ಪ್ರವೇಶ ಶುಲ್ಕ ಹೆಚ್ಚಳ ಮಾಡಿದ ಮೈಸೂರು ಚಾಮರಾಜೇಂದ್ರ ಮೃಗಾಲಯ…

ಮೈಸೂರು,ಜೂ.,25,2019(www.justkannada.in):  ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುವುದ ಜತೆಗೆ ನಿರ್ವಹಣೆಯ ವೆಚ್ಚ ಸರಿದೂಗಿಸಲು ಮೈಸೂರು ಚಾಮರಾಜೇಂದ್ರ ಮೃಗಾಲಯ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದ್ದು, ಈ ಹಿನ್ನೆಲೆ ಜೂ.1ರಿಂದಲೇ ಪ್ರವೇಶ ಶುಲ್ಕ ಹೆಚ್ಚಳ ಮಾಡಿದೆ.

ಮೈಸೂರು  ಮೃಗಾಲಯ ಹೊಸ ಪ್ರಾಣಿಗಳನ್ನು ತರುವುದರೊಂದಿಗೆ ಮೃಗಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಸಮಾರೋಪಾದಿಯಲ್ಲಿ ನಡೆಸುತ್ತಿದ್ದು, ಸಂಪನ್ಮೂಲ ಕ್ರೂಡೀಕರಣಕ್ಕೆ ಮುಂದಾಗಿದೆ.  ಇದಕ್ಕಾಗಿ ಪ್ರವಾಸಿಗರ ಪ್ರವೇಶ ಶುಲ್ಕವನ್ನು ಹೆಚ್ಚಿಸಿದೆ. ಈ ಹಿಂದೆ ವಾರದ ದಿನಗಳಲ್ಲಿ ಜಾರಿಯಲ್ಲಿದ್ದ ವಯಸ್ಕರಿಗೆ 60 ರೂ. ಟಿಕೆಟ್ ದರವನ್ನು 80 ರೂ., ವಾರಾಂತ್ಯದ ದಿನಗಳಲ್ಲಿದ್ದ 80ರೂ., ಅನ್ನು, 100 ರೂ.ಗೆ ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ ಸಾಮಾನ್ಯ ದಿನಗಳಲ್ಲಿ 40 ರೂ, ವಾರಾಂತ್ಯ ದಿನಗಳಲ್ಲಿ 50 ರೂ. ಪ್ರವೇಶ ಶುಲ್ಕ ನಿಗಧಿ ಪಡಿಸಲಾಗಿದೆ. ಪರಿಷ್ಕೃತ ದರವೂ ಜೂ.1ರಿಂದಲೇ ಜಾರಿಗೊಂಡಿದೆ. ಕಳೆದ ವರ್ಷ 10ರೂ.ಹೆಚ್ಚಳ ಮಾಡಲಾಗಿದ್ದನ್ನು ಸ್ಮರಿಸಬಹುದು.

ಈ ಕುರಿತು  ಮಾತನಾಡಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದ್ದು, ಇದರೊಂದಿಗೆ ಮೃಗಾಲಯಕ್ಕೆ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಪ್ರಾಣಿಗಳನ್ನು ತರಲಾಗುತ್ತಿದೆ. ಅಲ್ಲದೆ ಮೃಗಾಲಯದಲ್ಲಿರುವ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಪ್ರಾಣಿಗಳ ಮನೆ ನವೀಕರಣ, ಕೆಲವು ಅಭಿವೃದ್ಧಿ ಕಾರ್ಯ ಕೈಗೊಂಡು, ಪ್ರವಾಸಿಗರಿಗೆ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದರಿಂದ ಸಂಪನ್ಮೂಲ ಕ್ರೂಡೀಕರಣ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ ಎಂದು  ತಿಳಿಸಿದ್ದಾರೆ.

Key words: Mysore Chamarajendra Zoo-, increased – entrance fee.