ಸೆ.25 ರಂದು ಹದಿನಾರು ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ.

ಮೈಸೂರು ಸೆಪ್ಟಂಬರ್,22,2021(www.justkannada.in):  ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಸೆಪ್ಟಂಬರ್.25 ರ ಶನಿವಾರ ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ವತಿಯಿಂದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಂಜನಗೂಡು ತಾಲೂಕು ಕಾನೂನು ಸಮಿತಿ, ಮೈಸೂರಿನ ಜೆಎಸ್‍ಎಸ್ ಕಾನೂನು ಕಾಲೇಜು ಇವರ ಸಹಯೋಗದಲ್ಲಿ ಬೆಳಗ್ಗೆ 10.30 ಕ್ಕೆ ಗ್ರಾಮದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ .

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಲ್.ರಘುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಅಲ್ಲಮ ಪೌಂಡೇಷನ್ ಅಧ್ಯಕ್ಷರಾದ ಚಿನ್ನಸ್ವಾಮಿ ವಡ್ಡಗೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದೇವರಾಜ ಭೂತೆ , ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ , ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಣಪತಿ ಪ್ರಶಾಂತ್ , ಜೆಎಸ್‍ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್ ಹಾಗೂ ಹದಿನಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅವಿನಾಶ್ ಎಚ್.ಜಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಶೇಖರ್.ಪಿ ಉಪಸ್ಥಿತರಿರುತ್ತಾರೆ.

ಗ್ರಾಮಾಂತರ ಪ್ರದೇಶದ ದೈನಂದಿನ ಜೀವನ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ . ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾನೂನು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ .

ವಿದ್ಯಾರ್ಥಿಗಳಿಗೆ , ಕೃಷಿಕರಿಗೆ , ಕೂಲಿ ಕಾರ್ಮಿಕರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಮೂಲಕ ಗ್ರಾಮೀಣ ಜೀವನ ಮಟ್ಟವನ್ನು ಸುಧಾರಿಸಲು ಅಲ್ಲಮ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಷನ್ ಈ ಶಿಬಿರ ಏರ್ಪಡಿಸಿದೆ ಎಂದು ಫೌಂಡೇಷನ್ ಸಂಚಾಲಕ ಎಸ್.ಪಿ.ಮಧು ತಿಳಿಸಿದ್ದಾರೆ .

ಗ್ರಾಮಸ್ಥರು , ಕಾನೂನು ನೆರವು ಬೇಕಾದ ಅಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Key words: Legal –awarness-Program -hadinaru -Village –mysore-September 25th.