಕುಮಾರಿ  ದಂಪತಿ ಆಕರ್ಷಿತರಾಗಿದ್ದಾರೆ.

ಯದುವೀರ್-ತ್ರಿಷಿಕಾ ಕುಮಾರಿ ಒಡೆಯರ್ ದಂಪತಿ ಚನ್ನಪಟ್ಟಣದ ಮಹದೇಶ್ವರ ದೇವಾಲಯದ ಬಳಿಯಿರುವ ಕ್ರಾಫ್ಟ್ ಪಾರ್ಕ್‌ಗೆ ಭೇಟಿ ನೀಡಿ  ಗೊಂಬೆ ಮಾರಾಟ ಮಳಿಗೆಗಳಲ್ಲಿರುವ ಚನ್ನಪಟ್ಟಣದ ಗೊಂಬೆಗಳನ್ನು ವೀಕ್ಷಿಸಿದರು. ಈ ವೇಳೆ ಕ್ರಾಫ್ಟ್ ಪಾರ್ಕ್ ಮ್ಯಾನೇಜರ್ ಶಾಂತಯ್ಯ,  ಯದುವೀರ್ ದಂಪತಿಗೆ ಕ್ರಾಫ್ಟ್ ಪಾರ್ಕ್ ಬಗ್ಗೆ ಮಾಹಿತಿ ನೀಡಿ, ಗೊಂಬೆ ತಯಾರಿಕೆ ಬಗ್ಗೆ ವಿವರಿಸಿದರು. ಜತೆಗೆ ಮಾರಾಟಗಾರರಿಂದಲೂ ಗೊಂಬೆಗಳ ಬಗ್ಗೆ ಯದುವೀರ್ –ತ್ರಿಷಿಕಾ ದಂಪತಿ ಮಾಹಿತಿ ಕಲೆಹಾಕಿದರು.

ಬೊಂಬೆಗೆ ತಾವೇ ಬಣ್ಣ ಬಳಿಯುವ ಮೂಲಕ ಕರಕುಶಲತೆ ಅನುಭವ ಪಡೆದುಕೊಂಡ ತ್ರಿಷಿಕಾ ಕುಮಾರಿ ಒಡೆಯರ್

ಇನ್ನು ತಯಾರಿಕಾ ಘಟಕದಲ್ಲಿ ಕುಶಲಕರ್ಮಿಗಳು ಕೆತ್ತನೆಗೆ ಬಳಸುವ ಯಂತ್ರದ ಬಳಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ತಾವೇ ಸ್ವತಃ ಬೊಂಬೆ ತಯಾರಿಸುವ ಮೂಲಕ ಕರಕುಶಲತೆಯ ಅನುಭವ ಪಡೆದುಕೊಂಡರು. ಇಲ್ಲಿನ ಬಣ್ಣಗಳಿಗೆ ನೈಸರ್ಗಿಕವಾದ ಅರಗಿನಿಂದ ಬಣ್ಣ ಬಳಿಯಲಾಗಿತ್ತಿದ್ದು, ಈ ನಡುವೆ ತ್ರಿಷಿಕಾ ಕುಮಾರಿ ತಾವೇ ಆಟಿಕೆ ಹಾಗೂ ಗೊಂಬೆಯೊಂದಕ್ಕೆ ಬಣ್ಣ ಬಳಿದರು.mysore- Dynasty-Yaduveer -Trishika - lovely - Channapatnam dolls.

ನಂತರ ಈ ಕುರಿತು ಮಾತನಾಡಿದ ಯದುವೀರ್ ದಂಪತಿ, ರಾಸಾಯನಿಕ ಬಣ್ಣ ಮಿಶ್ರಿತ ಆಟಿಕೆಗಳಿಗಿಂತ ಚನ್ನಪಟ್ಟಣ ಬೊಂಬೆಗಳು ಹೆಚ್ಚು ಸುರಕ್ಷಿತವಾಗಿವೆ.  ಇಲ್ಲಿನ ಕರಕುಶಲತೆಯನ್ನು ಖುದ್ದು ವೀಕ್ಷಿಸುವ ಉದ್ದೇಶದಿಂದ ಇಲ್ಲಿಗೆ ಆಗಮಿಸಿದ್ದೇವೆ. ದೇಶಿ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಸಾಂಪ್ರದಾಯಿಕ ಕಲೆಯಾದ ಬೊಂಬೆ ತಯಾರಿಕೆಯನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.

Key words: mysore- Dynasty-Yaduveer -Trishika – lovely – Channapatnam dolls.