ತಲಕಾವೇರಿಯಲ್ಲಿ ತೀರ್ಥೋದ್ಭವ ಸಂಭ್ರಮ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಮಾತೆ ಕಾವೇರಿ…

ಕೊಡಗು,ಅ,18,2019(www.justkannada.in): ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ನಸುಕಿನ ಜಾವ 12:57ಕ್ಕೆ ತೀರ್ಥೋದ್ಭವವಾಗಿದ್ದು, ಸಾವಿರಾರು ಭಕ್ತರಿಗೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು.

ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಮಧ್ಯರಾತ್ರಿ ತೀರ್ಥೋದ್ಭವವಾಗಿದ್ದು, ಸಾವಿರಾರೂ ಭಕ್ತರು ಈ ಪವಿತ್ರ ದೃಶ್ಯವನ್ನು ಕಣ್ತುಂಬಿಕೊಂಡರು. ರೋಹಿಣಿ ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ ನಸುಕಿನ ಜಾವ 12:57ಕ್ಕೆ ಪುಣ್ಯಕ್ಷೇತ್ರ  ತೀರ್ಥೋದ್ಭವವಾಗಿದ್ದು, ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿ ದರ್ಶನ ನೀಡಿದಳು.

ಮಾತೆ ಕಾವೇರಿಗೆ ಅಲ್ಲಿ ನೆಲೆಸಿದ್ದ ಭಕ್ತರು ಜೈಕಾರ ಕೂಗಿದರು. ಈ ವೇಳೆ ಅರ್ಚಕರು ಭಕ್ತರೆಡೆಗೆ ತೀರ್ಥಪ್ರೋಕ್ಷಣೆ ಮಾಡಿದರು.  ಇನ್ನು ರಾತ್ರಿ ಹತ್ತು ಗಂಟೆಯಿಂದ ಪೂಜಾ ಕಾರ್ಯ ನೆರವೇರಿದ್ದು, ಬ್ರಹ್ಮ ಕುಂಡಿಕೆಯಿಂದ  ಭಕ್ತರು ತೀರ್ಥ ಸಂಗ್ರಹಿಸಿ ಕುಂಡಿಕೆ ಎದುರಿನ ಕೊಳದಲ್ಲಿ ಪುಣ್ಯ ಸ್ನಾನ ಮಾಡಿದರು.

ತೀರ್ಥೋದ್ಭವದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್.‌ ಅಶೋಕ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಇನ್ನು ತೀರ್ಥೋದ್ಭವ ಘಳಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

Key words: kodagu-celebration – Talacauvery-devotee