ಮುಡಾದಿಂದ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 100 ಕೋಟಿ ರೂ ಮೌಲ್ಯದ 47 ನಿವೇಶನ ವಶ.

ಮೈಸೂರು,ಡಿಸೆಂಬರ್,18,2021(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇಂದು ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದು  100 ಕೋಟಿ ರೂ. ಮೌಲ್ಯದ 47 ನಿವೇಶನಗಳನ್ನ ವಶಕ್ಕೆ ಪಡೆದಿದೆ.

ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ಮೂಡಾ ಆಯುಕ್ತ ಡಾ.ಡಿ.ಬಿ.ನಟೇಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.  ಬಸವನಹಳ್ಳಿ ಸರ್ವೆ ನಂ.188 ರಲ್ಲಿ 5 ಎಕರೆ 14 ಗುಂಟೆ ಜಮೀನು ಮೂಡಾ ವಶಕ್ಕೆ ಪಡೆಯಲಾಯಿತು.  50×80 ಅಳತೆಯ 11 ನಿವೇಶನ ಹಾಗೂ 40×60 ಅಳತೆಯ 36 ನಿವೇಶನದ ಜಮೀನು, ಒಟ್ಟು ನೂರು ಕೋಟಿ ರೂ. ಮೌಲ್ಯದ ಸ್ವತ್ತು ಇದಾಗಿದೆ.

ವಿಜಯನಗರ 4 ನೇ ಹಂತ, 2 ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 1991 ಡಿಸೆಂಬರ್ 23 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಸ್ವಾಧೀನ ಪಡೆಸಿಕೊಂಡಿತ್ತು. ಭೂ ಮಾಲೀಕರಿಗೆ ಪರಿಹಾರ ಹಣ ಪಾವತಿ ನಂತರ ಮಹದೇವಯ್ಯ ಎಂಬುವರು ಕ್ರಯದ ಒಪ್ಪಂದ ಮಾಡಿಕೊಂಡಿದ್ದರು.

ಈ ಮಧ್ಯೆ ಸಿವಿಲ್‌ ನ್ಯಾಯಾಲಯದಲ್ಲಿ ಮೂಡಾ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ತೆರವು ಮಾಡಲಾಯಿತು. ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂಡಾ ಅಧಿಕಾರಿಗಳು ಭಾಗಿಯಾಗಿದ್ದರು.

Key words: mysore-clearance- operation – Muda- worth -Rs 100 crore-47 houses