ಸರ್ಕಾರಿ ನೌಕರರು ನೂರಕ್ಕೆ ನೂರರಷ್ಟು ಮೋಸ ಹೋಗಿದ್ದೇವೆ: ಶೇ.17 ರಷ್ಟು ಮಧ್ಯಂತರ ವೇತನ ಹೆಚ್ಚಳಕ್ಕೆ ಸಚಿವಾಲಯ ನೌಕರರ ಸಂಘ ವಿರೋಧ.

ಬೆಂಗಳೂರು,ಮಾರ್ಚ್,1,2023(www.justkannada.in): ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದು ಶೇ.17 ರಷ್ಟು ಮಧ್ಯಂತರ ವೇತನ ಹೆಚ್ಚಿಸಿದ ರಾಜ್ಯ ಸರ್ಕಾರದ ವಿರುದ್ಧ ಸಚಿವಾಲಯ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಶೇ.17 ರಷ್ಟು ಮಧ್ಯಂತರ ವೇತನ ಹೆಚ್ಚಳಕ್ಕೆ ಸಚಿವಾಲಯ ನೌಕರರ ಸಂಘ ವಿರೋಧ ವ್ಯಕ್ತಪಡಿಸಿದ್ದು ಇದು ಸರ್ಕಾರಿ ನೌಕರರಿಗೆ ಮಾಡಿದ ಮೋಸ ಎಂದು ಟೀಕಿಸಿದೆ. ಶೇ.25 ರಷ್ಟು ಮಧ್ಯಂತರ ಪರಿಹಾರಕ್ಕೆ ಬಿಗಿಪಟ್ಟು ಹಿಡಿದಿದೆ.

ಈ ಕುರಿತು ಮಾತನಾಡಿದ  ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ,  ರಾಜ್ಯ ಸರ್ಕಾರ ನಮಗೆ ಮೋಸ ಮಾಡಿದೆ. ಎನ್ ಪಿಎಸ್ ವಿರುದ್ದ ನಾವು ಹೋರಾಟಕ್ಕೆ ಕೈಜೋಡಿಸಿದ್ದವು. ರಾಜ್ಯ ಸರ್ಕಾರದ ನಿರ್ಧಾರವನ್ನ ನಾವು ಒಪ್ಪುವುದಿಲ್ಲ. ಸಚಿವಾಲಯದ ಸಿಬ್ಬಂದಿ ವಿರೋಧ ವ್ಯಕ್ತಪಡಿಸುತ್ತೇವೆ. ವಿಧಾನಸಭೆ, ವಿಧಾನಪರಿಷತ್ ಸಚಿವಾಲಯದ ಸಿಬ್ಬಂದಿ ಇದನ್ನ ಒಪ್ಪುವುದಿಲ್ಲ. ಷಡಕ್ಷರಿ ಹೋರಾಟವನ್ನ ಸೂಕ್ತ ರೀತಿಯಲ್ಲಿ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಎಲ್ಲಾ ನೌಕರರು ಒಗ್ಗೂಡಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದ್ದವು ಆದರೆ ಸಿಎಸ್ ಷಡಕ್ಷರಿ ಎಡವಿದ್ದಾರೆ ಎಂದುಆಕ್ರೋಶ ವ್ಯಕ್ತಪಡಿಸಿದರು.

ಸೂಕ್ತರೀತಿಯಲ್ಲಿ ಹೋರಾಟ ಮುಂದುವರೆಸಿದ್ದರೆ ಶೇ.25 ರಷ್ಟು ಹೆಚ್ಚಳವಾಗುತ್ತಿತ್ತು. ವೇತನ ಹೆಚ್ಚಳಕ್ಕಿಂತ ನಮಗೆ ಒಪಿಎಸ್ ಜಾರಿ ಮುಖ್ಯವಾಗಿತ್ತು. 2022ರ ಜುಲೈ 1ಕ್ಕೆ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಬೇಕುತ್ತು.  ಆದರೆ ಸರ್ಕಾರ ನಡೆಸುವವರು ಜಾಣರಿದ್ದಾರೆ. ಎನ್ ಪಿಎಸ್ ವಿಚಾರದಲ್ಲೂ ಜಾಣ ನಡೆ ತೋರಿದ್ದಾರೆ. ರಾಜ್ಯ ಸರ್ಕಾರಿ ನೌಕರರು ನೂರಕ್ಕೆ ನೂರರಷ್ಟು ಮೋಸ ಹೋಗಿದ್ದೇವೆ ಎಂದು ಗುರುಸ್ವಾಮಿ ಕಿಡಿಕಾರಿದ್ದಾರೆ.

Key words: Ministry -Employees -Union -Opposition – 17% Interim –Salary- Hike